ಹಲವು ನಟ ನಟಿ, ತಂತ್ರಜ್ಞರು ಒಂದೊಂದು ಪಕ್ಷದ ಪರ ಗುರುತಿಸಿಕೊಂಡಿದ್ಧಾರೆ. ಕಾಂಗ್ರೆಸ್ ಪರ ಚಿತ್ರರಂಗದ ಹಲವರಿದ್ಧಾರೆ. ಸಾಧು ಕೋಕಿಲ, ಮಧು ಬಂಗಾರಪ್ಪ, ಎಸ್.ನಾರಾಯಣ್, ಜಯಮಾಲಾ, ಉಮಾಶ್ರೀ.. ಮೊದಲಾದವರಿದ್ದರೆ.. ಬಿಜೆಪಿ ಪರ ಸುಮಲತಾ ಅಂಬರೀಷ್, ತಾರಾ ಅನುರಾಧ, ಯೋಗೀಶ್ವರ್, ಜಗ್ಗೇಶ್, ಶಶಿಕುಮಾರ್ ಮುಂತಾದವರಿದ್ಧಾರೆ. ನಟ ಸುದೀಪ್, ಯಶ್, ದರ್ಶನ್ ಪ್ರಚಾರ ಮಾಡುತ್ತಾರಾದರೂ.. ಯಾವ ಪಕ್ಷದ ಜೊತೆಯಲ್ಲೂ ʻಅಧಿಕೃತʼವಾಗಿ ಗುರುತಿಸಿಕೊಂಡಿಲ್ಲ.
ಇನ್ನು ನರೇಂದ್ರ ಮೋದಿ, ದೇಶದ ಪ್ರಧಾನಿಯಾಗಿರಬಹುದು. ದೇಶದ ಜನ ಎರಡು ಬಾರಿ ಸಂಪೂರ್ಣ ಬಹುಮತ ನೀಡಿ ಗೆಲ್ಲಿಸಿರಬಹುದು. ಆದರೆ.. 3ನೇ ಬಾರಿ ಗೆಲ್ಲುವುದಕ್ಕೆ ನಡೆಯುತ್ತಿರುವ ಹೋರಾಟ ಅಷ್ಟು ಸುಲಭವಲ್ಲ. ಅದು ನಿರ್ಧಾರವಾಗುವುದು ಜೂನ್ ೪ಕ್ಕೇ ಆದರೂ.. ಹೋರಾಟ ನಡೆಯುತ್ತಿದೆ. ಕನ್ನಡದಲ್ಲಿಯೂ ಪರ ವಿರೋಧ ಹೋರಾಟ ಇದೆ.
ಶಿವ ರಾಜ್ ಕುಮಾರ್ ಅವರೇನೋ, ಕಾಂಗ್ರೆಸ್ʻನಿಂದ ಸ್ಪರ್ಧೆ ಮಾಡಿರುವ ಗೀತಾ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿದ್ಧಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಜೊತೆ ಎಲೆಕ್ಷನ್ ಪ್ರಚಾರದ ವೇದಿಕೆ ಹಂಚಿಕೊಂಡಿದ್ಧಾರೆ. ರಾಹುಲ್ ಗಾಂಧಿ ನನ್ನ ಮೆಚ್ಚಿನ ಲೀಡರ್ ಎನ್ನುತ್ತಿದ್ಧಾರೆ. ಆದರೆ.. ಶಿವಣ್ಣ ಅಧಿಕೃತವಾಗಿ ಕಾಂಗ್ರಸ್ ಸದಸ್ಯರಲ್ಲ. ಇನ್ನು ನಟ ದುನಿಯಾ ವಿಜಯ್ ಅವರು ಬಹಿರಂಗವಾಗಿಯೇ ಗೀತಾ ಪರ ಪ್ರಚಾರ ಮಾಡುತ್ತಿದ್ದಾರೆ.
ಆದರೆ.. ನಟರಾದ ಪ್ರಕಾಶ್ ರೈ ಮತ್ತು ಕಿಶೋರ್ ಯಾವುದೇ ಪಕ್ಷದ ಪರ ಪ್ರಚಾರದಲ್ಲಿ ಗುರುತಿಸಿಕೊಳ್ಳದೆ.. ಮೋದಿ ವಿರುದ್ಧ ನಿಂತಿರುವುದು ವಿಶೇಷ. ನಟ ಪ್ರಕಾಶ್ ರೈ ಆಗಾಗ್ಗೆ ಪ್ರೆಸ್ ಮೀಟ್ ಮಾಡಿ, ಯಾವುದೇ ವೇದಿಕೆ ಸಿಕ್ಕರೂ ಮಾತನಾಡುತ್ತಾ.. ಮೋದಿಯನ್ನು ಅವನು.. ಇವನು.. ಎಂದೇ ಏಕವಚನದಲ್ಲಿ ತರಾಟೆಗೆ ತೆಗೆದುಕೊಳ್ಳುತ್ತಾರೆ. ಇನ್ನೊಬ್ಬ ಕಲಾವಿದ ಕಿಶೋರ್ ಕೂಡಾ ಹಿಂದೆ ಬಿದ್ದಿಲ್ಲ. ಇವರೂ ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲವಾದರೂ.. ಮೋದಿ ವಿರೋಧಿ ಎಂದೇ ಖ್ಯಾತರಾಗಿದ್ಧಾರೆ. ಕಿಶೋರ್ ಬೆಂಕಿಯುಗುಳುವುದು ಸೋಷಿಯಲ್ ಮೀಡಿಯಾದಲ್ಲಿ.
ಪರ ವಿರೋಧ.. ಎರಡನ್ನೂ ಎದುರಿಸುತ್ತಿರುವ ಈ ಇಬ್ಬರೂ ನಟರ ಪರ ಹಾಗೂ ವಿರುದ್ಧ ಜನಾಭಿಪ್ರಾಯಗಳೂ ಇವೆ. ಅಂದ ಹಾಗೆ ಯಾವ ಪಕ್ಷಕ್ಕೂ ಅಧಿಕೃತವಾಗಿ ಸೇರಿಕೊಳ್ಳದೆ, ಸದಸ್ಯರಾಗದೆ.. ತಾವು ಮೋದಿ ವಿರೋಧಿಗಳು ಎಂದು ಬಹಿರಂಗವಾಗಿ ಹೇಳಿಕೊಳ್ಳುವವರು ಇವರು ಮಾತ್ರ.
ಪ್ರಕಾಶ್ ರೈ ಮತ್ತು ಕಿಶೋರ್ ಇಬ್ಬರೂ ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿಯೇ ನಿಂದಿಸುತ್ತಾರೆ. ಬೈಯ್ಯುತ್ತಾರೆ. ಬೈಗುಳದ ತೀವ್ರತೆ, ಭಾಷೆ ನೋಡಿದರೆ.. ಇವರು ಮೋದಿಯವರಿಂದ ತೀವ್ರ ನಿರಾಶೆ, ಹತಾಶೆಗೆ ಗುರಿಯಾಗಿರುವಂತೆ ಕಾಣುತ್ತದೆ.
ಇವರ ಈ ಬೈಗುಳ, ಟೀಕೆ, ಏಕವಚನದ ನಿಂದನೆ, ಕೆಳಮಟ್ಟದ ಭಾಷೆಗಳೆಲ್ಲ ವರ್ಕೌಟ್ ಆಗುತ್ತಾ..? ಮೋದಿ ಸೋಲ್ತಾರಾ.. ಮೋದಿ ಪ್ರಧಾನಿಯಾಗುವುದನ್ನು ಇಂತಹವರ ಮಾತುಗಳು ತಡೆಯುತ್ತವಾ.. ಗೊತ್ತಿಲ್ಲ. ಜೂನ್ ೪ರ ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಉತ್ತರವಂತೂ ಸಿಗಲಿದೆ.



