ಡಿಕೆ ಪರ ಒಕ್ಕಲಿಗ, ಸಿದ್ದು ಪರ ಕುರುಬ ಸ್ವಾಮೀಜಿಗಳ ಹೋರಾಟ. ಸರೀನಾ..? ತಪ್ಪಾ..? ಎಂಬ ಪ್ರಶ್ನೆಗೆ ವ್ಯಕ್ತವಾಗಿರುವ ಹಾಗೂ ವ್ಯಕ್ತವಾಗುತ್ತಿರುವ ಅಭಿಪ್ರಾಯಗಳಲ್ಲೂ ಎರಡು ಮುಖಗಳಿವೆ. ಮಠಗಳು ಈಗ ಕೇವಲ ಮಠಗಳಾಗಿ, ಧಾರ್ಮಿಕ ಸೇವೆಯ ಕೇಂದ್ರಗಳಾಗಿ ಉಳಿದಿಲ್ಲ. ಅವರು ನೇರವಾಗಿ ಒಂದಲ್ಲ ಒಂದು ಪಕ್ಷಕ್ಕೆ ಅಥವಾ ಪಕ್ಷದ ಪರವಾಗಿ ಕೆಲಸ ಮಾಡುತ್ತಿವೆ. ಈಗ ನಡೆಯುತ್ತಿರುವ ಹೋರಾಟವನ್ನೇ ನೋಡಿ.. ಅದಕ್ಕೆ ಸಿಗುತ್ತಿರುವ ಬೆಂಬಲವನ್ನೇ ನೋಡಿ. ಇದು ಹೊಸದೇನಲ್ಲ.
ಕುಮಾರಸ್ವಾಮಿ ಪ್ರಕಾರ ಆದಿಚುಂಚನರಿ ಮಠದ ನಿರ್ಮಲಾನಂದ ಶ್ರೀಗಳು ಡಿಕೆ ಶಿವಕುಮಾರ್ ಪರ ಮಾತನಾಡಿದ್ದು ತಪ್ಪು.ʻʻ ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಸ್ವಾಮೀಜಿಗಳ ಮಧ್ಯಪ್ರವೇಶ ಅನಗತ್ಯ. ರಾಜಕಾರಣಿಗಳಷ್ಟೇ ರಾಜಕಾರಣ ಮಾಡಲಿ. ಸ್ವಾಮೀಜಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು. ನಾನು ಅಧಿಕಾರ ಕಳೆದುಕೊಂಡಾಗ ಯಾವ ಮಠಾಧಿಪತಿಗಳ ನೆರವನ್ನೂ ಕೇಳಿರಲಿಲ್ಲ. ರಾಜಕಾರಣಿಗಳ ಕೆಲಸವೇ ಬೇರೆ, ಸ್ವಾಮೀಜಿಗಳ ಕೆಲಸವೇ ಬೇರೆʼʼ ಎಂದಿದ್ದಾರೆ.
ಆದರೆ ಕುಮಾರಸ್ವಾಮಿಯವರೂ ಬಹುಶಃ ಮರೆತಿರಬಹುದಾದ ವಿಚಾರ ಎಂದರೆ.. ಸಮ್ಮಿಶ್ರ ಸರ್ಕಾರ ಇದ್ದಾಗ ಬಹಿರಂಗ ವೇದಿಕೆಯಲ್ಲಿಯೇ ಒಕ್ಕಲಿಗ ಸ್ವಾಮೀಜಿಗಳು ಕುಮಾರಸ್ವಾಮಿ ಪರ ಮಾತನಾಡಿದ್ದರು. ಡಿಕೆ ಶಿವಕುಮಾರ್ ಅವರಿಗೆ ʻಕುಮಾರಸ್ವಾಮಿ ಸರ್ಕಾರದ ಪರ ಕೆಲಸ ಮಾಡುʼ ಎಂಬ ಸಂದೇಶ ನೀಡಿದ್ದರು. ಅದನ್ನು ಮರೆತಿರುವ ಕುಮಾರಸ್ವಾಮಿ ಈಗ ರಾಜಕಾರಣಿಗಳು ಹಾಗೆಲ್ಲ ಮಾತನಾಡಬಾರದು ಎನ್ನುತ್ತಿದ್ಧಾರೆ. ಡಿವಿ ಸದಾನಂದ ಗೌಡ ಅವರನ್ನು ಸಿಎಂ ಪಟ್ಟದಿಂದ ಕೆಳಗಿಳಿಸುವ ವೇಳೆಯಲ್ಲೂ ಒಕ್ಕಲಿಗ ಸ್ವಾಮೀಜಿಗಳು ಬೀದಿಗೆ ಬಂದಿದ್ದರು.
ಡಿಕೆ ಶಿವಕುಮಾರ್ ಒಕ್ಕಲಿಗ ಮಠದ ಹಿರಿಯ ಸ್ವಾಮೀಜಿ ಇಲ್ಲದಿದ್ದರೆ ದೇವೇಗೌಡರು ಮುಖ್ಯಮಂತ್ರಿ ಆಗುತ್ತಿದ್ದರೆ ಎಂದು ಬಾಲಗಂಗಾಧರ ನಾಥರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದಿಚುಂಚನಗಿರಿ ಮಠವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸಿದವರಲ್ಲಿ ದೇವೇಗೌಡರ ಪಾತ್ರ ದೊಡ್ಡದಿತ್ತು. ಅಂಬರೀಷ್, ಮಾದೇಗೌಡ ಸೇರಿದಂತೆ ಹಲವರ ಶ್ರಮ ಇತ್ತು ಎನ್ನುವುದು ಗುಟ್ಟೇನೂ ಅಲ್ಲ.
ದೇವೇಗೌಡರ ಪರ ಸ್ವಾಮೀಜಿಗಳು ರಸ್ತೆಗೆ ಇಳಿಯಲಿಲ್ಲವೇ? ಸದಾನಂದಗೌಡರಿಗೆ ತೊಂದರೆ ಆದಾಗ ಸ್ವಾಮೀಜಿಗಳು ಸುಮ್ಮನೆ ಕೂತಿದ್ದರಾ.. ಎಂದೆಲ್ಲ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ಇನ್ನು ಕುರುಬ ಸಮುದಾಯದ ನಿರಂಜನಾನಂದ ಪುರಿ ಸ್ವಾಮಿಗಳು ಮೊದಲ ದಿನ ಮಾತನಾಡಿದಾಗ ಆಡಿದ್ದ ಮಾತುಗಳೇ ಬೇರೆ. 2ನೇ ದಿನದ ವರ್ಷನ್ನೇ ಬೇರೆ ಇತ್ತು. 2ನೇ ದಿನ ನೇರವಾಗಿ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡಿದ ಸ್ವಾಮೀಜಿ.. ಅಖಾಡಕ್ಕೆ ಧುಮುಕಿ ಬಿಟ್ಟರು.
ಇತ್ತೀಚೆಗೆ ಖಾವಿಧಾರಿಗಳು ನೇರವಾಗಿಯೇ ರಾಜಕೀಯ ಮಾಡುತ್ತಿದ್ದಾರೆ. ಯಡಿಯೂರಪ್ಪ ಪರ ಲಿಂಗಾಯತ ಸ್ವಾಮೀಜಿಗಳು, ಸಿದ್ದರಾಮಯ್ಯ ಪರ ಕುರುಬ ಸ್ವಾಮಿಗಳು ಹಾಗೂ ವೀರಶೈವರೇ ಬೇರೆ.. ಲಿಂಗಾಯತರೇ ಬೇರೆ ಎನ್ನುವ ಕೆಲವು ವಿರಕ್ತ ಮಠಗಳ ಸ್ವಾಮೀಜಿಗಳು, ಡಿಕೆ, ಹೆಚ್‌ಡಿಕೆ ಪರ ಒಕ್ಕಲಿಗ ಸ್ವಾಮಿಗಳು, ಶ್ರೀರಾಮುಲು ಪರ ವಾಲ್ಮೀಕಿ ಸ್ವಾಮಿಗಳು.. ಹೀಗೆ ಒಬ್ಬೊಬ್ಬ ನಾಯಕರ ಹಿಂದೆ ಒಂದೊಂದು ಜಾತಿಯ ಸ್ವಾಮಿಗಳಿದ್ದಾರೆ.
ಅವರು ಪಕ್ಷದ ಅಧಿಕೃತ ಸದಸ್ಯರಾಗಿರುವುದಿಲ್ಲ, ಅಷ್ಟೆ.



