ರಾಜ್ಯ ಗುತ್ತಿಗೆದಾರರ ಸಂಘವು 37,370 ಕೋಟಿ ರೂ. ಬಾಕಿ ಬಿಲ್ ಪಾವತಿಗೆ ಮಾರ್ಚ್ 5ರ ಡೆಡ್ ಲೈನ್ ಕೊಟ್ಟಿದೆ. ರಾಜ್ಯದಾದ್ಯಂತ ಸರಕಾರಿ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ಆದರೆ ಇದನ್ನು ಮಾಧ್ಯಮಗಳು ಹತ್ತರಲ್ಲಿ ಹನ್ನೊಂದು ಎಂಬಂತೆ ಸುದ್ದಿ ಬಿತ್ತರಿಸಿ ಸುಮ್ಮನಾಗಿವೆ. ಏಕೆ.. 37 ಸಾವಿರ ಕೋಟಿ ಬಾಕಿ ಎಂದರೆ ಸಣ್ಣ ಮಾತಲ್ಲ. ಹೀಗಿದ್ದರೂ ಮಾಧ್ಯಮಗಳೇಕೆ ಮೌನವಾಗಿವೆ.. ಅದಕ್ಕೆ ಉತ್ತರ ಗುತ್ತಿಗೆದಾರರಲ್ಲೇ ಇದೆ.
ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ʻʻಸರಕಾರ ಮೂರು ವರ್ಷಗಳಿಂದ ಬಾಕಿ ಬಿಲ್ ಬಿಡುಗಡೆ ಮಾಡದ ಕಾರಣ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಹಾಗೂ ಬಡ್ಡಿ ಪಾವತಿಸಲಾಗದೆ ವಿಷ ಕುಡಿಯುವ ಸ್ಥಿತಿಗೆ ತಲುಪಿದ್ದಾರೆ.ಲೋಕೋಪಯೋಗಿ, ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಸಣ್ಣ ನೀರಾವರಿ, ನಗರಾಭಿವೃದ್ಧಿ, ವಸತಿ, ಕಾರ್ಮಿಕ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂ. ಬಾಕಿ ಬಿಲ್ ಬಿಡುಗಡೆ ಮಾಡಬೇಕಿದೆ. ಈ ವಿಷಯವನ್ನು ರಾಹುಲ್ ಗಾಂಧಿ ಅವರ ಗಮನಕ್ಕೆ ತರುವುದಕ್ಕೂ ನಿರ್ಧರಿಸಲಾಗಿದೆ. ಸರಕಾರ ತಕ್ಷಣ ಬಿಲ್ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆʼʼ ಎಂದು ಎಚ್ಚರಿಕೆ ನೀಡಿದ್ದಾರೆ.
ಉಗ್ರ ಹೋರಾಟದ ಮಾತನ್ನಾಡಿದ್ದರೂ ಹೈಲೈಟ್ ಆಗುತ್ತಿಲ್ಲ. ಅದಕ್ಕೆ ಕಾರಣಗಳೂ ಇವೆ. ಈ ಹಿಂದೆಯೂ ಹಲವು ಬಾರಿ ಇದೇ ರೀತಿ ಮಾತನಾಡಿದ್ದ ಗುತ್ತಿಗೆದಾರರ ಸಂಘ, ಅಂತಿಮ ಹಂತದಲ್ಲಿ ಎಲ್ಲವನ್ನೂ ಮಾಧ್ಯಮಗಳ ಸೃಷ್ಟಿ ಎಂದು ಹೇಳಿತ್ತಂತೆ. ಸರ್ಕಾರದ ಹಣಕ್ಕಾಗಿ ಏನೋ ಪಡಿಪಾಟಲು ಬೀಳುತ್ತಿದ್ದಾರೆ ಬಿಡು ಎಂದುಕೊಂಡರೆ, ಗುತ್ತಿಗೆದಾರರು ಮಾಧ್ಯಮಗಳನ್ನೇ ವಿಲನ್ ಮಾಡಿದ್ದಾರೆ. ಇದು ಪದೇ ಪದೇ ರಿಪೀಟ್ ಆದಾಗ.. ಮಾಧ್ಯಮಗಳು ನಿಮ್ಮ ಹಣೆಬರಹ ಎಂದು ಸುಮ್ಮನಾಗಿವೆ ಎನ್ನುತ್ತಿವೆ ಮೂಲಗಳು.
ಹೀಗಾಗಿಯೇ ಬಿಜೆಪಿ ಅವಧಿಗಿಂತ ಹೆಚ್ಚು ಕಮಿಷನ್ ಹೊಡೆಯಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ‘ಹಿಂದಿನ ಬಿಜೆಪಿ ಸರಕಾರಕ್ಕಿಂತ ಈ ಸರಕಾರದಲ್ಲಿಕಮಿಷನ್ ಹಾಗೂ ಭ್ರಷ್ಟಾಚಾರ ಹೆಚ್ಚಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತ ಸಭೆ ಕರೆದರೆ ದಾಖಲೆಗಳ ಸಮೇತ ಎಲ್ಲಾಮಾಹಿತಿ ನೀಡುತ್ತೇವೆ ಎಂದು ಸಂಘಟನೆಯೇನೋ ಹೇಳಿದೆ.. ಇದೇ ಮಾತನ್ನು ಈ ಹಿಂದಿನ ಸುದ್ದಿಗೋಷ್ಠಿಗಳಲ್ಲೂ ಹೇಳಿದ್ದ ಗುತ್ತಿಗೆದಾರರು, ಕೊನೆಗೆ ಸರ್ಕಾರದ ಹಂತದಲ್ಲಿ ಒಂದಿಷ್ಟು ಬಿಲ್ ಪಾಸ್ ಆದ ಕೂಡಲೇ ಮೆತ್ತಗಾಗಿದ್ದರು. ಈಗ ಕಮಿಷನ್ ಆರೋಪವೂ ಕೂಡಾ ಬಾಕಿ ಬಿಲ್ ಪಾವತಿಗಾಗಿ ಮಾಡುತ್ತಿರುವ ಗೇಮ್ ಎನ್ನುವ ಸಂಶಯಗಳಿವೆ.
10 ಮಹಾನಗರ ಪಾಲಿಕೆ ಹಾಗೂ ಕಾರ್ಮಿಕ ಇಲಾಖೆಯಲ್ಲಿಸ್ಥಳೀಯ ಗುತ್ತಿಗೆದಾರರಿಗೆ ಅನ್ಯಾಯವಾಗುವಂತೆ ಪ್ಯಾಕೇಜ್ ಟೆಂಡರ್ ಮಾಡಲಾಗುತ್ತಿದೆ. ಆರ್.ಟಿ.ನಗರ ಮತ್ತು ರಾಜಾಜಿನಗರದ ಖಾಸಗಿ ಕಚೇರಿಗಳಲ್ಲಿಕುಳಿತು ಟೆಂಡರ್ ಹಂಚಿಕೆ ಮಾಡಲಾಗುತ್ತಿದೆ. ನಾವು ಬಿಲ್ ಕೇಳಲು ಹೋದರೆ ಅಧಿಕಾರಿಗಳು ಬರೀ ದುಡ್ಡು ಕೇಳ್ತೀರಾ ಎಂದು ಹಿಯಾಳಿಸುತ್ತಾರೆ. ಚಿಕ್ಕಬಳ್ಳಾಪುರದಲ್ಲಿಗುತ್ತಿಗೆದಾರ ಮುನೇಗೌಡ ಆತ್ಮಹತ್ಯೆಗೆ ಯತ್ನಿಸಿರುವುದು ನಮ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. ಇದು ಇವತ್ತಿನದಲ್ಲ. ಕಳೆದ ಎರಡೂವರೆ ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದಿರುವ ಸಂಘ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ನಮ್ಮ ಸಮಸ್ಯೆಗೆ ಅಷ್ಟೋ ಇಷ್ಟೋ ಸ್ಪಂದಿಸುತ್ತಿದ್ದಾರೆ ಎಂದಿದ್ದಾರೆ.
ಬಿಜೆಪಿಯವರೂ ಕೂಡಾ ಒಂದು ಟ್ವೀಟ್ ಮತ್ತು ಮೀಡಿಯಾಗಳ ಎದುರು ಒಂದು ಬೈಟ್‌ಗೆ ಸೀಮಿತವಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರ ಆರೋಪಗಳು ತೀವ್ರವಾಗಿ ಪರಿಣಾಮ ಬೀರಿದ್ದವು. ಈಗ ಕ್ಯಾರೇ ಎನ್ನುವವರಿಲ್ಲ.



