ಅಣ್ಣ-ತಮ್ಮ ಹೇಗಿರಬೇಕು.. ಡಾ.ರಾಜ್ ಸಿನಿಮಾ ನೋಡಿ. ತಾಯಿ-ಮಗ ಹೇಗಿರಬೇಕು. ಅಣ್ಣಾವ್ರ ಸಿನಿಮಾ ನೋಡಿ. ಗಂಡ-ಹೆಂಡತಿ ಸಂಬಂಧ ಹೇಗಿರಬೇಕು. ರಸಿಕರ ರಾಜನ ಸಿನಿಮಾ ನೋಡಿ. ಹೀಗೆ.. ಜೀವನದ ಪ್ರತಿಯೊಂದಕ್ಕೂ ಡಾ.ರಾಜ್ ಅವರ ಚಿತ್ರಗಳಲ್ಲಿ ಜೀವನ ಪಾಠವಿದೆ. ಅಂತಹ ಡಾ.ರಾಜ್ ಅವರು ಹೇಳುತ್ತಿದ್ದ.. ಅನುಸರಿಸುತ್ತಿದ್ದ ಸಂಪ್ರದಾಯವೊಂದು ಇವತ್ತಿಗೂ ರಾಘವೇಂದ್ರ ಅವರ ಮನೆಯಲ್ಲಿದೆ. ಇದೆಲ್ಲವೂ ನೆನಪಾಗಿದ್ದು ಡಾ.ರಾಜ್ ಹುಟ್ಟುಹಬ್ಬದ ಸಂಭ್ರಮದಲ್ಲಿ..
ನಟ ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಡಾ.ರಾಜ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ ರಾಘವೇಂದ್ರ ರಾಜಕುಮಾರ್ ಕುಟುಂಬ ಪುಣ್ಯಭೂಮಿಯಲ್ಲಿ ನಮನ ಸಲ್ಲಿಸಿದೆ. ಸಾವಿರಾರು ಅಭಿಮಾನಿಗಳು ರಾಜ್ ಸಮಾಧಿಗೆ ಭೇಟಿ ನೀಡಿದ್ದಾರೆ. ಪೂಜೆ ಸಲ್ಲಿಸಿದ್ದಾರೆ. ಡಾ.ರಾಜ್ ಇನ್ನಿಲ್ಲವಾಗಿ 18 ವರ್ಷಗಳಾಗಿವೆ. ಬದುಕಿದ್ದರೆ ೯೫ ವರ್ಷವಾಗುತ್ತಿತ್ತು. ಇದೇ ವೇಳೆ ಡಾ.ರಾಜ್ ಅವರ ಬಗ್ಗೆ ರಾಘವೇಂದ್ರ ರಾಜಕುಮಾರ್ ಮಾತನಾಡಿದ್ದ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.
ಅಪ್ಪಾಜಿ ನಮಗೆ ಊಟಕ್ಕೆ ಯಾವತ್ತೂ ಕಡಿಮೆ ಮಾಡಿಲ್ಲ. ಮನೆಗೆ ಯಾರೇ ಬಂದರೂ ಅಪ್ಪಾಜಿ ಮೊದಲು ಊಟ ಕೊಡಿ, ಆಮೇಲೆ ಮಾತು ಅಂತಾ ಇದ್ರು. ಮನೆಗೆ ಯಾರೇ ಬಂದರೂ ‘ಊಟ ಮಾಡ್ತೀರಾ, ಊಟ ಆಗಿದ್ಯಾ ಎಂದು ಯಾವತ್ತೂ ಕೇಳ್ತಾ ಇರ್ಲಿಲ್ಲ. ನಮ್ಮ ಅಪ್ಪಾಜಿ ಮನೆಯಲ್ಲಿ ಊಟದ ವಿಷಯದಲ್ಲಿ ಯಾವ ತರಹ ಇರುತ್ತಿದ್ದರು ಎಂದರೆ, ನಾವು ಇಷ್ಟೆಲ್ಲಾ ಕೆಲಸ ಮಾಡುವುದು ಊಟದ ಸಲುವಾಗಿ.. ಅದನ್ನಾದರೂ ಒಟ್ಟಿಗೆ ಮಾಡೋಣ ಎನ್ನುತ್ತಿದ್ದರು, ಕೆಲಸಕ್ಕಾಗಿ ನಾವೆಲ್ಲರೂ ಬೇರೆ ಬೇರೆ ಕಡೆ ಹೋಗಲೇಬೇಕು. ಊಟವನ್ನಾದರು ಒಟ್ಟಿಗೆ ಮಾಡಬೇಕು ಎಂದು ನಮ್ಮನ್ನೆಲ್ಲ ಕರೆದು ಒಟ್ಟಾಗಿ ಕುಳ್ಳಿರಿಸಿಕೊಂಡು ಊಟ ಮಾಡುತ್ತಿದ್ದರು. ಈಗಲೂ ನಮ್ಮ ಮನೆಯಲ್ಲಿ ಅಪ್ಪಾಜಿ ಹೇಳಿಕೊಟ್ಟ ಅ ಪಾಠವನ್ನು ತಪ್ಪದೇ ಪಾಲಿಸುತ್ತೇವೆ. ಇಂದಿಗೂ ಕೂಡ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಒಟ್ಟಿಗೇ ಕುಳಿತು ಊಟ ಮಾಡುತ್ತೇವೆ. ಅಪ್ಪು ಇದ್ದಾಗ ವಾರದಲ್ಲಿ ಒಂದು ದಿನ ಅವನು ನಮ್ಮ ಮನೆಯಲ್ಲಿ ಹಾಗು ನಾನು ಅವರ ಮನೆಯಲ್ಲಿ ಊಟ ಮಾಡುವ ಪದ್ಧತಿ ಇಟ್ಟುಕೊಂಡಿದ್ದೆವು. ಮನೆಗೆ ಯಾರಾದರೂ ಅತಿಥಿಗಳು ಬಂದರೆ ಕೂಡ ಅಷ್ಟೇ, ಮನೆಯವರೆಲ್ಲರೂ ಅವರ ಜತೆ ಕುಳಿತು ಊಟ ಮಾಡಲೇಬೇಕು. ನಮ್ಮ ಮನೆಯಲ್ಲಿ ಅವರವರ ಕೋಣೆಯಲ್ಲಿ ಪ್ರತ್ಯೇಕವಾಗಿ ಕುಳಿತು ಊಟ ಮಾಡುವ ಪದ್ಧತಿ ಆಗಲೂ ಇರಲಿಲ್ಲ, ಈಗಲೂ ಇಲ್ಲ..
ರಾಘಣ್ಣ ಹೇಳಿದ ಮಾತು ಕೇಳಿದವರು ಅದನ್ನು ತಾವೂ ಅಳವಡಿಸಿಕೊಳ್ಳಬೇಕು.. ಎಂಬ ಮಾತು ಹೇಳುತ್ತಿದ್ಧಾರೆ. ಹೌದಲ್ಲವೇ.. ಗೆಳೆಯರ ನಡುವಿನ ಜಗಳ ಪರಸ್ಪರ ಮಾತುಕತೆಯಲ್ಲಿ ಬಗೆಹರಿಯುತ್ತದೆ. ಅದೇ ಅಣ್ಣ-ತಮ್ಮ-ಅಕ್ಕ-ತಂಗಿಯರ ನಡುವಿನ ವೈಮನಸ್ಸು, ಬೇಸರ, ಸಿಟ್ಟುಗಳನ್ನೆಲ್ಲ ಸಮಾಧಾನ ಮಾಡುವ ಶಕ್ತಿ, ಒಟ್ಟಿಗೇ ಮಾಡುವ ಊಟದಲ್ಲಿದೆ. ಡಾ.ರಾಜ್ ಏನನ್ನೂ ಹೇಳದೆಯೇ.. ಒಂದು ಅದ್ಭುತ ಸೈಕಾಲಜಿ ಸೂತ್ರ ಕೊಟ್ಟಿದ್ಧಾರೆ. ಅವರು ಹೇಳಿದ್ದರಲ್ಲಿ ಹೊಸತನ ಇಲ್ಲದಿರಬಹುದು. ಆದರೆ.. ಅದು ನಮ್ಮ ಸಂಪ್ರದಾಯ, ಪದ್ಧತಿ, ಕುಟುಂಬ ವ್ಯವಸ್ಥೆಯನ್ನು ಉಳಿಸಿಕೊಳ್ಳುವುದಕ್ಕೊಂದು ಪಾಠ. ಅದನ್ನು ಡಾ.ರಾಜ್ ಅನುಸರಿಸುತ್ತಿದ್ದರು. ಅಷ್ಟೆ.



