ಸಿನಿಮಾ ಸಿದ್ಧವಾಗಿತ್ತು. ಪ್ರಚಾರ ಮಾಡೋಣವೆಂದರೆ ಯಾರ ಬಳಿ ಮಾಡಿಸೋದು. ಗೊತ್ತಿಲ್ಲ. ಪ್ರಚಾರಕ್ಕೆಂದೇ ಸಂಸ್ಥೆಗಳಿವೆ. ಅವರು ಹಣ ತಗೊಳ್ತಾರೆಯೇ ಹೊರತು, ಹೊಸ ಐಡಿಯಾಗಳಿಲ್ಲ. ಪೋಸ್ಟರ್ ಹಾಕೋದು, ಹಾಕಿಸೋದು, ಜಾಹೀರಾತು ಕೊಡಿಸೋದು ಬಿಟ್ಟು ಬೇರೇನನ್ನೂ ಮಾಡೋದಿಲ್ಲ. ಅವರಿಗೆ ಐಡಿಯಾಗಳನ್ನೂ ಕೊಡಬೇಕು. ಆ ಐಡಿಯಾಗಳು ಸರಿಯಾಗಿ ನಡೆಯುತ್ತಿವೆಯಾ ಎಂದು ಅವರೇ ನೋಡಿಕೊಳ್ಳಬೇಕು. ಎಲ್ಲವನ್ನೂ ಸಿದ್ಧ ಮಾಡಿಸಿ ಕೊಟ್ಟರೆ, ಪ್ರಚಾರಕ್ಕೆಂದು ತಮ್ಮ ಲೋಗೋ/ಬ್ಯಾನರ್ ಹಾಕಿಕೊಳ್ಳೋದು.. ಇಂತಹವನ್ನೆಲ್ಲ ರಿಷಬ್ ಶೆಟ್ಟಿ ನೋಡಿದ್ದಾರೆ. ಅನುಭವಿಸಿದ್ದಾರೆ. ಹಾಗೆ ನೋಡಿದರೆ ಸೋಷಿಯಲ್ ಮೀಡಿಯಾ ಮೂಲಕ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಬಹುದು ಎಂದು ತೋರಿಸಿಕೊಟ್ಟಿದ್ದೇ ರಿಷಬ್ ಶೆಟ್ಟಿ+ರಕ್ಷಿತ್ ಶೆಟ್ಟಿ ಟೀಂ.
ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, 777 ಚಾರ್ಲಿ, ಅವನೇ ಶ್ರೀಮನ್ನಾರಾಯಣ, ಕಾಂತಾರ.. ಹೀಗೆ ಹಲವು ಚಿತ್ರಗಳಿವೆ. ಇಲ್ಲಿ ಇನ್ನೂ ಒಂದು ಸ್ಪೆಷಾಲಿಟಿ ಇದೆ. ಸೋಷಿಯಲ್ ಮೀಡಿಯಾದಲ್ಲಿ ಹಾಕೋದಂದ್ರೆ ಸುಮ್ಮನೆ ಪೋಸ್ಟ್ ಮಾಡೋದಲ್ಲ, ಕ್ಯಾಚಿಯಾಗಿರಬೇಕು. ಅದು ಗೊತ್ತಿಲ್ಲದೆ ನಾವೂ ಪ್ರಚಾರ ಮಾಡ್ತೇವೆ ಎಂದು ಹೋಗಿ ಎಡವಿಬಿದ್ದವರು ಅದೆಷ್ಟೋ ಜನ. ಅತ್ತ ರೆಗ್ಯುಲರ್ ಪ್ರಚಾರವನ್ನೂ ಮಾಡದೆ, ಇತ್ತ ಮಾಡರ್ನ್ ಪ್ರಚಾರವನ್ನೂ ಮಾಡದೇ ಹೊಡೆತ ತಿಂದವರೆಷ್ಟೋ ಮಂದಿ.
ಆದರೆ ರಿಷಬ್ ಶೆಟ್ಟಿ ರೆಗ್ಯುಲರ್ ಪ್ರಚಾರವನ್ನೂ ಬಿಟ್ಟಿಲ್ಲ. ಪ್ರಚಾರ ಮಾಡುವುದು ಹೇಗೆ ಎಂಬ ತಲೆನೋವಿಗೆ ಮದ್ದು ಕೊಟ್ಟಿದ್ದಾರೆ. ಕೆರಾಡಿ ಸ್ಟುಡಿಯೋಸ್. ರಿಷಬ್ ಶೆಟ್ಟಿ ಆರಂಭಿಸಿರುವ ಹೊಸ ಸಂಸ್ಥೆ. ಈ ಸಂಸ್ಥೆಯ ಕೆಲಸವೇನು? ಉದ್ದೇಶವೇನು? ಈ ಪ್ರಶ್ನೆಗಳಿಗೆ ಸ್ವತಃ ರಿಷಬ್ ಶೆಟ್ಟಿ ಉತ್ತರ ಕೊಟ್ಟಿದ್ದಾರೆ. ಒಂದು ಸಿನಿಮಾದ ಗೆಲುವಿಗೆ ಅದರ ನಿರ್ಮಾಣದಷ್ಟೇ, ಪ್ರಚಾರದ ಅಗತ್ಯವೂ ಇದೆ. ಕಳೆದ ಕೆಲವು ವರ್ಷಗಳಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡಿ ಅದನ್ನು ಸೂಕ್ತ ಪ್ರಚಾರದ ಮೂಲಕ ಜನರಿಗೆ ತಲುಪಿಸಿದ ಅನುಭವದೊಂದಿಗೆ ನಮ್ಮ ತಂಡ ಹೊಸ ಹೆಜ್ಜೆ ಇರಿಸುತ್ತಿದೆ. ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳನ್ನು ಪ್ರಾರಂಭಿಸಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ.


ಪೆದ್ರೊ, ಶಿವಮ್ಮ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿವೆ. ಸಾಕಷ್ಟು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ‘ಪೆದ್ರೋ’ ನಿರ್ದೇಶಕ ನಟೇಶ್ ಹೆಗಡೆ ಜತೆ ‘ವಾಘಾಚಿ ಪಾಣಿ’ ಅನ್ನೋ ಮತ್ತೊಂದು ಸಿನಿಮಾಕ್ಕೂ ರಿಷಬ್ ಹಣ ಹಾಕಿದ್ದಾರೆ. ಅತ್ತ ಪ್ರಮೋದ್ ಶೆಟ್ಟಿ ನಾಯಕತ್ವದಲ್ಲಿ ಸಿದ್ಧವಾಗುತ್ತಿರುವ ‘ಲಾಫಿಂಗ್ ಬುದ್ಧ’ ಸಿನಿಮಾಕ್ಕೂ ರಿಷಬ್ ನಿರ್ಮಾಪಕ.
ನಿರ್ದೇಶಕರಾಗಿ ರಿಷಬ್ ಶೆಟ್ಟಿಯವರ ಸಿನಿಮಾ ಜರ್ನಿ ಶುರುವಾಗಿದ್ದು ರಿಕ್ಕಿ ಚಿತ್ರದಿಂದ. ಆದರೆ ರಿಕ್ಕಿ ಚಿತ್ರಕ್ಕೆ ಸೂಕ್ತ ಪ್ರಚಾರ ದೊರಕಿಸಿಕೊಳ್ಳಲು ಪರದಾಡುವಂತಾಗಿತ್ತು. ಅಲ್ಲದೆ ರಿಷಬ್ ಶೆಟ್ಟಿಯವರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಿರಿಕ್ ಪಾರ್ಟಿ, ಹೀರೋ ಸೇರಿದಂತೆ ಹಲವು ಚಿತ್ರಗಳ ಪ್ರಚಾರಕ್ಕೆ ಸ್ವತಃ ರಿಷಬ್ ಐಡಿಯಾ ಕೊಡುತ್ತಿದ್ದರು. ಪ್ರಚಾರ ಮಾಡುತ್ತಿದ್ದರು. ಈಗ ಅದನ್ನು ತಾವೇ ಮಾಡುವುದು ಹಾಗೂ ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಲ್ಲಿ ಈ ಕೆರಾಡಿ ಸ್ಟುಡಿಯೋಸ್ ತಲೆಯೆತ್ತಿದೆ.



