ಧರ್ಮಸ್ಥಳದಲ್ಲೀಗ ಮತ್ತೆ ತಲೆಬುರುಡೆ ಶೋಧ ಶುರುವಾಗಿದೆ. ಸೌಜನ್ಯ ಅವರ ಮಾವ ವಿಠ್ಠಲ ಗೌಡ ಹೇಳಿದಂತೆ ಬಂಗ್ಲೆಗುಡ್ಡೆ ಕಾಡಿನಲ್ಲಿಯೂ ಎಸ್‌ಐಟಿ ಶೋಧ ನಡೆಸಿದೆ. ಈ ಶೋಧ ಕಾರ್ಯದ ವೇಳೆ 5 ಕಡೆ ಅಸ್ಥಿಪಂಜರ ಸಿಕ್ಕಿವೆ. 5 ಮಾನವನ ತಲೆಬುರುಡೆ ಮತ್ತು 100 ಮೂಳೆಗಳ ಪತ್ತೆ ಆಗಿದ್ದು, ಅವುಗಳನ್ನು ಸುಕೊ ತಂಡದ ಸಹಾಯದಿಂದ ಎಸ್‌ಐಟಿ ಸಂಗ್ರಹಿಸಿದೆ. ವಿಶೇಷ ತನಿಖಾ ತಂಡ(ಎಸ್‌ಐಟಿ) ಪ್ರತ್ಯೇಕ ಮೂರು ತಂಡಗಳಾಗಿ ಶೋಧ ಕಾರ್ಯ ನಡೆಸಿತು. ದಿನಪೂರ್ತಿ ಶೋಧ ಕಾರ್ಯಾಚರಣೆ ನಡೆಸಿದೆ. ಆದರೆ ಮೂಲಗಳ ಪ್ರಕಾರ ಈ ತಲೆಬುರುಡೆ, ಮೂಳೆಗಳನ್ನು ಯಾರೂ ಹೂತು ಹಾಕಿರಲಿಲ್ಲ. ಭೂಮಿಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೂಳೆಗಳು. ಈ ಎಲ್ಲ ಅಸ್ಥಿಪಂಜರಗಳ ಅವಶೇಷಗಳು ಪತ್ತೆಯಾಗಿರುವುದು ಭೂಮಿಯ ಮೇಲ್ಭಾಗದಲ್ಲಿ. ಅವುಗಳನ್ನೇ ದೊರೆತ ಮೂಳೆಗಳನ್ನು ಸೋಕೋ ತಂಡ ಸಂಗ್ರಹಿಸಿದೆ. ಅಲ್ಲಿ ಮಾನವ ದೇಹದ ಕೆಲವು ಭಾಗಗಳ ಅವಶೇಷಗಳು, ಬಟ್ಟೆಗಳ ತುಂಡು ಪತ್ತೆಯಾಗಿದೆ. ಸಂಜೆ ವೇಳೆ ಅಂಗಿ, ಪ್ಯಾಂಟ್, ಸೀರೆ, ಊರುಗೋಲು ಹಾಗೂ ಲೈಸೆನ್ಸ್ ಪತ್ತೆಯಾಗಿದ್ದು, ಅವುಗಳ ಮಹಜರು ಪ್ರಕ್ರಿಯೆ ನಡೆಸಲಾಗಿದೆ.
ಬಂಗ್ಲೆಗುಡ್ಡೆ ತಲೆಬುರುಡೆ ರಹಸ್ಯದ ಬಗ್ಗೆ ಹೈಕೋರ್ಟ್ ರಿಟ್ ಅರ್ಜಿಯಲ್ಲಿ ಸೌಜನ್ಯ ಮಾವ ವಿಠಲಗೌಡನ ಸಹೋದರ ಪುರಂದರಗೌಡ ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಎಸ್‌ಐಟಿ ತಂಡ ತರಾತುರಿಯಲ್ಲಿ ಒಂದೇ ದಿನದಲ್ಲಿ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರ ಅವಶೇಷಗಳ ಮಹಜರು ಪ್ರಕ್ರಿಯೆ ನಡೆಸಲು ಉದ್ದೇಶಿಸಿತ್ತು. ಆದರೆ ಇಡೀ ಕಾಡಿನಲ್ಲಿ ಶೋಧ ಕಾರ್ಯ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2ನೇ ದಿನವೂ ಮುಂದುವರಿಸುವುದು ಅನಿವಾರ್ಯವಾಗಿದೆ.
ತಿಮರೋಡಿ ಅರೆಸ್ಟ್ ಆಗುವ ಭೀತಿ :
ಇನ್ನೊಂದು ಕಡೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಬಂಧನ ಭೀತಿ ಕಾಡುತ್ತಿದೆ. ತಿಮರೋಡಿ ಮನೆಯಲ್ಲಿ ಶೋಧ ಮಾಡಿದ್ದ ಎಸ್‌ಐಟಿ,ಈಗ ಎಫ್‌ಐಆರ್ ಹಾಕಿದೆ. ಆಗಸ್ಟ್ 26ರಂದು ನಡೆಸಿದ ಶೋಧ ಕಾರ್ಯಾಚರಣೆಗೆ ಈಗ ಎಫ್‌ಐಆರ್ ಹಾಕಿರುವುದು ಏಕೆ. ಆ ದಿನವೇ ಏಕೆ ಹಾಕಲಿಲ್ಲ ಎಂಬ ಪ್ರಶ್ನೆಯೂ ಮೂಡುತ್ತಿದೆ. ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸದಲ್ಲಿ ಶೋಧ ನಡೆಸಿದ್ದರು. ಈ ವೇಳೆ ಎರಡು ತಲ್ವಾರ್‌ಗಳು ಮತ್ತು ಒಂದು ಬಂದೂಕು ಸೇರಿ ಒಟ್ಟು 44 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖಾ ತಂಡವು ಬೆಳ್ತಂಗಡಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಿತ್ತು.
ಅಕ್ರಮ ಶಸ್ತ್ರಾಸ್ತ್ರಗಳ ಬಗ್ಗೆ ಎಸ್‌ಐಟಿ ಎಸ್‌ಪಿ ಸಿ.ಎ. ಸೈಮನ್ ಅವರು ಸೆ.16 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ಆರ್ಮ್ಸ್ ಆಕ್ಟ್ 1959ರ ಸೆಕ್ಷನ್ 25(1), 25(1-ಎ), ಮತ್ತು 24(1-ಬಿ)(ಎ) ಅಡಿಯಲ್ಲಿ ಬೆಳ್ತಂಗಡಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಿಮರೋಡಿ ವಿರುದ್ಧದ ಕೇಸ್, ಸೆಕ್ಷನ್ನುಗಳ ಪ್ರಕಾರ ತಿಮರೋಡಿ ಅರೆಸ್ಟ್ ಆದರೂ ಆಶ್ಚರ್ಯ ಇಲ್ಲ.
ಚಿನ್ನಯ್ಯ ಹೇಳಿರುವ ಕಥೆ : ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳ ಹೂತ ಪ್ರಕರಣದ ‘ತಲೆಬರುಡೆ’ ಕತೆ ಹೆಣೆಯುವಲ್ಲಿ ಕರ್ನಾಟಕದ ನಂಟು ಹೊಂದಿರುವ ದೆಹಲಿ ಮೂಲದ ಓರ್ವ ವ್ಯಕ್ತಿ ಪ್ರಮುಖ ಪಾತ್ರವಹಿಸಿದ್ದು, ಈತನ ಮನೆಯಲ್ಲಿ ಸಂಚಿನ ಸಭೆ ನಡೆದಿತ್ತು ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ವಿಚಾರಣೆಯಲ್ಲಿ ಆರೋಪಿ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ. ತಲೆಬುರಡೆ ಸುಳ್ಳಿನ ಕತೆ ರೂಪಿಸುವಲ್ಲಿ ದೆಹಲಿ ಮೂಲದ ವ್ಯಕ್ತಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಉಜಿರೆಯ ಮೂವರು ಸಾಮಾಜಿಕ ಕಾರ್ಯಕರ್ತರು, ಇಬ್ಬರು ಯೂಟ್ಯೂಬರ್‌ಗಳು ಹಾಗೂ ಉತ್ತರ ಕರ್ನಾಟಕದ ವ್ಯಕ್ತಿ ಸೇರಿ ಒಟ್ಟು ಏಳು ಮಂದಿ ಪಾತ್ರಧಾರಿಗಳಾಗಿದ್ದು, ಇದರಲ್ಲಿ ಉಜಿರೆಯವರೇ ‘ಪ್ರಮುಖ’ ಸೂತ್ರಧಾರಿಗಳಾಗಿದ್ದಾರೆ. ಅಲ್ಲದೆ, ತಲೆಬುರುಡೆ ಕಥಾ ಸರಣಿಯಲ್ಲಿ ಹೇಗೆಲ್ಲ ಸಾರ್ವಜನಿಕವಾಗಿ ನಡೆದುಕೊಳ್ಳಬೇಕು ಹಾಗೂ ಪೊಲೀಸರ ತನಿಖೆಯನ್ನು ಹೇಗೆ ಎದುರಿಸಬೇಕು ಎಂಬುದು ಸೇರಿ ಪ್ರತಿ ಹಂತದ ಬಗ್ಗೆ ಚಿನ್ನಯ್ಯನಿಗೆ ದೊಡ್ಡ ಬಿಳಿ ಹಾಳೆ ಮೇಲೆ ನೀಲ ನಕ್ಷೆ ರೂಪಿಸಿ ಸಂಚುಕೋರರು ವಿವರಿಸಿದ್ದರು. ಎಸ್‌ಐಟಿ ದಾಳಿ ವೇಳೆ ಪ್ರಮುಖ ಸಂಚುಕೋರನ ಮನೆಯಲ್ಲಿ ಆ ನೀಲನಕ್ಷೆ ಸಹ ಸಿಕ್ಕಿದೆ.



