ಆರೋಗ್ಯ ಸರಿ ಇಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದಲೂ ಸಮಸ್ಯೆ ಇದೆ ಎಂದು ಸ್ವತಃ ಶಿವ ರಾಜ್ ಕುಮಾರ್ ಹೇಳಿಕೊಂಡಿದ್ದಾರೆ. ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಆರೋಗ್ಯ ಸರಿ ಇಲ್ಲ ಎಂದು ಗಾಂಧಿನಗರದಲ್ಲಿ ಸುದ್ದಿಯಾಗಿತ್ತು. ಸ್ಪೆಷಲ್ ಯು ಕೂಡಾ ಈ ಬಗ್ಗೆ ಸುದ್ದಿ ಮಾಡಿತ್ತು. ಆ ಸುದ್ದಿಯನ್ನೀಗ ಖುದ್ದು ಶಿವಣ್ಣನೇ ಖಚಿತ ಪಡಿಸಿದ್ದಾರೆ.
ರಿಪಬ್ಲಿಕ್ ಟಿವಿ ಕನ್ನಡಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ಕಳೆದ ಮೂರು ನಾಲ್ಕು ತಿಂಗಳಿಂದ ಸ್ವಲ್ಪ ಆರೋಗ್ಯ ಕೈ ಕೊಟ್ಟಿದೆ ಎಂದು ಹೇಳಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಯಾರ್ ಯಾರೋ ಏನೇನೋ ಹೇಳಿ ದೊಡ್ಡ ಸುದ್ದಿಯಾಗಿ, ಗಾಸಿಪ್ ಆಗಿ ಏನೇನೋ ಕಲ್ಪನೆ ಮಾಡಿಕೊಳ್ಳೋ ಬದಲು, ನಾವೇ ವಿಷಯವನ್ನ ಹೇಳೋದು ಒಳ್ಳೆಯದು ಎಂದಿದ್ದಾರೆ ಶಿವಣ್ಣ. ಹಾಗಂತ ದೈನಂದಿನ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿಲ್ಲ. ಚಿತ್ರದ ಚಿತ್ರೀಕರಣಗಳು ಅದರ ಪಾಡಿಗೆ ನಡೆಯುತ್ತಿವೆ. ಆರೋಗ್ಯ ಸಮಸ್ಯೆ ಏನೇ ಇದ್ದರೂ, ಎನರ್ಜಿ ಹಾಗೆಯೇ ಇರುತ್ತದೆ. ಇದಕ್ಕೆ ಎಲ್ಲರ ಸಪೋರ್ಟ್ ಕೂಡ ಇದೆ. ಗೀತಾ, ಮಕ್ಕಳು, ಗೆಳೆಯರು ಜೊತೆಗೆ ಕನ್ನಡ ಚಿತ್ರರಂಗ ಜೊತೆಗಿರುವುದರಿಂದ ಎನರ್ಜಿ ಬರುತ್ತದೆ. ಆದರೆ ಸ್ವಲ್ಪ ಮಟ್ಟಿಗೆ ಹುಷಾರಿಲ್ಲ. ಚಿಕಿತ್ಸೆ ನಡೆಯುತ್ತಿದೆ. ಜೊತೆಗೆ ಕೆಲಸ ಕೂಡ ಮಾಡುತ್ತಿದ್ದೇನೆ ಎಂದಿದ್ದಾರೆ ಶಿವರಾಜ್ ಕುಮಾರ್.
ಕಳೆದ ಕೆಲ ತಿಂಗಳುಗಳಿಂದ ಶಿವಣ್ಣ ಹೊರಗೆ ಕಾಣಿಸಿಕೊಳ್ಳೋದು ಕಡಿಮೆ ಮಾಡಿದ್ದಾರೆ. ವಿಶ್ರಾಂತಿ ಹೆಚ್ಚಾಗಿದೆ. ಶಿವಣ್ಣ ಅವರಿಗೆ ಆರೋಗ್ಯ ಸಮಸ್ಯೆ ಬಿಗಡಾಯಿಸುತ್ತಿದೆ ಎಂದು ವರದಿಗಳಿಗೆ. ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಲಿದ್ದಾರೆ ಎಂಬ ಸುದ್ದಿಯೂ ಇದೆ. ಆ ಬಗ್ಗೆ ರಿಪಬ್ಲಿಕ್ ಕನ್ನಡದ ಸಂದರ್ಶನದಲ್ಲಿ ಏನನ್ನೂ ಹೇಳದ ಶಿವಣ್ಣ ಎನರ್ಜಿ ಹಾಗೆಯೇ ಇರಲಿದೆ ಎಂದಿದ್ದಾರೆ.
ಇನ್ನು ಪಡೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ಮಾಡ್ತಿದ್ದಾರೆ ಎಂಬ ವಿಷಯದ ಬಗ್ಗೆಯೂ ಏನನ್ನೂ ಹೇಳಿಲ್ಲ. ವಾಸ್ತವದಲ್ಲಿ ಸಂದರ್ಶನದಲ್ಲಿ ಆ ಪ್ರಶ್ನೆ ಬಂದಿಲ್ಲ. ಸದ್ಯ ಭೈರತಿ ರಣಗಲ್ ಚಿತ್ರದ ಪ್ರಚಾರವನ್ನು ಮಾಡಿ ಚಿತ್ರದ ಬಿಡುಗಡೆಯ ನಂತರ ಶಿವಣ್ಣ ಕೆಲ ದಿನಗಳವರೆಗೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.
ಸದ್ಯಕ್ಕೆ ಶಿವಣ್ಣ ಕೈಲಿರೋ ಚಿತ್ರಗಳೆಷ್ಟು ಗೊತ್ತೇ..? ಭೈರತಿ ರಣಗಲ್ ರಿಲೀಸ್ ಆಗುತ್ತಿದೆ. 45 ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಉತ್ತರಕಾಂಡ, ಭೈರವನ ಕೊನೆ ಪಾಠ ಶೂಟಿಂಗ್ ಹಂತದಲ್ಲಿದ್ದರೆ, ಆರ್‌ಸಿ 16, ಶಿವಗಣ, ನೀ ಸಿಗೋವರೆಗೂ, ಆರ್‌ಡಿಎಕ್ಸ್, ಅಶ್ವತ್ಥಾಮ.. ಸೇರಿದಂತೆ 10ಕ್ಕೂ ಹೆಚ್ಚು ಚಿತ್ರಗಳು ಕ್ಯೂನಲ್ಲಿವೆ.
ಇತ್ತೀಚೆಗೆ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಕುತ್ತಾರು ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿ, ಆಶೀರ್ವಾದ ಪಡೆದುಕೊಂಡರು. “ಕುತ್ತಾರು ಅಜ್ಜನ ಕಟ್ಟೆಗೆ ಬಂದಾಗ ನೆಮ್ಮದಿ ಸಿಗುತ್ತದೆ, ನನಗೆ ಇಲ್ಲಿ ನಂಬಿಕೆಯೂ ಇರುವುದರಿಂದ ಮಂಗಳೂರು ಕಡೆ ಬರುವಾಗೆಲ್ಲಾ ಈ ಭಾಗಕ್ಕೆ ಭೇಟಿ ನೀಡುವೆ” ಎಂದು ನಟ ಶಿವರಾಜ್‌ಕುಮಾರ್ ತಿಳಿಸಿದ್ದಾರೆ. ನಾನು ಇತ್ತ ಕಡೆ ಬಂದಾಗಲೆಲ್ಲ ದೈವ ದರ್ಶನ ಮಾಡುತ್ತೇನೆ ಎಂದಿದ್ದಾರೆ ಶಿವಣ್ಣ. ನವೆಂಬರ್ 15ಕ್ಕೆ ಶಿವಣ್ಣ ಅಭಿನಯದ ಭೈರತಿ ರಣಗಲ್ ರಿಲೀಸ್ ಆಗುತ್ತಿದೆ.



