ಪ್ರಜ್ವಲ್ ದೇವರಾಜ್ ಅವರಿಗೆ ಆರಂಭ ಅದ್ಭುತವಾಗಿತ್ತು. ಸಿಕ್ಸರ್ ಮತ್ತು ಗೆಳೆಯ ಎಂಬ ಎರಡು ಬ್ಲಾಕ್ ಬಸ್ಟರ್ ಸಿಕ್ಕಿದ್ದವು. ಆದರೆ ಅದಾದ ಮೇಲೆ ದುರದೃಷ್ಟ ಬೆನ್ನೇರಿದ್ದು ಇವತ್ತಿಗೂ ಇಳಿದಿಲ್ಲ. ಸೋಲು ಮತ್ತು ಪ್ರಜ್ವಲ್ ಕೆರಿಯರ್ ಎರಡೂ ಒಟ್ಟೊಟ್ಟಿಗೇ ಸಾಗುತ್ತಿವೆ. ಹೀಗಿರುವಾಗ ಪ್ರಜ್ವಲ್ ದೇವರಾಜ್ ಅವರಿಗೆ ಒಂದು ಹಂತದ ಹಿಟ್ ಕೊಟ್ಟಿದ್ದದು ಇನ್ಸ್‌ಪೆಕ್ಟರ್ ವಿಕ್ರಂ. ಅದಕ್ಕೇ ಏನೋ.. ಈಗ ಮತ್ತೊಮ್ಮೆ ರಾಕ್ಷಸ ಅನ್ನೋ ಸಿನಿಮಾ ಎತ್ತಿಕೊಂಡಿದ್ಧಾರೆ. ಇದರಲ್ಲಿರೋ ಒಂದು ವಿಶೇಷವೆಂದರೆ.. ಎರಡೂ ಶಿವಣ್ಣನ ಹಳೆಯ ಹಿಟ್ ಸಿನಿಮಾಗಳ ಟೈಟಲ್ ಎನ್ನುವುದು.
ಪ್ರಜ್ವಲ್ ದೇವರಾಜ್ ಅವರೇನೋ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ಧಾರೆ. ಬಹುಶಃ ಕನ್ನಡದಲ್ಲಿ ಶಿವಣ್ಣ ಬಿಟ್ಟರೆ ಅತೀ ಹೆಚ್ಚು ಬ್ಯುಸಿಯಾಗಿರುವ ನಟ ಪ್ರಜ್ವಲ್ ದೇವರಾಜ್. ಇಂತಹ ಪ್ರಜ್ವಲ್ ಇದೀಗ ಮತ್ತೊಮ್ಮೆ ಶಿವಣ್ಣ ಚಿತ್ರದ ಟೈಟಲ್ ಎರವಲು ಪಡೆದಿದ್ದಾರೆ. 2021ರಲ್ಲಿ ಇನ್ಸ್ʻಪೆಕ್ಟರ್ ವಿಕ್ರಂ ಚಿತ್ರ ಮಾಡಿ ಒಂದು ಹಂತಕ್ಕೆ ಗೆದ್ದಿದ್ದರು ಪ್ರಜ್ವಲ್. ಶಿವಣ್ಣ ಅಭಿನಯದ ಸೂಪರ್ ಹಿಟ್ ಸಿನಿಮಾ ಹೆಸರು ಇನ್ಸ್ʻಪೆಕ್ಟರ್ ವಿಕ್ರಂ. ಇದೀಗ ಮತ್ತೊಮ್ಮೆ ಶಿವಣ್ಣ ಚಿತ್ರದ ಹೆಸರು ಎರವಲು ಪಡೆದಿದ್ದಾರೆ ಪ್ರಜ್ವಲ್. ಟೈಟಲ್ ರಾಕ್ಷಸ.
ಅಂದಹಾಗೆ ಇದೂ ಕೂಡಾ ಇನ್ಸ್ʻಪೆಕ್ಟರ್ ವಿಕ್ರಂನಂತೆ ಪೊಲೀಸ್ ಜಾನರ್ ಚಿತ್ರವೇ. ಆದರೆ ಕಾಮಿಡಿ ಜಾನರ್ ಅಲ್ಲ. 2005ರಲ್ಲಿ ರಾಕ್ಷಸ ಸಿನಿಮಾ ಬಂದಿತ್ತು. ಸಾಧುಕೋಕಿಲ ಡೈರೆಕ್ಷನ್. ಕೋಟಿ ರಾಮು ನಿರ್ಮಾಪಕರಾಗಿದ್ದರು. ಚಿತ್ರ ಅತ್ತ ಲಾಸ್ ಕೂಡಾ ಆಗಲಿಲ್ಲ. ಭರ್ಜರಿ ಹಿಟ್ ಕೂಡಾ ಆಗಲಿಲ್ಲ. ಇದೀಗ ಮತ್ತೊಮ್ಮೆ ರಾಕ್ಷಸ ಅನ್ನೋ ಟೈಟಲ್ಲಿನ ಸಿನಿಮಾ ಸೆಟ್ಟೇರಿದೆ.
ಮಮ್ಮಿ’ ಖ್ಯಾತಿಯ ನಿರ್ದೇಶಕ ಲೋಹಿತ್ ನಿರ್ದೇಶನದಲ್ಲಿ ಪ್ರಜ್ವಲ್ ಹೀರೋ ಆಗಿದ್ದಾರೆ. ಕಾಪ್ಟರ್ ಹಾಗೂ ಮಾಫಿಯಾ ಸಿನಿಮಾಗಳನ್ನು ಬಹುತೇಕ ಕಂಪ್ಲೀಟ್ ಮಾಡಿರುವ ಲೋಹಿತ್, ರಾಕ್ಷಸ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಬಂದೂಕು ಹಿಡಿದ ಕೈಯ್ಯೊಂದರ ಬೆರಳನ್ನು ಪುಟ್ಟ ಮಗುವೊಂದು ಹಿಡಿದುಕೊಂಡಿರುವ ಪೋಸ್ಟರ್ʻನಲ್ಲಿ ಟ್ಯಾಟೂಗಳು ಎದ್ದು ಕಾಣುತ್ತಿವೆ.
ಲೋಹಿತ್ ಹಾಗೂ ಪ್ರಜ್ವಲ್ ಒಟ್ಟಿಗೆ ಕೆಲಸ ಮಾಡಿರುವ ‘ಮಾಫಿಯಾ’ ಸಿನಿಮಾದ ಚಿತ್ರೀಕರಣ ಪೂರ್ಣವಾಗಿದೆ. ಆದರೆ ಆ ಸಿನಿಮಾ ಬಿಡುಗಡೆಗೆ ಮೊದಲೇ ಇದೀಗ ‘ರಾಕ್ಷಸ’ ಸಿನಿಮಾಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಚಿತ್ರರಂಗದ 40 ನಿರ್ದೇಶಕರು ಪೋಸ್ಟರ್ ರಿಲೀಸ್ ಮಾಡಿದ್ದು, ಉಳಿದಂತೆ ಚಿತ್ರದ ಯಾವ ಮಾಹಿತಿಯನ್ನೂ ಲೋಹಿತ್ ಬಿಟ್ಟುಕೊಟ್ಟಿಲ್ಲ.
ಶಿವಣ್ಣ ಅಭಿನಯದ ಹಿಟ್ ಸಿನಿಮಾಗಳ ಹೆಸರನ್ನು ಹಲವರು ಬಳಸಿಕೊಂಡಿದ್ದಾರೆ. ಆದರೆ ಎಲ್ಲರಿಗೂ ಗೆಲುವು ಸಿಕ್ಕಿಲ್ಲ. ಶಿವಣ್ಣನ ಹಳೆಯ ಸಿನಿಮಾಗಳ ಟೈಟಲ್ಲುಗಳು ಸಿನಿಮಾಗಳಾಗಿವೆ. ಇನ್ಸ್ʻಪೆಕ್ಟರ್ ವಿಕ್ರಂ ಮತ್ತೀಗ ರಾಕ್ಷಸ. ಎರಡಕ್ಕೂ ಪ್ರಜ್ವಲ್ ಹೀರೋ. ಅಲ್ಲದೆ ಸಂಯುಕ್ತ, ಪುರುಷೋತ್ತಮ ಟೈಟಲ್ಲುಗಳನ್ನೂ ಮತ್ತೆ ಇಟ್ಟು ಸಿನಿಮಾ ಮಾಡಿದ್ಧಾರೆ.



