ಪಂಜಾಬ್ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ವರ್ಷದ ಹಿಂದಷ್ಟೇ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಸರ್ಕಾರಕ್ಕೆ ಪರಿಸ್ಥಿತಿ ನಿಭಾಯಿಸಲು ಆಗುತ್ತಿಲ್ಲ. ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಇತ್ತೀಚೆಗಷ್ಟೇ ನವಜೋತ್ ಸಿಂಗ್ ಸಿಧು, ಪಂಜಾಬ್ ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನೌಕರರ ಸಂಬಳ ಕೊಡುವುದಕ್ಕೂ ಪರದಾಡುವ ಸ್ಥಿತಿಯಲ್ಲಿದೆ. ಉಚಿತ ಭಾಗ್ಯಗಳಿಂದಾಗಿ ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲಗಳೇ ಇಲ್ಲವಾಗಿವೆ ಎಂದು ಲೆಕ್ಕ ಕೊಟ್ಟಿದ್ದರು. ಆಗ ಸಿಧು ಆರೋಪಗಳನ್ನೆಲ್ಲ ನಿರಾಕರಿಸಿದ್ದ ಪಂಜಾಬ್ ಸಿಎಂ ಭಗವಂತ್ ಸಿಂಗ್ ಮಾನ್, ಇದೀಗ ರಾಜ್ಯಪಾಲರಿಗೆ ಪತ್ರ ಬರೆದು ಆರ್ಥಿಕ ನೆರವು ಒದಗಿಸಿ ಕೊಡಿ ಎಂದು ಕೋರಿದ್ದಾರೆ.
ಪಂಜಾಬ್ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್‌ಗೆ ಪತ್ರ ಬರೆದಿರುವ ಸಿಎಂ ಭಗವಂತ್ ಸಿಂಗ್ ಮಾನ್, ರಾಜ್ಯ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು, ಪ್ರಧಾನಿ ಮೋದಿಗೆ ಮನವಿ ಮಾಡಿ ರಾಜ್ಯಕ್ಕೆ ಬರಬೇಕಾಗಿರುವ ಫಂಡ್ ರಿಲೀಸ್ ಮಾಡಿಸಿ ಎಂದು ಕೇಳಿಕೊಂಡಿದ್ದಾರೆ. ಅದರೊಂದಿಗೆ ಕಳೆದ ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡ ಸಾಲವೆಷ್ಟು ಎನ್ನುವ ಮಾಹಿತಿಯನ್ನೂ ರಾಜ್ಯಪಾಲರು ಕೇಳಿದ್ದರು. ಅದಕ್ಕೂ ಉತ್ತರ ನೀಡಿರುವ ಮಾನ್, ಕಳೆದ ಒಂದು ವರ್ಷದ ಅವಧಿಯಲ್ಲಿ ರಾಜ್ಯ ಸರ್ಕಾರ 47,107 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದು, ಇದರಲ್ಲಿ 48,530 ಕೋಟಿಯನ್ನು ಖರ್ಚು ಮಾಡಿದ್ದೇವೆ. ಬರೋಬ್ಬರಿ 27 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ಬಡ್ಡಿ ರೂಪದಲ್ಲಿಯೇ ಕಟ್ಟಿದ್ದೇವೆ ಎಂದು ತಿಳಿಸಿದ್ದಾರೆ.
ಉಚಿತ ವಿದ್ಯುತ್, 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ತಿಂಗಳಿಗೆ 1 ಸಾವಿರ ರೂಪಾಯಿ, ನಿರುದ್ಯೋಗ ಭತ್ಯೆ ಹಾಗೂ ಉಚಿತ ನೀರನ್ನು ತನ್ನ ಪಂಜಾಬ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಅದಾಗಲೇ ಸಾಲದ ಶೂಲದಲ್ಲಿದ್ದ ಪಂಜಾಬ್‌ಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರಾಜ್ಯಪಾಲರಿಗೆ ನೀಡಿರುವ ಉತ್ತರದಲ್ಲಿ ಪಂಜಾಬ್ ಸರ್ಕಾರ 2022-23ರಲ್ಲಿ 32,447 ಕೋಟಿ ರೂಪಾಯಿ ಸಾಲ ಪಡೆದುಕೊಂಡಿತ್ತು. 2023ರ ಏಪ್ರಿಲ್‌ನಿಂದ ಆಗಸ್ಟ್‌ನವರೆಗೆ 14,660 ಕೋಟಿ ರೂಪಾಯಿ ಸಾಲ ಪಡೆದುಕೊಂಡಿದೆ. ಪಂಜಾಬ್‌ನ ಒಟ್ಟಾರೆ ಬಜೆಟ್ಟಿಗೆ ಹೋಲಿಸಿದರೆ ಇದು ಅತ್ಯಂತ ಹೆಚ್ಚು. ಮಿತಿಯನ್ನೂ ಮೀರಿದೆ. ದೇಶದಲ್ಲಿಯೇ ಅತೀ ಹೆಚ್ಚು ಸಾಲ ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಪಂಜಾಬ್ ಪಾತ್ರವಾಗಿದ್ದು, 2.8 ಲಕ್ಷ ಕೋಟಿ ಸಾಲ ಹೊಂದಿದೆ. ಈ ವಿತ್ತೀಯ ವರ್ಷದ ಅಂತ್ಯಕ್ಕೆ ಸಾಲದ ಪ್ರಮಾಣ ಮೂರೂವರೆ ಲಕ್ಷಕ್ಕೆ ಏರುವ ಆತಂಕ ಆರ್ಥಿಕ ತಜ್ಞರದ್ದು.
ನನ್ನ ಹಿಂದಿನ ಸರ್ಕಾರ ನಿರ್ಲಕ್ಷಿಸಿದ ಸಂಸ್ಥೆಗಳು ಅಥವಾ ಯೋಜನೆಗಳಿಗೆ ಧನಸಹಾಯ ಮಾಡಲು ನಾವು ಸಾಲ ಮತ್ತು ನಮ್ಮ ಸ್ವಂತ ಆದಾಯ ಸಂಪನ್ಮೂಲಗಳನ್ನು ಬಳಸಿದ್ದೇವೆ, ಹೊಸ ಸಾಲವನ್ನು ರಚಿಸಲು ಬಳಸಿದ್ದೇವೆ. ಬಂಡವಾಳದ ಆಸ್ತಿಗಳು ಮತ್ತು ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುತ್ತೇವೆ ಎನ್ನುವುದು ಭಗವಂತ್ ಸಿಂಗ್ ಮಾನ್ ವಾದ.
ಕಳೆದ ತಿಂಗಳು, ಪಂಜಾಬ್ ಮುಖ್ಯಮಂತ್ರಿ ಮಾನ್ ಅವರು, ರಾಜ್ಯಪಾಲ ಪುರೋಹಿತ್ ಅವರಿಗೆ 5,637.40 ಕೋಟಿ ರೂಪಾಯಿ ಮೊತ್ತದ ಬಾಕಿ ಉಳಿದಿರುವ ಗ್ರಾಮೀಣಾಭಿವೃದ್ಧಿ ನಿಧಿಯ (ಆರ್‌ಡಿಎಫ್) ವಿಚಾರವನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳ ಜೊತೆ ಪ್ರಸ್ತಾಪ ಮಾಡುವಂತೆ ತಿಳಿಸಿದ್ದರು. ಮಾನ್‌ಗೆ ಉತ್ತರಿಸಿದ ರಾಜ್ಯಪಾಲರು, ಆಮ್ ಆದ್ಮಿ ಪಕ್ಷದ ಆಡಳಿತದಲ್ಲಿ ಪಂಜಾಬ್‌ನ ಸಾಲವು ಸುಮಾರು 50,000 ಕೋಟಿ ರೂ.ಗಳಷ್ಟು ಏರಿಕೆಯಾಗಿದೆ ಮತ್ತು ಈ “ದೊಡ್ಡ ಮೊತ್ತದ” ಬಳಕೆಯ ವಿವರಗಳನ್ನು ಕೇಳಿದ್ದರು. ಇದರಿಂದಾಗಿ ಅವರು ಹಣದ ಬಗ್ಗೆ ಪ್ರಧಾನಿ ಅವರ ಬಳಿ ಸೂಕ್ತವಾಗಿ ಚರ್ಚೆ ಮಾಡಬಹುದು ಎಂದಿದ್ದರು. ಸರ್ಕಾರ ಖರ್ಚು ಮಾಡಿದ ಪ್ರತಿ ಪೈಸೆಯ ಖಾತೆಯನ್ನು ರಾಜ್ಯಪಾಲರಿಗೆ ನೀಡಿದ್ದೇನೆ ಎಂದು ಮಾನ್ ತಿಳಿಸಿದ್ದಾರೆ.



