ಜಮ್ಮು ಕಾಶ್ಮೀರಕ್ಕೆ ಇದ್ದ ಆರ್ಟಿಕಲ್ 370 ತೆರವು ಮಾಡಿದ ಮೇಲೆ, ಹಂತ ಹಂತವಾಗಿ ಕಾಶ್ಮೀರವನ್ನು ಪ್ರಮೋಟ್ ಮಾಡಿದ್ದು ಸಿನಿಮಾ ಮತ್ತು ಕ್ರೀಡಾಪಟುಗಳು. ಅಫ್ʻಕೋರ್ಸ್.. ಅದನ್ನು ಕೇಂದ್ರ ಸರ್ಕಾರವೇ ಉದ್ದೇಶಪೂರ್ವಕವಾಗಿ ಮಾಡಿಸಿತು ಎನ್ನಬಹುದು. ಸುಮಾರು ದಶಕಗಳಿಂದ ಪ್ರತಿದಿನ ಗುಂಡು, ಹತ್ಯೆ, ಮುಷ್ಕರ, ಕಲ್ಲುತೂರಾಟಗಳಲ್ಲೇ ಮುಳುಗಿ ಹೋಗಿದ್ದ ಜಮ್ಮು ಕಾಶ್ಮೀರಕ್ಕೆ ಪ್ರವಾಸಿಗರು ಹೋಗುತ್ತಿರಲಿಲ್ಲ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದವರು ಕೊನೆಗೆ ಕಲ್ಲು ತೂರಿದರೆ 100-200 ಕೊಡ್ತಾರೆ ಎಂಬ ಕಾರಣಕ್ಕೆ ಸೈನಿಕರಿಗೆ ಕಲ್ಲು ತೂರುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು. ಅದು ಹಂತಹಂತವಾಗಿ ಬದಲಾಗಿತ್ತು.
ಕಾಶ್ಮೀರ ಪ್ರವಾಸೋದ್ಯಮವನ್ನು ಜನರತ್ತ ಸೆಳೆಯಲು ಪ್ರಯತ್ನ ಆರಂಭವಾಗಿದ್ದವು. ಸಚಿನ್ ತೆಂಡೂಲ್ಕರ್ ಕಾಶ್ಮೀರಕ್ಕೆ ಹೋಗಿ, ಅಲ್ಲಿನ ಪ್ರವಾಸಿ ಕ್ಷೇತ್ರಗಳ ವಿಡಿಯೋ ಮಾಡಿ, ರಸ್ತೆಯಲ್ಲಿ ಕ್ರಿಕೆಟ್ ಆಡಿ.. ಜಮ್ಮು ಕಾಶ್ಮೀರ ಸೇಫ್ ಇದೆ ಎಂಬ ಸಂದೇಶ ಸಾರಿದ್ದರು. ಅದಾದ ನಂತರ ಅಜಯ್ ದೇವಗನ್ ಅಭಿನಯದ ಸಿಂಗಂ ಎಗೇನ್ ಸಿನಿಮಾ ಚಿತ್ರೀಕರಣವೂ ಅಲ್ಲಿಯೇ ಆಗಿತ್ತು. ನೋಡನೋಡುತ್ತಲೇ ಪ್ರವಾಸಿಗರು ತಂಡೋಪತಂಡವಾಗಿ ಹೋಗೋಕೆ ಶುರು ಮಾಡಿದ್ದರು. ಪ್ರತಿಯೊಬ್ಬರೂ ಅಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಒಂದಿಷ್ಟು ಒಳ್ಳೆಯ ಮಾತುಗಳನ್ನಾಡಿ ವಿಡಿಯೋ/ರೀಲ್ಸ್ ಮಾಡಿ ಹಾಕುತ್ತಿದ್ದರು.
ಅಷ್ಟೇ ಏಕೆ, ರಾಹುಲ ಗಾಂಧಿ, ತಂಗಿ ಪ್ರಿಯಾಂಕಾ ಗಾಂಧಿಯವರ ಜೊತೆ ಹಿಮದ ಆಟವಾಡಿ ಸಂಭ್ರಮಿಸಿದ್ದರು. ಅಮಿತ್ ಶಾ ಮೊದಲಾದವರೆಲ್ಲ ಕುಟುಂಬದ ಜೊತೆ ಪ್ರವಾಸ ಹೋಗಿ ಸಂಭ್ರಮಿಸಿದ್ದರು. ಸಿನಿಮಾ ನಟ ನಟಿಯರು ಕಾಶ್ಮೀರಕ್ಕೆ ಪ್ರವಾಸ ಹೋಗುವ ಸಡಗರವೂ ಶುರುವಾಗಿತ್ತು.
ದಶಕಗಳಿಂದ ಸ್ತಬ್ಧವಾಗಿದ್ದ ಫ್ಯಾಷನ್ ಶೋಗಳು ಶುರುವಾಗಿದ್ದವು. ಕಾಶ್ಮೀರಿಗಳು ಹೆಚ್ಚು ಕಡಿಮೆ ಮರೆತೇ ಹೋಗುತ್ತಿದ್ದ ಅವರದ್ದೇ ನೆಲದ ಸಂಗೀತ.. ಮತ್ತೆ ಚಿಗುರು ಪಡೆದಿತ್ತು. ಸಿನಿಮಾ ಚಿತ್ರೀಕರಣಗಳೂ ಶುರುವಾಗಿದ್ದವು. ಕನ್ನಡದ ಕೆಲವು ಸಿನಿಮಾಗಳ ಚಿತ್ರೀಕರಣಕ್ಕೆ ಕಾಶ್ಮೀರದಲ್ಲಿ ಶೆಡ್ಯೂಲ್ ಮಾಡಿಕೊಳ್ಳಲಾಗಿತ್ತು. ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸಿನಿಮಾಗಳ ಚಿತ್ರೀಕರಣವೂ ಶುರುವಾಗಿತ್ತು. ಕಾಶ್ಮೀರ ಹೊಸ ಬದಲಾವಣೆಗೆ ಹಂತ ಹಂತವಾಗಿ ತೆರೆದುಕೊಳ್ಳುತ್ತಿತ್ತು.
ಅದೆಲ್ಲವನ್ನೂ ಲಷ್ಕರ್ ಉಗ್ರರು ಮಣ್ಣುಪಾಲು ಮಾಡಿದ್ದಾರೆ. ಕಾಶ್ಮೀರದ ಬಗ್ಗೆ, ಕಾಶ್ಮೀರಿಗಳ ಬಗ್ಗೆ ಭಾರತೀಯರಲ್ಲಿ ನಂಬಿಕೆ ಮೂಡುವುದಕ್ಕೆ ಇನ್ನು ದಶಕಗಳಷ್ಟು ಕಾಯಬೇಕು. ಕಾಶ್ಮೀರ ಎಷ್ಟು ಸುಂದರ ಗೊತ್ತಾ ಎಂದು ಟ್ವೀಟ್ ಮಾಡುತ್ತಿದ್ದ ಸೆಲಬ್ರಿಟಿಗಳು ಈಗ ಉಗ್ರರನ್ನು ಸದೆಬಡಿಯಿರಿ ಎಂದು ವಿಡಿಯೋ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಿದ್ದಾರೆ.