ಭಾರತದ ಮೊಟ್ಟ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು. ಆಧುನಿಕ ಮನೋಧರ್ಮ ಹೊಂದಿದ್ದ ನೆಹರು, ಓದಿದ್ದು ಇಂಗ್ಲೆಂಡಿನಲ್ಲಿ. ಶ್ರೀಮಂತ ಮನೆತನದ ನೆಹರು ಪ್ರಾಥಮಿಕ ಶಿಕ್ಷಣವನ್ನು ಓದಿದ್ದು ಮನೆಯಲ್ಲಿಯೇ. ಖಾಸಗಿ ಶಿಕ್ಷಕರನ್ನಿಟ್ಟು ಮನೆಯಲ್ಲೇ ಓದಿಸಿದ್ದರು ಅಪ್ಪ ಮೋತಿಲಾಲ್ ನೆಹರು. ಅದಾದ ಮೇಲೆ ನೆಹರು ಓದಿದ್ದು ಲಂಡನ್ನಿನಲ್ಲಿ. ಅದಾದ ಮೇಲೆ ಅವರು ಡಿಸ್ಕವರಿ ಇಂಡಿಯಾದಂತಹ ಇತಿಹಾಸದ ಗ್ರಂಥವನ್ನೇ ಬರೆದದ್ದು ಬೇರೆ. ಅದು ಇತಿಹಾಸ. ಈ ರೀತಿ ಭಾರತೀಯ ಸಂಸ್ಕೃತಿ ಅಧ್ಯಯನ ಮಾಡಿದ್ದ ನೆಹರು, 1959ರಲ್ಲಿ ಒಂದು ತಪ್ಪು ಮಾಡಿಬಿಟ್ಟರು. ಆ ತಪ್ಪು ಒಬ್ಬ ಮಹಿಳೆಯ ಬಂಧು ಬಾಂಧವರು ಸ್ವಾತಂತ್ರ್ಯ ಎಲ್ಲವನ್ನೂ ಕಿತ್ತುಕೊಂಡಿತು.
ನೆಹರು ಮಾಡಿದ್ದ ಪ್ರಮಾದದ ಕಥೆ :
ಅದು 1959ನೇ ಇಸವಿ. ಡಿಸೆಂಬರ್ 6ನೇ ತಾರೀಕು. ಜಾರ್ಖಂಡ್‌ನಲ್ಲಿ ಪಂಚೆಟ್ ಡ್ಯಾಂ ಉದ್ಘಾಟನೆ ಕಾರ್ಯಕ್ರಮ ನಡೆಯುತ್ತಿತ್ತು. ಆ ವೇಳೆ ನೆಹರು ವೇದಿಕೆಯ ಬಳಿ ಇದ್ದ ಬುಡಕಟ್ಟು ಸಮುದಾಯದ ಮಹಿಳೆ ಬುಧಿನಿ ಮೆಜಾಹಿನ್ ಎಂಬುವವರ ಕೊರಳಿಗೆ ಮಾಲೆ ಹಾಕಿದರು. ಅಧಿಕಾರಿಗಳ ಸೂಚನೆಯಂತೆ ಗೌರವ ಪೂರ್ವಕವಾಗಿ ಬುಧಿನಿ ಅವರೂ ನೆಹರು ಅವರಿಗೆ ಮಾಲೆ ಹಾಕಿ ಗೌರವ ಸಲ್ಲಿಸಿದರು.
ಉದ್ದೇಶ ಒಳ್ಳೆಯದೇ ಇತ್ತು. ಆದರೆ ಡಿಸ್ಕವರಿ ಆಫ್ ಇಂಡಿಯಾದಂತ ಗ್ರಂಥವನ್ನೇ ರಚಿಸಿದ್ದ ನೆಹರು ಅವರಿಗೆ ಆ ಬುಡಕಟ್ಟಿನವರ ಸಂಪ್ರದಾಯಗಳ ಅರಿವೇ ಇರಲಿಲ್ಲ. ನೆಹರು ಅವರು ಮಾಲೆ ಹಾಕಿದ್ದ ಬುಧಿನಿ ಅವರನ್ನು ಆ ಬುಡಕಟ್ಟಿನವರು ನೆಹರು ಅವರ ಪತ್ನಿ ಎಂದೇ ಭಾವಿಸಿದರು. ಆ ಬುಡಕಟ್ಟಿನಲ್ಲಿ ಮಾಲೆ ಬದಲಾಯಿಸಿಕೊಳ್ಳುವುದು ಮದುವೆಯಾದಂತೆಯೇ ಲೆಕ್ಕ. ಅತ್ತ ನೆಹರು ಆ ಬುಡಕಟ್ಟಿನವರ ಜಾತಿಗೆ ಸೇರಿಕೊಳ್ಳಬೇಕು ಇಲ್ಲವೇ ಬುದಿನಿ ಆ ಬುಡಕಟ್ಟಿನವರಿಂದ ಬಹಿಷ್ಕಾರಕ್ಕೊಳಗಾಗಬೇಕು.
ನೆಹರು ಅವರಿಗೂ ಗೊತ್ತಿಲ್ಲದೇ ಆದ ಪ್ರಮಾದದಿಂದ ಆಕೆ ಊರು, ಬುಡಕಟ್ಟಿನಿಂದ ಬಹಿಷ್ಕಾರ ಎದುರಿಸುವಂತೆ ಆಯಿತು. ಮಗಳೂ ದೂರವಾದಳು. ಆಮೇಲೆ ಆಕೆಗೆ ಅದೇ ಊರಿನ ಬೇರೆಯ ಬುಡಕಟ್ಟಿನ ಯುವಕನೊಬ್ಬ ಮದುವೆಯಾದ. ಮಕ್ಕಳೂ ಆದವು. ಅದಾದ ಮೇಲೆ ಆಕೆಗೆ ಒಂದು ಕೆಲಸವೂ ಸಿಕ್ಕಿತು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಗೆ ಅಲ್ಲಿಯೂ ನೆಹರು ಪತ್ನಿ ಎಂಬ ಕಾಟ ಬಿಡಲಿಲ್ಲ. ಕೆಲವು ವರ್ಷಗಳ ಮೇಲೆ ವಜಾ ಮಾಡಲಾಯಿತು. ಅಲ್ಲಿಂದಲೂ ಆಕೆಯನ್ನು ಸ್ಥಳೀಯರ ವಿರೋಧ ಎದುರಿಸಲಾರದೆ ಪರದಾಡಿದ ಆಕೆ, ದೆಹಲಿಗೆ ಬಂದು ರಾಜೀವ್ ಗಾಂಧಿಯ ಮೊರೆ ಹೋದರು. ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಸೂಚನೆ ನೀಡಿ ಆಕೆಯ ಕೆಲಸವನ್ನು ಮರಳಿ ಕೊಡಿಸಿದರು.
ಒಂದು ಹಾರ ಹಾಕಿದ್ದ ತಪ್ಪಿಗೆ ತಮ್ಮ ಇಡೀ ಬುಡಕಟ್ಟಿನವರ, ಸಮುದಾಯದ ವಿರೋಧ ಕಟ್ಟಿಕೊಂಡ ಹೆಣ್ಣು ಮಗಳು ಬುಧನಿ ಈಗ ಹೃದಯಾಘಾತದಿಂದ ಮೃತಪಟ್ಟಿದ್ಧಾರೆ. ಬುಧನಿ ಅವರ ಸಾವಿಗೆ ಹಲವಾರು ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಸ್ಥಳೀಯ ನಾಯಕರು ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ.



