ಪುನರ್ಜನ್ಮದ ಕಥೆ ಕೇಳಿದ್ದೇವೆ. ಕೆಲವೊಂದು ನೋಡಿದ್ದೇವೆ. ಬಂಗಾರದ ಜಿಂಕೆ, ಜನ್ಮ ಜನ್ಮದ ಅನುಬಂಧ, ರಾಜ ನನ್ನ ರಾಜ, ನಾಗಿಣಿ, ಮಗಧೀರ (ತೆಲುಗು), ಹೌಸ್‌ಫುಲ್ 4 (ಹಿಂದಿ).. ಹೀಗೆ ಅನೇಕ ಸಿನಿಮಾಗಳಲ್ಲೂ ನೋಡಿದ್ದೇವೆ. ಮಹಾತ್ಮ ಗಾಂಧೀಜಿ ಅವರಿಗೂ ಇಂಥಾದ್ದೊಂದು ಪ್ರಸಂಗ ಎದುರಾಗಿತ್ತು. ಶಾಂತಿ ದೇವಿ ಎಂಬ ದೆಹಲಿಯ ಬಾಲಕಿ ತಾನು ಮಥುರಾದವಳೆಂದು ವಾದಿಸುತ್ತಿದ್ದಳು. ಕೊನೆಗೆ ಸತ್ಯಾಸತ್ಯತೆ ತಿಳಿಯಲು ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಸತ್ಯಶೋಧನ ಸಮಿತಿಯೊಂದು ರಚನೆಯಾಗಿತ್ತು. ಗಾಂಧೀಜಿ ಆಕೆಯ ಪುನರ್ಜನ್ಮವೇ ಸತ್ಯ ಎಂದು ವರದಿ ಕೊಟ್ಟಿದ್ದರು. ಇದು ಅಧಿಕೃತ ದಾಖಲೆಯಲ್ಲಿಯೇ ಇದೆ. ಅಂಥದ್ದೇ ಒಂದು ಪುನರ್ಜನ್ಮದ ಕಥೆ ಜ್ಯೋತಿಷಿ ಸಚ್ಚಿದಾನಂದ ಬಾಬು ಹೇಳಿದ್ದು. ರ್ಯಾಪಿಡ್ ಲಕ್ಷ್ಮಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಬಾಲಕಿಯೊಬ್ಬ ಪುನರ್ಜನ್ಮದ ಕಥೆ ಬಿಚ್ಚಿಟ್ಟಿದ್ದಾರೆ ಸಚ್ಚಿದಾನಂದ ಬಾಬು.
ಸಚ್ಚಿದಾನಂದ ಬಾಬು ಹೇಳಿದ ಪುನರ್ಜನ್ಮದ ಕಥೆ : ಸುಮಾರು 15 ವರ್ಷ ಹಿಂದೆ ತೆಲಗು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದ ಬಾಲಕಿ ಇದ್ದಕ್ಕಿದ್ದಂತೆಯೇ ವಿಚಿತ್ರವಾಗಿ ಆಡುತ್ತಾ ವಿಚಿತ್ರ ಭಾಷೆಯಲ್ಲಿ ಮಾತನಾಡುತ್ತಿದ್ಳು. ಅಪ್ಪ-ಅಮ್ಮ ತಬ್ಬಿಬ್ಬಾಗಿದ್ದರು. ಆಕೆಯ ಮಾತೃಭಾಷೆ ತೆಲಗು. ಆದರೆ ಆಕೆಗೆ ಅದು ಅರ್ಥವೇ ಆಗುತ್ತಿರಲಿಲ್ಲ. ರಾಜಸ್ತಾನಿ ಭಾಷೆ ಹಿಂದಿಗಿಂತ ಬಿನ್ನ. ಹೀಗಾಗಿ ಹಲವರ ಜೊತೆ ಮಾತನಾಡಿದ ನಂತರವಷ್ಟೇ ತಮ್ಮ ಮಗಳು ರಾಜಸ್ತಾನಿ ಭಾಷೆಯಲ್ಲಿ ಮಾತನಾಡುತ್ತಿದ್ದಾಳೆ ಎನ್ನುವುದು ಅರ್ಥವಾಗಿತ್ತು.
ಮನೆಯಲ್ಲಿ ಹಸಿವಾದಾಗ ಊಟ ಮಾಡುತ್ತಿದ್ದುದು ಬಿಟ್ಟರೆ ಅಪ್ಪ-ಅಮ್ಮ ಸೇರಿದಂತೆ ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಆಗ ಆ ತಂದೆ ತಾಯಿ ಸಚ್ಚಿದಾನಂದ ಸಂಪರ್ಕಕ್ಕೆ ಬಂದರು.
ಸಚ್ಚಿದಾನಂದ ಬಾಬು ಆಕೆಯ ಜಾತಕ ನೋಡಿದಾಗ ಪುನರ್ಜನ್ಮದ ಸಂಸ್ಕಾರ ಕಾಣಿಸಿತಂತೆ. ಆಕೆ ನನ್ನ ಅಪ್ಪ-ಅಮ್ಮ ರಾಜಸ್ಥಾನದ ಜೈಪುರದಲ್ಲಿದ್ದಾರೆ ಎಂದಳಂತೆ. ನನಗೆ ನನ್ನ ಅಪ್ಪ-ಅಮ್ಮನನ್ನು ನೋಡಬೇಕು, ನಾನು ಅಲ್ಲಿಗೆ ಹೊಗಬೇಕು ಎಂದು ಒಂದೇ ಸಮನೆ ಬಾಲಕಿ ಒತ್ತಾಯಿಸುತ್ತಿದ್ದಳು. ಅವರ ಮನೆಯಲ್ಲಿ ಸಾಕಷ್ಟು ಅನುಕೂಲಸ್ಥರಾಗಿದ್ದರಿಂದ ಎಲ್ಲರೂ ವಿಮಾನದಲ್ಲಿ ರಾಜಸ್ಥಾನಕ್ಕೆ ಹೋದೆವು. ವಿಮಾನ ನಿಲ್ದಾಣದಿಂದ ಕ್ಯಾಬ್ನಲ್ಲಿ ಹೋಗುವಾಗ ಆ ಬಾಲಕಿಯೇ ಮನೆಯ ವಿಳಾಸ ಹೇಳಿ ಕರೆದುಕಂಡು ಹೋದಳು. ಆ ಮನೆ ಚಿಕ್ಕದಾಗಿತ್ತು. ಒಳಗೆ ಹೋದಾಗ ವಯಸ್ಸಾ ಗಂಡ ಹೆಂಡತಿ ಇದ್ದರು. ಅವರನ್ನು ನೋಡುತ್ತಿದ್ದಂತೆಯೇ ಬಾಲಕಿ ಅಪ್ಪಾ-ಅಮ್ಮಾ ಎಂದು ತಬ್ಬಿಕೊಂಡು ರಾಜಸ್ಥಾನಿಯಲ್ಲಿ ಮಾತನಾಡಿದಳು. ಅವರಿಗೂ ಗಾಬರಿಯಾಯಿತು. ಕೊನೆಗೆ ನಡೆದ ವಿಷಯ ಹೇಳಿದೆವು. ಅಲ್ಲಿ ನೋಡಿದ್ರೆ ಸುಮಾರು 8-10 ವರ್ಷಗಳ ಹಿಂದೆ ಈಜಲು ಹೋದ ಅವರ ಮಗಳು ಸತ್ತಿರುವ ವಿಷಯ ತಿಳಿಯಿತು. ಆಕೆಯ ಫೋಟೋ ಕೂಡ ಇತ್ತು. ಅದಕ್ಕೆ ಹಾರ ಹಾಕಲಾಗಿತ್ತು. ಕೊನೆಗೆ ಅವರದ್ದೇ ಮಗಳ ರೀತಿಯಲ್ಲಿ ಎಲ್ಲಾ ಸುದ್ದಿಗಳನ್ನು ಬಾಲಕಿ ಹೇಳತೊಡಗಿದಾಗ ಅವರಿಗೂ ಪರಮಾಶ್ಚರ್ಯ. ಕೊನೆಗೆ ಬಾಲಕಿ ಅಲ್ಲಿಂದ ಬರಲೇ ಇಲ್ಲ. ತಾನು ಮನೆ ಬಿಟ್ಟು ಬರುವುದಿಲ್ಲ ಎಂದು ಹಠ ಹಿಡಿದು ಕುಳಿತಳು. ಈಗಿನ ಅಪ್ಪ-ಅಮ್ಮನಿಗೆ ಹೇಳತೀರದ ಸಂಕಟ. ಈಗಲೂ ಬಾಲಕಿ ಅದೇ ಮನೆಯಲ್ಲಿ ಇದ್ದಾಳೆ. ಈಗಿನ ಅಪ್ಪ-ಅಮ್ಮನನ್ನು ಭೇಟಿಯಾಗಲು ತಿಂಗಳಿಗೊಮ್ಮೆ ಕರೆದುಕೊಂಡು ಬರಲಾಗುತ್ತದೆ. ಅವಳಿಗೆ ಈಗಿನ ಯಾವುದೇ ನೆನಪೂ ಇಲ್ಲ ಎನ್ನುವುದು ಕೂಡ ವಿಶೇಷ ಎಂದು ಇಡೀ ಕಥೆ ಹೇಳಿಕೊಂಡಿದ್ದಾರೆ ಸಚ್ಚಿದಾನಂದ ಬಾಬು.
ಪುನರ್ಜನ್ಮ ಎನ್ನುವುದು ಇದೆಯೋ.. ಇಲ್ಲವೋ.. ಈ ಬಗ್ಗೆ ಜಗತ್ತಿನಲ್ಲಿ ಸಾವಿರಾರು ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ನಡೆಸುತ್ತಿದ್ದಾರೆ. ಪುನರ್ಜನ್ಮದ ರಿಯಲ್ ಕಥೆಗಳ ಡಾಕ್ಯುಮೆಂಟರಿಗಳೂ ಇವೆ. ಕೆಲವು ಘಟನೆಗಳಲ್ಲಿ ಜೀವನದ ಒಂದು ಹಂತದಲ್ಲಿ ಕೆಲ ಕಾಲ ಹಿಂದಿನ ಜನ್ಮದ ನೆನಪು ಬಂದು, ನಂತರ ಆ ನೆನಪು ಅಳಿಸಿ ಹೋಗಿದ್ದೂ ಇದೆ. ಆದರೆ.. ಇವತ್ತಿಗೂ ಪುನರ್ಜನ್ಮ ಇದೆ.. ಅಥವಾ.. ಇಲ್ಲ.. ಎಂದು ಸ್ಪಷ್ಟವಾಗಿ ಹೇಳುವುದಕ್ಕೆ ಆಗುತ್ತಿಲ್ಲ.



