ರಾಜ್ಯಾದ್ಯಂತ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಪ್ರಕರಣ ಎಂದರೆ ಅಡುಗೆ ಸಹಾಯಕಿಯಾಗಿ ದಲಿತ ಮಹಿಳೆ ನೇಮಕ ಮಾಡಿದ್ದಕ್ಕೆ ಮಕ್ಕಳು ಟಿಸಿ ಪಡೆದುಕೊಂಡರು ಎನ್ನುವುದು. ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕವಾದ ಒಂದೇ ಕಾರಣಕ್ಕೆ ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ ಮಕ್ಕಳು ಟಿಸಿ ಪಡೆದು ಬೇರೆ ಶಾಲೆಗೆ ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ ಪ್ರಕರಣಕ್ಕೆ ಅತೀ ದೊಡ್ಡ ಟ್ವಿಸ್ಟ್ ಸಿಕ್ಕಿದೆ.
ಯಾವ ವಿಷಯಕ್ಕಾಗಿ ಸುದ್ದಿ ತೀವ್ರ ಸ್ವರೂಪ ಪಡೆದುಕೊಂಡಿತೋ.. ಆ ಕಾರಣವೇ ಸುಳ್ಳು ಎಂಬ ಸ್ಪಷ್ಟೀಕರಣ ಬಂದಿದೆ. 2024-25ನೇ ಸಾಲಿನಲ್ಲಿ 22 ವಿದ್ಯಾರ್ಥಿಗಳಿದ್ದ ಹೊಮ್ಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 21 ವಿದ್ಯಾರ್ಥಿಗಳು ಟಿಸಿ ಪಡೆದುಕೊಂಡು ಬೇರೆ ಶಾಲೆಗೆ ಹೋಗಿದ್ದರು. “ಈ ಹಿಂದೆ ಬೇರೆ ಸಮುದಾಯದ ಮಹಿಳೆ ಅಡುಗೆ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅದಾದ ಬಳಿಕ ದಲಿತ ಮಹಿಳೆಯೊಬ್ಬರನ್ನು ನೇಮಿಸಲಾಗಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ” ಎಂದು ಹೇಳಿದ ವಿಷಯ ಗಂಭೀರ ಸ್ವರೂಪಕ್ಕೆ ತಿರುಗಿತ್ತು.
ಅಸಲಿ ಕಾರಣವೇ ಬೇರೆ..!
ಶಾಲೆ ಬಿಟ್ಟ ಆ 21 ಮಕ್ಕಳಲ್ಲಿ ದಲಿತ ಮಕ್ಕಳೂ ಇದ್ದರು. ಆ ಮಹಿಳೆಯ ಸಂಬಂಧಿಕರ ಕುಟುಂಬದವರೂ ಇದ್ದರು. ಅವರೇಕೆ ಶಾಲೆ ಬಿಟ್ಟರು ಎಂಬ ಬಗ್ಗೆ ಪ್ರಶ್ನೆ ಎತ್ತಿದಾಗ.. ಆ ಮಕ್ಕಳು ಶಾಲೆ ಬಿಡುವುದಕ್ಕೆ ಕಾರಣ ಆ ದಲಿತ ಮಹಿಳೆಯೂ ಅಲ್ಲ. ಆಕೆ ಮಾಡುತ್ತಿದ್ದ ಅಡುಗೆಯೂ ಅಲ್ಲ. ಅಸಲಿಗೆ ಅಲ್ಲಿ ಜಾತಿ ಮುಖ್ಯವಾಗಿರಲಿಲ್ಲ. ಶಾಲೆಯಲ್ಲಿ ಶಿಕ್ಷಕರ ಸಮಸ್ಯೆಯೇ ದೊಡ್ಡದಾಗಿತ್ತು ಎಂಬ ಕಾರಣ ಹೊರಬಿದ್ದಿದೆ.
ಶಿಕ್ಷಕರು ಸರಿಯಾಗಿ ಶಾಲೆಗೇ ಬರುತ್ತಿರಲಿಲ್ಲ. ಬಂದ ಶಿಕ್ಷಕರಿಗೆ ವಿಷಯವೇ ಗೊತ್ತಿರುತ್ತಿರಲಿಲ್ಲ. ಕೇಳಿದ ಮಕ್ಕಳ ಮೇಲೆ ಬಾಯಿ ಜೋರು ಮಾಡುತ್ತಿದ್ದರು. ಈ ಹಿಂದೆ ಎರಡು ಮೂರು ಬಾರಿ ಶಾಲೆಗೆ ಬೀಗ ಹಾಕಿ, ನಮಗೆ ಒಳ್ಳೆ ಶಿಕ್ಷಕರನ್ನು ಕಳುಹಿಸಿಕೊಡಿ ಎಂದು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರಂತೆ. ಹಾಗೆ ಪ್ರತಿಭಟನೆ ಮಾಡಿದಾಗ.. ಪೋಷಕರನ್ನು ಸಮಾಧಾನ ಪಡಿಸುತ್ತಿದ್ದ ಅಧಿಕಾರಿಗಳು, ನಂತರ ಮರೆತೇ ಬಿಡುತ್ತಿದ್ದರು. ಕೇಳಿ ಕೇಳಿ ಬೇಸತ್ತ ಪೋಷಕರು.. ಹೀಗಾದರೆ.. ನಮ್ಮ ಮಕ್ಕಳು ಓದುವುದಿಲ್ಲ ಎಂದು ಅರ್ಥವಾಗಿ ಬೇರೆ ಶಾಲೆಗೆ ಟಿಸಿ ಪಡೆದುಕೊಂಡಿದ್ದಾರೆ.
ಚಾಮರಾಜನಗರ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಾಮಚಂದ್ರರಾಜೇ ಅರಸ್ ಅವರಿಗೂ ಇದೇ ಉತ್ತರ ಲಭ್ಯವಾಗಿದೆ. ಪಾಲಕರನ್ನು ಈ ಬಗ್ಗೆ ಕೇಳಿದಾಗ ಶಾಲೆಯಲ್ಲಿ ತಮ್ಮ ಮಕ್ಕಳು ಏನನ್ನು ಕಲಿಯಬೇಕಿತ್ತೋ ಅದನ್ನು ಕಲಿತಿಲ್ಲ. ಹೀಗಾಗಿ ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಕಳುಹಿಸುತ್ತಿದ್ದೇವೆ ಎಂದಿದ್ದಾರೆ. ದಲಿತ ಮಹಿಳೆ ನೇಮಕವಾದ ಕಾರಣಕ್ಕೆ ಬೇರೆ ಶಾಲೆಗೆ ಸೇರಿಸಿದ ಬಗ್ಗೆ ಪಾಲಕರು ಹೇಳುತ್ತಿಲ್ಲ. ಬಿಇಒಗೆ ವರದಿ ಕೊಡುವಂತೆ ಸೂಚಿಸಿದ್ದು, ಶಿಕ್ಷಕರ ನೇಮಕ ಮಾಡಿ ಶಾಲೆಯನ್ನು ಉತ್ತುಂಗ ಸ್ಥಿತಿಗೆ ಕೊಂಡೊಯ್ಯಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದಿದ್ದಾರೆ ಡಿಡಿಪಿಐ.



