ಸಿಪಿ ಯೋಗೇಶ್ವರ್ ಅವರಿಗೆ ಈಗ ಬ್ಯಾಡ್ ಟೈಂ ಶುರುವಾದಂತಿದೆ. ಅತ್ತ ಪಕ್ಷ ಬಿಟ್ಟು ಪಕ್ಷಕ್ಕೆ ಸೇರುವ ಸಿಪಿ ಯೋಗೇಶ್ವರ್ ಅವರಿಗೆ ಈ ಬಾರಿಯ ಎಲೆಕ್ಷನ್ ಅತ್ಯಂತ ಮಹತ್ವದ್ದು. ಸೋತರೆ ಹ್ಯಾಟ್ರಿಕ್ ಸೋಲು. ಗೆದ್ದರಷ್ಟೇ ಉಳಿಗಾಲ. ಹೀಗಿರುವ ಪರಿಸ್ಥಿತಿಯಲ್ಲಿ ಸಿಪಿ ಯೋಗೇಶ್ವರ್ ವಿರುದ್ಧ ಮಗಳು ನಿಶಾ ತಿರುಗಿಬಿದ್ದಿದ್ದರು. ಈಗ ನೋಡಿದರೆ ಮಗನೂ ತಿರುಗಿ ಬಿದ್ದಿದ್ದಾರೆ. ಇಷ್ಟಕ್ಕೂ ಕಥೆ ಏನು..?
ಸಿಪಿ ಯೋಗೇಶ್ವರ್ ಅವರಿಗೆ ಇಬ್ಬರು ಪತ್ನಿಯರು. ಮೊದಲನೆಯವರು ಮಂಜುಳಾ. ಅವರಿಗೆ ಇಬ್ಬರು ಮಕ್ಕಳು. ಒಬ್ಬರು ಮಗಳು ನಿಶಾ. ಮತ್ತೊಬ್ಬರು ಮಗ ಶ್ರವಣ್. ಇನ್ನೊಬ್ಬರು ಶೀಲಾ. ಅವರಿಗೆ ಧ್ಯಾನ್ ಎಂಬ ಮಗ ಇದ್ದಾರೆ. ಈಗ ತಿರುಗಿಬಿದ್ದಿರುವುದು ಮೊದಲ ಪತ್ನಿ ಮಕ್ಕಳಾದ ನಿಶಾ ಮತ್ತು ಶ್ರವಣ್.
2023ರಲ್ಲಿ ತಮ್ಮ ಪತಿಯ ಪರ ಇಬ್ಬರೂ ಪತ್ನಿಯರು ಮತ್ತು ಮೂವರೂ ಮಕ್ಕಳು ಪ್ರಚಾರ ಮಾಡಿದ್ದರು. ಈಗ ನೋಡಿದರೆ ಎಲ್ಲವೂ ಉಲ್ಟಾ. ಮೊದಲು ತಿರುಗಿಬಿದ್ದವರು ನಿಶಾ ಯೋಗೇಶ್ವರ್. ಈಗ ತಿರುಗಿಬಿದ್ದಿರುವುದು ಮಗ ಶ್ರವಣ್. ಮಗ ತಿರುಗಿಬಿದ್ದಿರುವ ಪ್ರಕರಣದಲ್ಲೂ ನಿಶಾ ಹೆಸರು ಇದೆ.
ವಿಷಯ ಏನೆಂದರೆ ಬೆಂಗಳೂರಿನ ಮನೆಯಲ್ಲಿ ಪಾಲು ಕೇಳಿ ಕೋರ್ಟ್ ಮೊರೆ ಹೋಗಿರುವ ಪ್ರಕರಣ ಇದು. ವಿಶೇಷ ಎಂದರೆ ಇದು ನಿಶಾಗೆ ಗಿಫ್ಟ್ ನೀಡಿದ್ದ ಮನೆ ಎನ್ನುವುದೇ ಅಸಲಿ ಕಥೆ. ಸಿಪಿ ಯೋಗೇಶ್ವರ ಅವರ ಮೊದಲ ಪತ್ನಿ ಮಂಜುಳಾ ಮತ್ತು ಪುತ್ರ ಶ್ರವಣ್ ಅವರು ಎರಡೂವರೆ ವರ್ಷದ ಹಿಂದೆ ಬೆಂಗಳೂರಿನಲ್ಲಿ ಮನೆ ಖರೀದಿಸಿದ್ದರು. ಈ ಮನೆ ಸಿಪಿ ಯೋಗೇಶ್ವರ್ ಮೊದಲ ಪತ್ನಿ ಹಾಗೂ ಶ್ರವಣ್ ಹೆಸರಲ್ಲಿದೆ. ಶ್ರವಣ್ ಹಾಗೂ ಆತನ ತಾಯಿ ಮಂಜುಳಾ ಇಬ್ಬರೂ ಸೇರಿ ಮನೆಯನ್ನು ನಿಶಾ ಯೋಗೇಶ್ವರ್ ಗೆ ಉಡುಗೊರೆಯಾಗಿ ನೀಡಿದ್ದರು.
ಕೋರ್ಟಿಗೆ ಹೋಗಿರುವುದು ದಾಖಲೆಗಳ ಪ್ರಕಾರ ಶ್ರವಣ್. ಅಂದರೆ ಸೋದರಿಗೆ ನೀಡಿದ್ದ ಮನೆಯಲ್ಲಿ ಪಾಲು ಕೇಳಿರುವುದು ಸೋದರ ಶ್ರವಣ್. ಆದರೆ ಈಗ ಶ್ರವಣ್ ತನ್ನ ಗಮನಕ್ಕೆ ವಿಷಯ ಬಂದೇ ಇಲ್ಲ. ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಇರುವ ಸಹಿ ನನ್ನದಲ್ಲ. ನನ್ನ ತಂದೆಯೇ ನನ್ನ ಸಹಿಯನ್ನು ಪೋರ್ಜರಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಮನೆಯಲ್ಲಿ ಪಾಲು ನೀಡುವಂತೆ ಕೇಸ್ ದಾಖಕಾದ ಬಳಿಕ ವಕೀಲರಿಂದ ಶ್ರವಣ್ ಗೆ ಕರೆ ಬಂದಿದೆ. ತಾನು ಯಾವುದೇ ಸಹಿ ಮಾಡಿಲ್ಲ ಎಂದು ತಂದೆ ಸಿಪಿ ಯೋಗೇಶ್ವರ್ ಅವರಿಗೆ ಮಗ ಶ್ರವಣ್ ಕರೆ ಮಾಡಿದ್ದಾನೆ. ಫೋನ್‌ನಲ್ಲಿ ಮಾತನಾಡುವಾಗ. ತಾವೇ ನಿನ್ನ ಸಹಿ ಮಾಡಿದ್ದೇನೆ ಎಂದು ಸಿಪಿ ಯೋಗೇಶ್ವರ್ ಅವರು ಒಪ್ಪಿಕೊಂಡಿದ್ದಾರೆ. ತನ್ನ ಸಹಿಯನ್ನು ತಮ್ಮ ತಂದೆಯೇ ಪೋರ್ಜರಿ ಮಾಡಿದ್ದಾರೆ ಎಂಬ ಆರೋಪದ ಅಡಿ ತಂದೆಯ ವಿರುದ್ಧವೇ ಕೋರ್ಟ್ ಗೆ ಶ್ರವಣ್ ದೂರು ಸಲ್ಲಿಸಿದ್ದಾರೆ.
ಶ್ರವಣ್ ಹೇಳೋದು ಏನು ಎಂದರೆ ಆ ಮನೆಯನ್ನು ತಮ್ಮ ಸೋದರಿಗೆ ಪ್ರೀತಿಯಿಂದ ನಾನು ಮತ್ತು ನನ್ನ ತಾಯಿ ಗಿಫ್ಟ್ ಕೊಟ್ಟಿದ್ದೇವೆ. ಅದನ್ನು ಆಕೆಯಿಂದ ಕಿತ್ತುಕೊಳ್ಳುವ ಯಾವ ಆಲೋಚನೆಯೂ ತಮಗೆ ಇಲ್ಲ ಎಂದಿರುವ ಶ್ರವಣ್ ನನ್ನ ಹೆಸರಿನಲ್ಲಿ ಅಮ್ಮ ಮತ್ತು ಸಹೋದರಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದರ ವಿರುದ್ಧ ನಾನು ಕೋರ್ಟ್ ಮೊರೆ ಹೋಗಿದ್ದೇನೆ. ನಾನು ಯಾವುದೇ ಸಹಿ ಮಾಡಿಲ್ಲ. ಮನೆಯಲ್ಲಿ ಭಾಗವನ್ನೂ ಕೇಳಿಲ್ಲ ಎಂದು ದೂರಿದ್ದಾರೆ.



