ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪ್ರಕ್ರಿಯೆಗಳು ಶುರವಾಗಿವೆ. ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಈಗಾಗಲೇ ಜಾಮೀನು ಸಿಕ್ಕಿದೆ. ಆದರೆ ಆರೋಪಿ ನಂ1 ಪವಿತ್ರಾ ಗೌಡ ಮತ್ತು ಆರೋಪಿ ನಂ2 ದರ್ಶನ್ @ ಡಿಬಾಸ್ ಸೇರಿದಂತೆ ಉಳಿದವರಿಗೆ ಬೇಲ್ ಆಗಿಲ್ಲ. ದರ್ಶನ್, ಪವಿತ್ರಾ ಹಾಗೂ ಕಾರ್ ಡ್ರೈವರ್ ರವಿ ಕುಮಾರ್, ಈ ಮೂವರ ಜಾಮೀನು ಅರ್ಜಿ ವಿಚಾರಣೆಯನ್ನೂ ಸೆಪ್ಟೆಂಬರ್ 30ಕ್ಕೆ ಮುಂದೂಡಲಾಗಿದೆ. ವಿಷಯ ಏನು ಗೊತ್ತೇ.. ಜಾಮೀನು ಪಡೆದಿರುವ ಮೂವರು ಆರೋಪಿಗಳು ಈಗಲೂ ಜೈಲಿನಲ್ಲೇ ಇದ್ದಾರೆ.
ಆ ಮೂವರು ಜೈಲಿನಲ್ಲೇ ಇರೋದೇಕೆ..?
ದರ್ಶನ್ ಕೇಸಿನಲ್ಲಿ ಅಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೊದಲ ಜಾಮೀನು ಸಿಕ್ಕಿದ್ದು ಸೆಪ್ಟೆಂಬರ್ 22ನೇ ತಾರೀಕು. ಮೊದಲು ಜಾಮೀನು ಪಡೆದಿದ್ದು ಆರೋಪಿ ನಂ.16 ಕೇಶವಮೂರ್ತಿ. ನಂತರ ಆರೋಪಿ ನಂ.15 ಕಾರ್ತಿಕ್ ಹಾಗೂ ಆರೋಪಿ ನಂ.17 ನಿಖಿಲ್ ಎಂಬುವವರಿಗೂ ಜಾಮೀನು ಸಿಕ್ಕಿತ್ತು. ಈ ಮೂವರ ಮೇಲೆಯೂ ಕೊಲೆಯಲ್ಲಿ ಭಾಗಿಯಾಗಿದ್ದರು ಎನ್ನುವುದಕ್ಕೆ ಸಾಕ್ಷಿಗಳಿರಲಿಲ್ಲ.
ಟೀ ಕುಡಿಯೋಕೆ ಬಂದಿದ್ದ ಕೇಶವ ಮೂರ್ತಿ ಅಕಸ್ಮಾತ್ ಆಗಿ ದುಡ್ಡಿನ ಆಸೆಗೆ ಬಿದ್ದು ಸರೆಂಡರ್ ಆಗಿದ್ದ. ಇನ್ನು ನಿಖಿಲ್ ಮತ್ತು ಕಾರ್ತಿಕ್ ಅಲಿಯಾಸ್ ಕಪ್ಪೆ ಕೂಡಾ ಅಷ್ಟೇ. ಶರಣಾಗತರಾಗಲು ಬಂದಿದ್ದವರು. ದುರಂತ ಎಂದರೆ ಈ ಮೂವರಿಗೂ ಜಾಮೀನು ಸಿಕ್ಕು ಹೆಚ್ಚೂ ಕಮ್ಮಿ ವಾರವೇ ಆಗುತ್ತಿದ್ದರೂ, ಇನ್ನೂ ಜೈಲಿನಲ್ಲೇ ಇದ್ದಾರೆ. ಆರೋಪಿಗಳು ತುಮಕೂರು ಜೈಲಿನಲ್ಲಿರುವ ಕಾರಣ ಬಿಡುಗಡೆ ನಿಧಾನವಾಗಿದೆ ಎನ್ನಲಾಗುತ್ತಿತ್ತು. ಆದರೆ ನಿಜವಾದ ಕಾರಣ ಎಂದರೆ ಇವರಿಗೆ ಶ್ಯೂರಿಟಿ ಹಾಕಲು ಯಾರೂ ಮುಂದೆ ಬಂದಿಲ್ಲ. ನ್ಯಾಯಾಲಯ ನೀಡಿರುವ ಷರತ್ತಿನಲ್ಲಿ ಒಬ್ಬರ ಶ್ಯೂರಿಟಿ ಕೊಡುವುದು ಕೂಡಾ ಪ್ರಮುಖವಾಗಿದೆ. ಆದರೆ ಇದುವರೆಗೆ ಯಾರೊಬ್ಬರೂ ಶ್ಯೂರಿಟಿ ಕೊಡದ ಜಾಮೀನು ಪಡೆದಿದ್ದರೂ, ಈ ಮೂವರು ಈಗಲೂ ಜೈಲಲ್ಲೇ ಕಂಬಿ ಎಣಿಸುವಂತಾಗಿದೆ.
ಪವಿತ್ರಾ ಗೌಡ ಜಾಮೀನು ಅರ್ಜಿ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿದ್ದು, ರೇಣುಕಾ ಸ್ವಾಮಿಯನ್ನು ಷೆಡ್ಗೆ ಕರೆದೊಯ್ದು ಇತರರೊಂದಿಗೆ ಸೇರಿ ಹಲ್ಲೆ ನಡೆಸಿದ ಆರೋಪವಿದೆ, ಹಲ್ಲೆಯಿಂದಾಗಿ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆಂದು ಹೇಳಲಾಗಿದೆ. ತುಂಬಾ ಕ್ರೂರವಾಗಿ ಹಲ್ಲೆ ನಡೆಸಿದ್ದರೆಂದು ಆರೋಪಿಸಲಾಗಿದೆ. ನಾಲ್ಕು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ಪಡೆಯಲಾಗಿದೆ, ಷೆಡ್ ಒಳಗೆ ಏನಾಯಿತೆಂಬುದನ್ನು ಇಬ್ಬರು ಸಾಕ್ಷಿಗಳು ಹೇಳಿಕೆ ದಾಖಲಿಸಿದ್ದಾರೆ ಎಂದು ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ಆದರೆ ಪವಿತ್ರಾ ಗೌಡ ಪರ ವಕೀಲ ಸೆಬಾಸ್ಟಿಯನ್ ಪ್ರಕಾರ, ಪವಿತ್ರಾ ರೇಣುಕಾ ಸ್ವಾಮಿಗೆ ಕಪಾಳಕ್ಕೆ ಹೊಡೆದಳು ಎನ್ನುವುದನ್ನು ಬಿಟ್ಟರೆ ಬೇರೆ ಅಪರಾಧ ಎಸಗಿಲ್ಲ. ಕೊಲೆ ಮಾಡುವುದಕ್ಕೆ ಷಡ್ಯಂತ್ರವನ್ನೂ ಮಾಡಿಲ್ಲ. ಆಕೆ ಮಾಸ್ಟರ್ ಮೈಂಡ್ ಎನ್ನುವುದಕ್ಕೆ ದಾಖಲೆಗಳಿಲ್ಲ ಎಂದು ವಾದಿಸಿದ್ದಾರೆ.
ಇನ್ನು ದರ್ಶನ್ ಜಾಮೀನು ಅರ್ಜಿ ವಿಚಾರಣೆಯಲ್ಲಿ, ದರ್ಶನ್ ಪರ ವಕೀಲರೇ ಸಮಯ ಕೇಳಿದ ಕಾರಣ, ಸೆಪ್ಟೆಂಬರ್ 30ಕ್ಕೆ ವಿಚಾರಣೆಯನ್ನು ನ್ಯಾಯಾಧೀಶರು ಮುಂದೂಡಿದ್ದಾರೆ.
ಇದೆಲ್ಲದರ ಮಧ್ಯೆ ಪ್ರಕರಣದ 8ನೇ ಆರೋಪಿ ರವಿ ಅಲಿಯಾಸ್ ರವಿಶಂಕರ್ ಜಾಮೀನು ಅರ್ಜಿಯ ವಿಚಾರಣೆಯೂ ನಡೆದಿದ್ದು, ಆತನ ವಿರುದ್ಧವೂ ಕೊಲೆ ಮಾಡಿದ ಆರೋಪ ಇಲ್ಲ. ಆತ ತನ್ನ ವೃತ್ತಿ ಮಾಡಿದ್ದಾನೆ. ಕಾರು ಬಾಡಿಗೆಗೆ ಕೊಟ್ಟಿದ್ದಾನೆ, ಅಷ್ಟೇ. ಆತನಿಗೆ ಜಾಮೀನು ನೀಡಬೇಕು ಎಂದು ವಕೀಲ ರಂಗನಾಥ ರೆಡ್ಡಿ ವಾದ ಮಾಡಿದ್ದಾರೆ. ಈ ಅರ್ಜಿಯ ವಿಚಾರಣೆಯೂ ನಡೆಯುವುದು ಸೋಮವಾರವೇ.
ಈ ಮೂವರಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಅವರಲ್ಲಿ ಯಾರಿಗೇ ಜಾಮೀನು ಸಿಕ್ಕರೂ, ಸಂಜೆಯ ಹೊತ್ತಿಗೆ ಬಿಡುಗಡೆ ಆಗಬಹುದು. ಅಥವಾ ಮರುದಿನ ಆಗಬಹುದು. ಆದರೆ ಇದೇ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಬಿಡುಗಡೆ ಕಾಣದೆ ಇರುವ ಆ ಮೂವರ ಕಣ್ಣೀರಿಗೆ ಕರಗುವವರು ಯಾರೂ ಸಿಗುತ್ತಿಲ್ಲ. ಶ್ಯೂರಿಟಿ ಹಾಕಿ ಇಲ್ಲದ ತಲೆನೋವು ಯಾಕೆ ತಂದುಕೊಳ್ಳಬೇಕು ಎಂದು ಹೆದರುವವರೇ ಹೆಚ್ಚಿದ್ದಾರೆ. ಸಂಬಂಧಿಕರು, ನೆಂಟರು, ಬಂಧುಗಳು.. ಕಡೆಗೆ ಸ್ನೇಹಿತರೂ ಅವರ ನೆರವಿಗೆ ಬರುತ್ತಿಲ್ಲ.



