ಸುಮಾರು ಒಂದು ವಾರದಿಂದ ಬಿಜೆಪಿಯಲ್ಲಿ ವಿಜಯೇಂದ್ರ ಅವರ ವಿರುದ್ಧ ರೋಷಾವೇಶ ಆಕ್ರೋಶದ ಮಾತುಗಳು ತಣ್ಣಗಾಗಿವೆ. ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ್, ಪ್ರತಾಪ್ ಸಿಂಹ, ರಮೇಶ್ ಜಾರಕಿಹೊಳಿ ಮೊದಲಾದವರೆಲ್ಲ ಇದ್ದಕ್ಕಿದ್ದಂತೆ ಸೈಲೆಂಟ್ ಆಗಿಬಿಟ್ರಾ..? ಹೈಕಮಾಂಡ್ ಎಲ್ಲ ರೀತಿಯಲ್ಲೂ ಭಿನ್ನಮತವನ್ನು ತಣ್ಣಗೆ ಮಾಡಿತಾ.. ಎಂದು ಹುಡುಕಿದರೆ ಹಾಗೇನಿಲ್ಲ. ಮೌನವಾಗಿರದೇ ಇದ್ದರೆ ಆಗುವ ಅಪಾಯಗಳ ಅರಿವಾಗಿ ತಣ್ಣಗಾಗಿದ್ದಾರೆ ಅಷ್ಟೇ ಎನ್ನುತ್ತಿದೆ ಮೂಲಗಳ ಮಾಹಿತಿ.
ಯತ್ನಾಳ್, ಸಿಟಿ ರವಿ, ಪ್ರತಾಪ್ ಸಿಂಹ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಜಿಎಂ ಸಿದ್ದೇಶ್ವರ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್.. ಮೊದಲಾದವರೆಲ್ಲ ವಿಜಯೇಂದ್ರ ಅವರ ವಿರುದ್ಧ ತಿರುಗಿಬಿದ್ದಿರೋದು ಈಗ ಗುಟ್ಟೇನಲ್ಲ. ಇವರಲ್ಲಿ ಸಿಟಿ ರವಿ ಅವರು ಮಾತ್ರ ಮಾರ್ಮಿಕವಾಗಿ ಮಾತನಾಡುತ್ತಿದ್ದಾರೆ ಎಂಬುದು ಬಿಟ್ಟರೆ, ಉಳಿದವರದ್ದೆಲ್ಲ ಓಪನ್ ವಾರ್. ಆರ್.ಎಸ್.ಎಸ್. ಮಧ್ಯಪ್ರವೇಶದ ನಂತರವೂ ಬಿಸಿ ತಣ್ಣಗಾಗಿರಲಿಲ್ಲ. ವಾಸ್ತವದಲ್ಲಿ ಭಿನ್ನಮತೀಯರ ಸಭೆಗಳ ಸಂಖ್ಯೆ ಮೊದಲಿಗಿಂತ ಹೆಚ್ಚಾಗಿತ್ತು. ಅದನ್ನು ತಣ್ಣಗೆ ʻಸಂತೋಷʼದಿಂದ ನೋಡುತ್ತಿದ್ದ ನಾಯಕರಿಗೆ ವಿಜಯೇಂದ್ರ ಟೀಂ ತಿರುಗಿಬಿದ್ದಾಗ ತಡಬಡಾಯಿಸಿ ನೋಡುವಂತಾಗಿದೆ.
ವಿಷಯ ಏನೆಂದರೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ವಿಜಯೇಂದ್ರ ಬೆಂಬಲಿಗರ ಸಭೆ ನಡೀತು. ಅತ್ತ ದಾವಣಗೆರೆಯಲ್ಲಿ ಯತ್ನಾಳ್ ಉಚ್ಚಾಟನೆಗೆ ನಿರ್ಣಯ ಅಂಗೀಕಾರವೂ ಆಯ್ತು. ಯಾವಾಗ ಈ ಬೆಳವಣಿಗೆ ಆಯಿತೋ.. ಆಗ ಮೊದಲಿಗೆ ಎಚ್ಚೆತ್ತವರು ಬಿಎಲ್ ಸಂತೋಷ್.
ಏಕೆಂದರೆ ವಿಜಯೇಂದ್ರ ವಿರುದ್ಧ ಹೋರಾಟದಲ್ಲಿ ಯತ್ನಾಳ್ ತಮ್ಮ ಪಕ್ಷವನ್ನೂ ಬೀದಿಗೆ ತಂದು ನಿಲ್ಲಿಸಿದ್ದರು ಅಲ್ಲದೆ ಪಕ್ಷದಿಂದ ಉಚ್ಚಾಟನೆಯಾಗಿರುವ ಈಶ್ವರಪ್ಪ ಅವರ ಜೊತೆ ವೇದಿಕೆ ಕಟ್ಟುವುದಕ್ಕೆ ಹೊರಟಿದ್ದರು. ಆರೆಸ್ಸೆಸ್ ಕೂಡಾ ಸುಮ್ಮನಿರಿ ಎಂದು ಹೇಳಿದ್ದರ ನಂತರವೂ ನಾಯಕರ ಹೇಳಿಕೆಗಳು ಹೊರಬರುತ್ತಲೇ ಇದ್ದವು. ಸಭೆಗಳು ನಡೆಯುತ್ತಲೇ ಇದ್ದವು. ಈ ಎಲ್ಲ ಬೆಳವಣಿಗೆಗಳ ನಂತರವೂ ಸುಮ್ಮನಿದ್ದರೆ, ಇಷ್ಟೂ ನಾಯಕರನ್ನು ಭಿನ್ನಮತೀಯರು, ಪಕ್ಷ ವಿರೋಧಿಗಳು ಎಂದು ಹಣೆಪಟ್ಟಿ ಕಟ್ಟುವುದು ಸುಲಭವಾಗಲಿದೆ ಎನ್ನುವುದನ್ನು ಅರ್ಥ ಮಾಡಿಕೊಂಡ ಬಿಎಲ್ ಸಂತೋಷ್, ಯತ್ನಾಳ್ ಬಣವನ್ನು ಸುಮ್ಮನಾಗಿಸಿದ್ದಾರೆ ಎನ್ನುವುದು ಸದ್ಯದ ಮಾಹಿತಿ.
ಹೀಗಾಗಿ ಈಗ ಸೈಲೆಂಟ್ ಆಗಿರುವ ಯತ್ನಾಳ್ ಅವರ ಬಣದ ನಾಯಕರು ಕಾರ್ಯಕರ್ತರ ಹಂತದಲ್ಲಿ ಸಂಘಟನೆಗೆ ಹೊರಟಿದ್ದಾರಂತೆ. ವಿಜಯೇಂದ್ರ ಅವರು ಅಧಿಕಾರ ವಹಿಸಿಕೊಂಡ ನಂತರ ಯಾರೆಲ್ಲ ಪಕ್ಷದಲ್ಲಿ ಕಡೆಗಣಿಸಲ್ಪಟ್ಟಿದ್ದಾರೋ.. ಅವರನ್ನೆಲ್ಲ ಹುಡುಕಿ ತಮ್ಮೊಂದಿಗೆ ಕರೆದು ತರುವುದಕ್ಕೆ ಮುಂದಾಗಿದ್ದಾರಂತೆ. ಆದರೆ ಅಲ್ಲಿಯೂ ಅವರಿಗೆ ಸಮಸ್ಯೆ ಎದುರಾಗಿದೆ.
ರಮೇಶ್ ಜಾರಕಿಹೊಳಿ ಅವರ ತಂಡದ ಜೊತೆ ಕಟ್ಟರ್ ಬಿಜೆಪಿ ಕಾರ್ಯಕರ್ತರು ಬರುತ್ತಿಲ್ಲ. ಯತ್ನಾಳ್ ಅವರು ತಮ್ಮ ಕ್ಷೇತ್ರದಲ್ಲೇ ಕಾರ್ಯಕರ್ತರನ್ನು ಎದುರು ಹಾಕಿಕೊಂಡಿದ್ದಾರೆ. ಶಾಸಕ ಹರೀಶ್, ಜಿಎಂ ಸಿದ್ದೇಶ್ವರ ಅವರದ್ದೂ ಇದೇ ಪರಿಸ್ಥಿತಿ. ಇದ್ದುದರಲ್ಲಿ ಉತ್ತಮವಾಗಿ ಕಂಡು ಬರುತ್ತಿರುವುದು ಅರವಿಂದ ಲಿಂಬಾವಳಿ ಅವರು ಮಾತ್ರ. ಹೀಗಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ವಿಜಯೇಂದ್ರ ಅವರ ವಿರುದ್ಧ ಮುಗಿಬೀಳುವುದಕ್ಕೆ ವಿಜಯೇಂದ್ರ ವಿರೋಧಿ ಪಡೆ ಸನ್ನದ್ಧವಾಗುತ್ತಿದೆ.
ಈಶ್ವರಪ್ಪರನ್ನು ಸೈಲೆಂಟ್ ಮಾಡೋದು ಹೇಗೆ..?
ಇಷ್ಟಾಗಿಯೂ ವಿಜಯೇಂದ್ರ ವಿರೋಧಿ ಪಡೆಗೆ ತಲೆನೋವಾಗಿರುವುದು ಈಶ್ವರಪ್ಪ. ಅವರಂತೂ ಸೈಲೆಂಟ್ ಆಗಿಲ್ಲ. ವಿಜಯೇಂದ್ರ ರಾಜಕೀಯ ಅನುಭವದಲ್ಲಿ ಇನ್ನೂ ಎಳಸು. ಅವರಿಂದ ನಾವು ಕಲಿಯಬೇಕಾದ್ದು ಏನೂ ಇಲ್ಲ ಎಂದಿರೋ ಈಶ್ವರಪ್ಪ ಆರ್‌ಸಿಬಿ ಬ್ರಿಗೇಡಿನಲ್ಲಿ ಯತ್ನಾಳ್ ಅವರೂ ಇರ್ತಾರೆ ಅಂತಾ ಹೇಳಿದ್ದಾರೆ. ಯತ್ನಾಳ್ ಸೈಲೆಂಟ್ ಆಗಿರಬಹುದು, ಈಶ್ವರಪ್ಪ ಆಗಿಲ್ಲ. ಈಶ್ವರನ್ನು ಸಂತೋಷದಿಂದ ಮಾತನಾಡಿಸುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ.



