ಸಿರಿಗೆರೆಯ ತರಳಬಾಳು ಮಠಕ್ಕೆ ಕರ್ನಾಟಕವನ್ನೂ ಮೀರಿ ಭಕ್ತರಿದ್ದಾರೆ. ಮಠಕ್ಕೆ ಇರುವ ಖ್ಯಾತಿ ದೊಡ್ಡದು. 12ನೇ ಶತಮಾನದಲ್ಲಿ ಶುರುವಾದ ಮಠಕ್ಕೆ ಸುದೀರ್ಘ ಇತಿಹಾಸವಿದೆ. ಶತಶತಮಾನಗಳಿಂದ ಭಕ್ತರು ಈ ಮಠಕ್ಕೆ ನಡೆದುಕೊಂಡು ಬಂದಿದ್ದಾರೆ. ಆದರೆ, ಈ ಮಠ, ಈಗ ರಾಜ್ಯಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಸಿರಿಗೆರೆಯ ತರಳಬಾಳು ಸ್ವಾಮೀಜಿ ಶಿವಮೂರ್ತಿ ಶಿವಾಚಾಯರ್ಯ ಅವರನ್ನು ಮಠದ ಪೀಠಾಧಿಪತಿ ಸ್ಥಾನದಿಂದ ಕೆಳಗಿಳಿಸುವುದಕ್ಕೆ ಹೋರಾಟವೇ ನಡೆಯುತ್ತಿದೆ.
ಚಿತ್ರದುರ್ಗ ಸಿರಿಗೆರೆ ತರಳುಬಾಳು ಗುರುಪೀಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ತೀವ್ರ ಹೋರಾಟ ಶುರುವಾಗಿದೆ. ಸ್ವಾಮೀಜಿ ವಿರುದ್ಧ ಇನ್ನೊಂದು ಸಲ ಸಮಾಜದ ಪ್ರಮುಖ ಭಕ್ತರ ಸಭೆ ಮಾಡಲಾಗಿದೆ. ಸ್ವಾಮೀಜಿ ಪೀಠ ತ್ಯಾಗ ಮಾಡಿ ಎಂದು ಭಕ್ತರು ಪಟ್ಟು ಹಿಡಿದಿದ್ದಾರೆ. ಸಿರಿಗೆರೆ ಮಠದ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಆಸ್ತಿ ಸ್ವಾಮೀಜಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬರ್ತಿದೆ.
ದಾವಣಗೆರೆ ನಗರದ ಹೊರ ವಲಯದ ಅಪೂರ್ವ ರೆಸಾರ್ಟ್ನಲ್ಲಿ ನಡೆದ ಸಿರಿಗೆರೆ ಮಠದ ಭಕ್ತರ ಸಭೆಯಲ್ಲಿ ಗಂಭೀರ ಆರೋಪ ಕೇಳಿ ಬಂದಿದೆ. ಲಿಂಗಾಯತ ಸಮಾಜವೇ ಅಚ್ಚರಿ ಪಡುವಂತೆ ಎರಡು ಸಾವಿರ ಕೋಟಿ ರೂ. ಹಣ ಆಸ್ತಿ ನಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಸ್ವಾಮೀಜಿ ಸಾಧು ಲಿಂಗಾಯತ ಸಮಾಜಕ್ಕೆ ಮೋಸ ಮಾಡಬಾರದು. ಭಕ್ತರು ದಾನ, ಧರ್ಮ ಮಾಡಿದ್ದು ಸಮಾಜಕ್ಕೆ. ಆದರೆ ಸ್ವಾಮೀಜಿ ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದಾರೆ. ಮಠದ ಬೈಲಾ ತಿದ್ದು ಮಾಡಿದ್ದಾರೆ. ನಾವು ರೆಸಾರ್ಟ್ನಲ್ಲಿ ಸಭೆ ಮಾಡಿದ್ರೆ ಕುಡುಕರ ಸಭೆ ಎಂದಿದ್ದಾರೆ. ನಾವು ಕುಡುಕರು ಆದರೆ ನೀವು ಹಾಲು ಕುಡಿದವರು ಚೆನ್ನಾಗಿ ಮಾತಾಡಲಿ ಎಂದಿದ್ದಾರೆ ಸಮುದಾಯದ ಪ್ರಮುಖ ನಾಯಕರು ಆರೋಪ ಮಾಡಿದ್ದಾರೆ.
1977ರಲ್ಲಿ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ರೂಪಿಸಿದ್ದ ಬೈಲಾ ರದ್ದುಪಡಿಸಿ 1990ರಲ್ಲಿ ಏಕವ್ಯಕ್ತಿ ಟ್ರಸ್ಟ್ ಡೀಡ್ ಮಾಡಿಕೊಳ್ಳಲಾಗಿದೆ. ಹಳೆಯ ಮಠವನ್ನು ಗುಳುಂ ಮಾಡಿ ಹೊಸ ನಾಮಕರಣ ಮಾಡಲಾಗಿದೆ. ಜಮೀನು, ಶಿಕ್ಷಣ ಸಂಸ್ಥೆ ಸೇರಿ ಮಠದ ಸಂಪೂರ್ಣ ಆಸ್ತಿ ಏಕವ್ಯಕ್ತಿ ಟ್ರಸ್ಟ್‌ಗೆ ವರ್ಗಾವಣೆಗೊಂಡಿದೆ ಎಂದು ಆರೋಪ ಮಾಡಿದ್ದಾರೆ.
ಈ ಟ್ರಸ್ಟ್‌ನಲ್ಲಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಪರಮಾಧಿಕಾರ ಹೊಂದಿದ್ದು, ಎಲ್ಲವೂ ಅವರ ಸ್ವತ್ತಾಗಿ ಬದಲಾವಣೆ ಆಗಿದೆ. 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ ನೀವು ಬಂಡವಾಳಶಾಹಿ ಅಲ್ಲವೆ? ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಪ್ರಶ್ನೆ ಮಾಡಿದ್ದಾರೆ.
ಮಠ ಹಾಗೂ ಪೀಠಾಧಿಪತಿಯನ್ನು ಭಕ್ತರು ವಿರೋಧ ಮಾಡುತ್ತಿಲ್ಲ. ಬದಲಾಗಿ ಮಠದಲ್ಲಿರುವ ಭಕ್ತರ ಆಸ್ತಿ ಉಳಿಯಬೇಕೆಂಬುದಷ್ಟೇ ನಮ್ಮ ಉದ್ದೇಶ. ಭಕ್ತರ ಮನಸಿನಲ್ಲಿ ವಿಷಬೀಜ ಬಿತ್ತಿ ಸಮಾಜವನ್ನು ಇಬ್ಭಾಗ ಮಾಡಬೇಡಿ. ಸುತ್ತೂರು ಮಠ, ಮಾದಾರ ಚನ್ನಯ್ಯ ಗುರುಪೀಠದಂತೆ ತರಳಬಾಳು ಮಠಕ್ಕೂ ಉತ್ತಾರಾಧಿಕಾರಿ ನೇಮಕ ಆಗಬೇಕು ಎನ್ನುವುದು ಭಕ್ತರ ವಾದ.
ಅನ್ನ, ಅಕ್ಷರ ದಾಸೋಹದಲ್ಲಿ ವೀರಶೈವ ಲಿಂಗಾಯತ ಮಠಗಳು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಸಮಾಜ ತಿದ್ದುವ, ಭಕ್ತರನ್ನು ಉತ್ತಮ ಮಾರ್ಗದಲ್ಲಿ ನಡೆಸುವ ಮಠಾಧೀಶರಿಗೆ ಆಸ್ತಿ, ಹಣದ ವ್ಯಾಮೋಹ ಏಕೆ? ಭಕ್ತರು ಮಠಕ್ಕೆ ನೀಡಿದ ಕಾಣಿಕೆಯನ್ನ ಸ್ವಂತ ಆಸ್ತಿಯಾಗಿ ಪರಿವರ್ತನೆ ಮಾಡಿಕೊಳ್ಳುವುದು ತಪ್ಪಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ ಉದ್ಯಮಿ ಅಣಬೇರು ರಾಜಣ್ಣ.
60 ವರ್ಷಕ್ಕೆ ಪೀಠ ತ್ಯಾಗ ಮಾಡಬೇಕಿದ್ದ ಸ್ವಾಮೀಜಿಯವರಿಗೀಗ 78 ವರ್ಷವಾಗಿದೆ. ಬೈಲಾ ತಿದ್ದುಪಡಿ ಮಾಡಿಕೊಂಡು, ಭಕ್ತರ ಮಠವನ್ನು ಸ್ವಂತ ಮಾಡಿಕೊಂಡಿದ್ದಾರೆ. ಬೈಲಾದಲ್ಲಿ ಮಠದ ಹೆಸರನ್ನೇ ಬದಲಿಸಿದ್ದಾರೆ ಎನ್ನುವುದು ರಾಜಣ್ಣ ಅವರ ಆರೋಪ.
ಸ್ವಾಮೀಜಿಗಳಿಗೆ ಕೈಮುಗಿದು ಕೇಳುತ್ತೇನೆ. ಸಮಾಜವನ್ನು ಒಡೆಯಬೇಡಿ. ಭಕ್ತರಲ್ಲಿ ವಿಷ ಬಿತ್ತಬೇಡಿ. ನಾವು ಕುಡುಕರು ಎಂದಿದ್ದೀರಿ, ನೀವು ಗೋವಿನ ಹಾಲು ಕುಡಿದವರು, ನ್ಯಾಯದಿಂದ ನಡೆದುಕೊಳ್ಳಿ ಎಂದಿದ್ದಾರೆ ಬಿಸಿ ಪಾಟೀಲ್.
ಕಳೆದ ನಾಲ್ಕರಂದು ಅದೇ ಅಪೂರ್ವ ರೆಸಾರ್ಟ್ನಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಪಾಲ್ಗೊಂಡಿದ್ದರು. ಆದರೆ ಈ ಬಾರಿ ನಡೆದ ಸಭೆಗೆ ಅವರು ಬಂದಿರಲಿಲ್ಲ. ಸಭೆಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್, ಎಸ್ ಎ ರವೀಂದ್ರನಾಥ, ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸಾಧು ಲಿಂಗಾಯತ ಸಮಾಜದ ಹಿರಿಯ ಮುಖಂಡ ಅಣಬೇರು ರಾಜಣ್ಣ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.



