ಸುಪ್ರೀಂ ಕೋರ್ಟ್‌ನಲ್ಲಿ ಐಪಿಎಸ್ ಡಿ.ರೂಪಾ Vs ಐಎಎಸ್ ರೋಹಿಣಿ ಸಿಂಧೂರಿ ಪ್ರಕರಣದ ವಿಚಾರಣೆ, ಸುಪ್ರೀಂಕೋರ್ಟಿಂದ ಕೆಳ ಹಂತದ ನ್ಯಾಯಾಲಯಕ್ಕೇ ವರ್ಗವಾಗಿದೆ. ಕಾರಣ ಇಷ್ಟೇ. ಐಎಎಸ್ ರೋಹಿಣಿ ಸಿಂಧೂರಿ ಪಟ್ಟು ಬಿಡುತ್ತಿಲ್ಲ. ಐಪಿಎಸ್ ಡಿ.ರೂಪಾ ಹಠ ಬಿಡುತ್ತಿಲ್ಲ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಓಕಾ ಅವರ ಎದುರು ಮಧ್ಯಸ್ಥಿಕೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಕೊಳ್ಳುವುದಾಗಿ ದೂರುದಾರೆ ಡಿ. ರೂಪಾ ಪರ ವಕೀಲರು ಕೇಳಿದ್ದರು. ಆದರೆ ಮಧ್ಯಸ್ಥಿಗೆ ಒಪ್ಪದ ರೋಹಿಣಿ ಸಿಂಧೂರಿ, ಕೋರ್ಟ್ ನಲ್ಲಿಯೇ ತೀರ್ಮಾನವಾಗಲಿ ಎಂದು ಪಟ್ಟು ಹಿಡಿದಿದ್ದಾರೆ.
ಸುಪ್ರೀಂಕೋರ್ಟ್ ಸಲಹೆ : ಉನ್ನತ ಅಧಿಕಾರಿಗಳು ಹೀಗೆ ಕಿತ್ತಾಡುವುದು ಆರೋಗ್ಯಕರವಲ್ಲ. ಮಧ್ಯಸ್ಥಿಕೆ ಒಪ್ಪದೆ ಇದ್ರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಪ್ರಕರಣದ ಅರ್ಹತೆ ಮೇಲೆ ನಾವು ನಿರ್ಧರಿಸಬೇಕಾಗುತ್ತೆ. ಇಬ್ಬರೂ ನ್ಯಾಯಾಲಯದಲ್ಲಿದ್ದಾರೆ. ದಯವಿಟ್ಟು ಏನು ಮಾಡಬೇಕೆಂದು ನಿಲುವು ತೆಗೆದುಕೊಳ್ಳಿ. ಅವರು ಪರಸ್ಪರ ಮುಖಾಮುಖಿಯಾಗಿ ಮಾತನಾಡಬಹುದೇ? ಅಥವಾ ಹಿರಿಯ ವಕೀಲರು ಅಥವಾ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ರಾಜೀ ಸಂಧಾನ ಮಾಡಬಹುದೇ ಎಂದು ತೀರ್ಮಾನಿಸಿ ಎಂದು ಹೇಳಿತ್ತು. ಇದಕ್ಕೆ ಡಿ ರೂಪ ಒಪ್ಪಿದರು.
ಮಾತುಕತೆ ಏನಾಯ್ತು..?
ಕೆಲ ಹೊತ್ತಿನ ಬಳಿಕ ಡಿ.ರೂಪಾ ಮಾತುಕತೆ ವಿಫಲವಾಯಿತು ಎಂದು ಕೋರ್ಟ್ಗೆ ತಿಳಿಸಿದರು. ಕಾರಣ ಏನು ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ರೂಪಾ ʻನಾನು ರೋಹಿಣಿ ಸಿಂಧೂರಿಗೆ ಅವರಿಗೆ ಬೇಷರತ್ ಕ್ಷಮೆಯಾಚಿಸಬೇಕಂತೆʼ ಎಂದರು.
ಒಳ್ಳೆಯದೇ ಅಲ್ಲವೇ? ಕ್ಷಮೆ ಕೇಳಿ ಪ್ರಕರಣ ಬಗೆಹರಿಸಿಕೊಳ್ಳಿ. ಇಲ್ಲದೇ ಕಾನೂನು ಪ್ರಕಾರ ಹೋದರೆ ಇಬ್ಬರಿಗೂ ಕಷ್ಟವಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಇದಕ್ಕೆ ಡಿ.ರೂಪ ಒಪ್ಪಲಿಲ್ಲ. ಪರಸ್ಪರ ಕ್ಷಮೆ ಕೇಳುವ ಅಗತ್ಯ ಇದೆ ಎಂದು ಅಭಿಪ್ರಾಯಪಟ್ಟರು.
ಇನ್ನು ರೋಹಿಣಿ ಸಿಂಧೂರಿ ಎಲ್ಲವನ್ನೂ ಸಾರ್ವಜನಿಕ ಅವಗಾಹನೆಯಲ್ಲಿಟ್ಟು, ಮಾತುಕತೆಯ ಮಾತುಗಳನಾಡುತ್ತೀದ್ದೀರಿ. ಡಿ.ರೂಪಾ ನನ್ನ ಮೇಲೆ ಮಾಡಿದ ಆರೋಪಗಳು ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಗೆಯೇ ಇವೆ. ಹೈಕೋರ್ಟ್ ಆದೇಶದ ಬಳಿಕವೂ ರೂಪಾ ಅವರು ನನ್ನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಮತ್ತು ಸಂದೇಶಗಳನ್ನು ಡಿಲಿಟ್ ಮಾಡಿಲ್ಲ. ಕೇಸ್ ಅನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳಲು ಆಸಕ್ತಿ ಇಲ್ಲ. ಮೆರಿಟ್ ಮೇಲೆ ಕೇಸ್ ವಿಚಾರಣೆ ನಡೆಯಲಿ ಎಂದು ಹೇಳಿದರು.
ಸುಪ್ರೀಂಕೋರ್ಟ್ ಮುಂದಿಟ್ಟ ಪ್ರಸ್ತಾಪವನ್ನೂ ತಿರಸ್ಕರಿಸಿದ್ದರಿಂದ ನ್ಯಾಯಮೂರ್ತಿಗಳು, ಇಬ್ಬರು ಹಿರಿಯ ಅಧಿಕಾರಿಗಳು ಹೀಗೆ ವರ್ತಿಸಬಾರದು ಗರಂ ಆದರು. ವಿಚಾರಣಾಧೀನಾ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಆದೇಶ ಹೊರಡಿಸಿದರು. ಹೀಗಾಗಿ ರೂಪಾ ಅವರು ಅರ್ಜಿ ವಾಪಸ್ ಪಡೆದಿದ್ದಾರೆ. ಐಪಿಎಸ್ ಆಫೀಸರ್ ವರ್ಸಸ್ ಐಎಎಸ್ ಆಫೀಸರ್ ಯುದ್ಧ ಮತ್ತೆ ವಿಚಾರಣಾಧೀನ ಕೋರ್ಟ್ ಅಂಗಳಕ್ಕೆ ತಲುಪಿದೆ.
ಪ್ರಕರಣದ ಹಿನ್ನೆಲೆ ಏನು..?
ಸುಮಾರು ಒಂದು ವರ್ಷದ ಹಿಂದೆ (2023ರ ಫೆ.18 ಮತ್ತು 19) ರಾಜ್ಯದಲ್ಲಿ ಐಪಿಎಸ್ ಆಫೀಸರ್ ವರ್ಸಸ್ ಐಎಎಸ್ ಆಫೀಸರ್ ಯುದ್ಧ ಜೋರಾಗಿ ನಡೆದಿತ್ತು. ರೋಹಿಣಿ ಸಿಂಧೂರಿಯವರ ಆಕ್ಷೇಪಾರ್ಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾ ದೊಡ್ಡ ಕಿಚ್ಚನ್ನು ಹೊತ್ತಿಸಿದ್ದರು. ಇಬ್ಬರ ಜಗಳ ವಿಧಾನಸೌಧದ ಮೆಟ್ಟಿಲು ಹತ್ತಿತ್ತು. ಕೊನೆಗೆ ರೋಹಿಣಿ ಸಿಂಧೂರಿ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದರು.



