ನಾವು ಹಲ್ಲುಜ್ಜುವ ಟೂಥ್ ಪೇಸ್ಟಿನಲ್ಲಿ ಉಪ್ಪಿದೆಯೇ ಎಂದು ಜಾಹೀರಾತು ನೋಡಿ ಅಲರ್ಟ್ ಆಗುತ್ತಿರುವ ಈ ಕಾಲದಲ್ಲಿ ನಾವು ತಿನ್ನೋ ಉಪ್ಪು, ಉಪ್ಪೇ ಅಲ್ಲ.. ಪ್ಲಾಸ್ಟಿಕ್ ಎಂದರೆ ಏನಾಗಬೇಡ. ದಪ್ಪಕಲ್ಲಿನ ಸಕ್ಕರೆ ಉತ್ತಮವೋ.. ಸಣ್ಣ ಸಣ್ಣ ಪುಡಿ ಪುಡಿ ಸಕ್ಕರೆ ಉತ್ತಮವೋ.. ಎಂದು ಸಂಶೋಧನೆ ಮಾಡಿ.. ನೋಡಿ.. ಕೊನೆಗೆ ಬೆಲ್ಲ ಇರಲೋ.. ಸಕ್ಕರೆ ಇರಲೋ.. ಎಂದು ಯೋಚಿಸುತ್ತಿರುವ ಸಮಯದಲ್ಲಿ.. ನಾವು ತಿಂತಿರೋ ಸಕ್ಕರೆ, ಸಕ್ಕರೆಯೇ ಅಲ್ಲ.. ಪ್ಲಾಸ್ಟಿಕ್ ಎಂದರೆ ಏನಾಗಬೇಡ.. ಹೀಗಾಗಿಯೇ ಈ ವರದಿ ಬೆಚ್ಚಿ ಬೀಳಿಸುತ್ತಿರುವುದು.
ಹೊಸ ಅಧ್ಯಯನದ ಪ್ರಕಾರ, ಭಾರತದಲ್ಲಿರುವ ಎಲ್ಲಾ ಮಾದರಿಯ ಉಪ್ಪು ಹಾಗೂ ಸಕ್ಕರೆಯ ಬ್ರ್ಯಾಂಡ್‌ಗಳಲ್ಲಿ, ಈ ಬ್ರ್ಯಾಂಡ್‌ಗಳು ಎಷ್ಟೇ ದೊಡ್ಡದಾಗಿರಲಿ, ಅಥವಾ ಚಿಕ್ಕದೇ ಆಗಿರಲಿ, ಪ್ಯಾಕ್ ಮಾಡಿರಲಿ ಅಥವಾ ಪ್ಯಾಕ್ ಮಾಡದೇ ಇರಲಿ.. ಅವುಗಳಲ್ಲಿ ಮೈಕ್ರೋಪ್ಲಾಸ್ಟಿಕ್ಸ್‌ಗಳ ಅಂಶ ಕಂಡು ಬಂದಿದೆ.
ವರದಿಯ ಪ್ರಕಾರ “ಉಪ್ಪು ಮತ್ತು ಸಕ್ಕರೆಯಲ್ಲಿ ಮೈಕ್ರೋಪ್ಲಾಸ್ಟಿಕ್ಸ್” ಮತ್ತು ಪರಿಸರ ಸಂಶೋಧನಾ ಸಂಸ್ಥೆ ಟಾಕ್ಸಿಕ್ಸ್ ಲಿಂಕ್ ನಡೆಸಿದ ಅಧ್ಯಯನವು 10 ವಿಧದ ಉಪ್ಪುಗಳನ್ನು ಪರೀಕ್ಷೆ ಮಾಡಿದೆ. ಇವುಗಳಲ್ಲಿ ಟೇಬಲ್ ಉಪ್ಪು, ಕಲ್ಲು ಉಪ್ಪು, ಸಮುದ್ರ ಉಪ್ಪು ಮತ್ತು ಸ್ಥಳೀಯ ಕಚ್ಚಾ ಉಪ್ಪುಗಳ ಪರೀಕ್ಷೆ ನಡೆಸಿದೆ. ಅದರೊಂದಿಗೆ ಆನ್‌ಲೈನ್ ಹಾಗೂ ಸ್ಥಳೀಯ ಮಾರುಕಟ್ಟೆಯಿಂದ ಖರೀದಿ ಮಾಡಲಾಗಿದೆ. ಐದು ಮಾದರಿಯ ಸಕ್ಕರೆಗಳನ್ನೂ ಪರೀಕ್ಷೆ ಮಾಡಿದೆ. ಫೈಬರ್, ಪೆಲ್ಲೆಟ್ಸ್, ಫಿಲ್ಮ್‌ಗಳು ಮತ್ತು ತುಣುಕುಗಳು ಸೇರಿದಂತೆ ವಿವಿಧ ರೂಪಗಳಲ್ಲಿ ಎಲ್ಲಾ ಉಪ್ಪು ಮತ್ತು ಸಕ್ಕರೆ ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಕಂಡಿವೆ.ಈ ಮೈಕ್ರೋಪ್ಲಾಸ್ಟಿಕ್‌ಗಳ ಗಾತ್ರವು 0.1 mm ನಿಂದ 5 mm ವರೆಗೆ ಇವೆ ಎಂದು ತಿಳಿಸಿದೆ.
ಬಹು-ಬಣ್ಣದ ತೆಳುವಾದ ಫೈಬರ್ ಮತ್ತು ಫಿಲ್ಮ್‌ಗಳ ರೂಪದಲ್ಲಿ ಅಯೋಡಿಕರಿಸಿದ ಉಪ್ಪಿನಲ್ಲಿ ಅತ್ಯಧಿಕ ಮಟ್ಟದ ಮೈಕ್ರೋಪ್ಲಾಸ್ಟಿಕ್‌ಗಳು ಕಂಡುಬಂದಿವೆ. ಅಂದರೆ ನಾವು ತಿನ್ನೋ ಉಪ್ಪಿನಲ್ಲಿ ಅಯೋಡಿನ್ ಇದೆ ಎಂಬುದನ್ನೇ ಪ್ರಚಾರ ಮಾಡಿ ಮಾರುತ್ತಿರುವ ಉಪ್ಪಿನಲ್ಲೇ ಪ್ಲಾಸ್ಟಿಕ್ ಅಂಶಗಳು ಜಾಸ್ತಿ ಇದೆಯಂತೆ. ಟಾಕ್ಸಿಕ್ಸ್ ಲಿಂಕ್ ಸಂಸ್ಥಾಪಕ-ನಿರ್ದೇಶಕ ರವಿ ಅಗರ್ವಾಲ್ ಈ ಬಗ್ಗೆ ಮಾತನಾಡಿದ್ದು, “ನಮ್ಮ ಅಧ್ಯಯನದ ಉದ್ದೇಶವು ಮೈಕ್ರೋಪ್ಲಾಸ್ಟಿಕ್‌ಗಳ ಕುರಿತು ಅಸ್ತಿತ್ವದಲ್ಲಿರುವ ವೈಜ್ಞಾನಿಕ ಡೇಟಾಬೇಸ್‌ಗೆ ಕೊಡುಗೆ ನೀಡುವುದಾಗಿದೆ, ಇದರಿಂದಾಗಿ ಜಾಗತಿಕ ಪ್ಲಾಸ್ಟಿಕ್ ಒಪ್ಪಂದವು ಈ ಸಮಸ್ಯೆಯನ್ನು ಕೇಂದ್ರೀಕೃತ ರೀತಿಯಲ್ಲಿ ಪರಿಹರಿಸುತ್ತದೆ’ ಎಂದು ಹೇಳಿದ್ದಾರೆ.
“ನಮ್ಮ ಅಧ್ಯಯನವು ಎಲ್ಲಾ ಉಪ್ಪು ಮತ್ತು ಸಕ್ಕರೆಯ ಮಾದರಿಗಳಲ್ಲಿ ಗಣನೀಯ ಪ್ರಮಾಣದ ಮೈಕ್ರೋಪ್ಲಾಸ್ಟಿಕ್‌ಗಳ ಪತ್ತೆಗೆ ಸಂಬಂಧಿಸಿದ್ದಾರೆ. ಮಾನವನ ಆರೋಗ್ಯದ ಮೇಲೆ ಮೈಕ್ರೋಪ್ಲಾಸ್ಟಿಕ್‌ನ ದೀರ್ಘಕಾಲೀನ ಆರೋಗ್ಯದ ಪರಿಣಾಮಗಳ ಬಗ್ಗೆ ತುರ್ತು, ಸಮಗ್ರ ಸಂಶೋಧನೆಗೆ ಕರೆ ನೀಡಿದೆ’ ಎನ್ನುವುದು ಅಗರ್‌ವಾಲ್ ಮಾತು. ಅಧ್ಯಯನದ ಪ್ರಕಾರ ಅಯೋಡೈಸ್ಡ್ ಉಪ್ಪು ಅತಿ ಹೆಚ್ಚು ಮೈಕ್ರೊಪ್ಲಾಸ್ಟಿಕ್‌ಗಳನ್ನು ಅಂದರೆ.. ಪ್ರತಿ ಕಿಲೋಗ್ರಾಂಗೆ 89.15 ಪೀಸ್‌ಗಳನ್ನು ಹೊಂದಿದ್ದರೆ, ಈ ಪ್ರಮಾಣ ಸಾವಯವ ಕಲ್ಲು ಉಪ್ಪಿನಲ್ಲಿ ಕಡಿಮೆ. ಸಾವಯವ ಉಪ್ಪಿನಲ್ಲಿ ಪ್ರತಿ ಕಿಲೋಗ್ರಾಂಗೆ 6.70 ಪೀಸ್‌ಗಳಿವೆ ಎನ್ನುತ್ತಿದೆ ರಿಪೋರ್ಟ್.
ಆದರೆ ಸಕ್ಕರೆಯಲ್ಲಿ ಸಾವಯವ ಸಕ್ಕರೆ ಎಂಬ ಕಲ್ಪನೆಯೇ ಇಲ್ಲ. ಹೀಗಾಗಿ.. ಪ್ರತಿ ಕಿಲೋಗ್ರಾಮ್ ಸಕ್ಕರೆಯಲ್ಲಿ 11.85 ರಿಂದ 68.25 ಮೈಕ್ರೋ ಪ್ಲಾಸ್ಟಿಕ್ ಸಕ್ಕರೆ ಪೀಸ್ ಇದೆ ಎಂದು ಅಧ್ಯಯನ ಹೇಳಿದೆ. ಅವು ಆರೋಗ್ಯ ಮತ್ತು ಪರಿಸರ ಎರಡನ್ನೂ ಹಾನಿಗೊಳಿಸುತ್ತವೆ. ಈ ಸಣ್ಣ ಪ್ಲಾಸ್ಟಿಕ್ ಕಣಗಳು ಆಹಾರ, ನೀರು ಮತ್ತು ಗಾಳಿಯ ಮೂಲಕ ಮಾನವ ದೇಹವನ್ನು ಪ್ರವೇಶಿಸುವ ಅಪಾಯ ಇದೆ. ಇತ್ತೀಚಿನ ಸಂಶೋಧನೆಯು ಶ್ವಾಸಕೋಶಗಳು, ಹೃದಯ, ಮತ್ತು ಎದೆ ಹಾಲು ಮತ್ತು ಹುಟ್ಟಲಿರುವ ಶಿಶುಗಳಲ್ಲಿಯೂ ಮೈಕ್ರೋಪ್ಲಾಸ್ಟಿಕ್ಸ್ ಇದೆ.
ಅಂದಹಾಗೆ ಭಾರತೀಯರು ಪ್ರತಿದಿನ.. ಸರಾಸರಿ ಎಂದರೂ.. 10.98 ಗ್ರಾಂ ಉಪ್ಪು ಮತ್ತು ಸುಮಾರು 10 ಚಮಚ ಸಕ್ಕರೆಯನ್ನು ಸೇವಿಸುತ್ತಾರೆ. ಇದು ಕೂಡಾ ರಿಪೋರ್ಟ್. ಅಂದಹಾಗೆ ಅವರು ಎಷ್ಟು ಪ್ಲಾಸ್ಟಿಕ್ ಸೇವಿಸುತ್ತಿರಬಹುದು.. ಊಹೆ ನಿಮಗೇ ಬಿಟ್ಟಿದ್ದು.



