ರೈಸ್ ಮಾಲೀಕರು ಬೆಲೆ ಏರಿಸುವ ಎಚ್ಚರಿಕೆ ಕೊಟ್ಟಿದ್ದಾರೆ. ಕ್ವಿಂಟಾಲ್ ಅಕ್ಕಿಗೆ 400 ರಿಂದ 500 ರೂ. ಏರಿಕೆ ಮಾಡುವುದಾಗಿ ಹೇಳಿದ್ದಾರೆ. ಹಾಗಂತ ಇದು ಅಕ್ಕಿ ಭಾಗ್ಯ ಕೊಟ್ಟಿದ್ದಕ್ಕೆ ರಿವೆಂಜ್ ಅಲ್ಲ, ಅವರ ವಾದವೂ ಕೇಳುವಂತದ್ದಾಗಿದೆ. ಅವರ ಈ ಎಚ್ಚರಿಕೆಗೆ ಕಾರಣ ವಿದ್ಯುತ್ ಬಿಲ್ ಏರಿಕೆ. ಇತ್ತೀಚೆಗೆ ರಾಜ್ಯ ಸರ್ಕಾರ ಏರಿಕೆ ಮಾಡಿರುವ ವಿದ್ಯುತ್ ದರ ಅತ್ಯಂತ ದುಬಾರಿಯಾಗಿದ್ದು, ಇದರಿಂದಾಗಿ ಅಕ್ಕಿ ಮಿಲ್`ಗಳ ನಿರ್ವಹಣೆ ವೆಚ್ಚ ಒಂದಕ್ಕೆ ಡಬಲ್.. ತ್ರಿಬಲ್.. ಆಗಿದೆ.
ಕರ್ನಾಟಕ ಸ್ಟೇಟ್ ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ಈ ಬಾರಿ ಬೆಲೆ ಏರಿಕೆ ಎಚ್ಚರಿಕೆ ಕೊಟ್ಟಿದೆ. ಕಡಿಮೆ ಬೆಲೆಯ ಅಕ್ಕಿಗೆ 4ರಿಂದ 5 ರೂ. ಏರಿಕೆ ಹಾಗೂ ಉತ್ತಮ ವೆರೈಟಿಯ ಅಕ್ಕಿಗೆ 8ರಿಂದ 10 ರೂ. ದರ ಏರಿಕೆ ಮಾಡುವುದಾಗಿ ಹೇಳಿದೆ. ಅನ್ನಭಾಗ್ಯ ಅಕ್ಕಿ ಹೊಂದಾಣಿಕೆ ಮಾಡಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರಕ್ಕೆ ಇದು ಮತ್ತೊಂದು ಬಿಗ್ ಶಾಕ್ ಎನ್ನದೇ ವಿಧಿಯಿಲ್ಲ.
ಈಗಿರುವ ಎಪಿಎಂಸಿ ಕಾಯಿದೆ ಅತ್ತ ರೈತರಿಗೂ ಲಾಭ ಮಾಡೋಕೆ ಆಗ್ತಿಲ್ಲ. ಇತ್ತ ನಮಗೂ ಲಾಭವಾಗುತ್ತಿಲ್ಲ. ರೈಸ್ ಮಿಲ್ ಮಾಲೀಕರಿಗೆ ಸರ್ವೀಸ್ ಟ್ಯಾಕ್ಸ್ ಹಾಕುತ್ತಿದ್ದಾರೆ. ನಾವು ಅದನ್ನು ಗ್ರಾಹಕರಿಗೆ ವರ್ಗಾಯಿಸುತ್ತಿದ್ದೇವೆ. ಹೀಗಿರುವಾಗಲೇ ಎಲೆಕ್ಟ್ರಿಸಿಟಿ ಬಿಲ್ ಬೇಕಾಬಿಟ್ಟಿ ಏರಿಸಿದ್ದಾರೆ. ರೈಸ್ ಮಿಲ್ಲುಗಳ ಮಿನಿಮಮ್ ಚಾರ್ಜ್ ಮೂರು ಪಟ್ಟು ಹೆಚ್ಚಾಗಿದೆ. ಉದಾಹರಣೆಗೆ 3ರಿಂದ 5 ಲಕ್ಷ ರೂ.ವರೆಗೆ ಬಿಲ್ ಕಟ್ಟುತ್ತಿದ್ದವರು ಈಗ ಇದ್ದಕ್ಕಿದ್ದಂತೆ 10 ಲಕ್ಷ ರೂ.ವರೆಗೆ ಬಿಲ್ ಕಟ್ಟಬೇಕಾಗಿದೆ. ಹೀಗಾದರೆ ನಮಗೆ ದರ ಏರಿಕೆ ಮಾಡುವುದು ಅನಿವಾರ್ಯ ಎನ್ನುವುದು ರೈಸ್ ಮಿಲ್ ಮಾಲೀಕರ ವಾದ.
ರಾಜ್ಯದಲ್ಲಿ ಒಟ್ಟು 2000+ ರೈಸ್ ಮಿಲ್ಲುಗಳಿವೆ. ಅವುಗಳಲ್ಲಿ ಸುಮಾರು 1600 ರೈಸ್ ಮಿಲ್ಲುಗಳು ಆಕ್ಟಿವ್ ಇವೆ. ಇಷ್ಟೂ ರೈಸ್ ಮಿಲ್ಲುಗಳು ಇಡೀ ವರ್ಷ ಕೆಲಸ ಮಾಡುವುದಿಲ್ಲ. ಭತ್ತ ಕಟಾವಿಗೆ ಬಂದಾಗಷ್ಟೇ ಕೆಲಸ. ಕಟಾವಿನ ಸಂದರ್ಭ ಹೊರತು ಪಡಿಸಿದರೆ ಉಳಿದ ತಿಂಗಳು ಕೆಲಸವಿಲ್ಲದೆ ಖಾಲಿ ಇರುತ್ತವೆ. ಆದರೆ ಮಿನಿಮಮ್ ಬಿಲ್ ಕಟ್ಟುವುದು ಮಾತ್ರ ನಿಲ್ಲುವುದೇ ಇಲ್ಲ. ಇದು ರೈಸ್ ಮಿಲ್ ಮಾಲೀಕರ ದಿನನಿತ್ಯದ ಪರಿಸ್ಥಿತಿಯೂ ಹೌದು. ಹೀಗಿರುವಾಗ ಇದ್ದಕ್ಕಿದ್ದಂತೆ ಮಿನಿಮಮ್ ಚಾರ್ಜ್ ಹೆಚ್ಚು ಮಾಡಿದರೆ.. ಅದರಲ್ಲಿಯೂ ಮೂರು ಪಟ್ಟು ಹೆಚ್ಚಿಸಿದರೆ ಹೇಗೆ ಅನ್ನೋದು ರೈಸ್ ಮಿಲ್ ಮಾಲೀಕರ ವಾದ.
ಅನುಮಾವೇ ಇಲ್ಲ. ಈಗಾಗಲೇ ಸಣ್ಣ ಸಣ್ಣ ಹಿಟ್ಟಿನ ಗಿರಣಿಗಳಲ್ಲಿಯೂ ಮಿನಿಮಮ್ ಚಾರ್ಜ್ ಡಬಲ್ ಆಗಿದೆ. ಅವರು ಈಗಾಗಲೇ ತಮ್ಮ ಮೇಲಿನ ಹೊರೆಯನ್ನ ಗ್ರಾಹಕರಿಗೆ ವರ್ಗಾಯಿಸಿದ್ದಾರೆ. ಅಂದರೆ ಕೆಜಿ ಅಕ್ಕಿ/ರಾಗಿ/ಗೋಧಿಯನ್ನು ಮಿಲ್ ಮಾಡಿಸುವವರು ಮೊದಲಿದ್ದ ದರಕ್ಕಿಂತ ಹೆಚ್ಚು ದರ ಕೊಡುವಂತಾಗಿದೆ. ಡಬಲ್ ಆಗಿದೆ. ಅದರಂತೆಯೇ ರೈಸ್ ಮಿಲ್ ಮಾಲೀಕರೂ ಮಾಡ್ತಾರೆ. ಖರ್ಚು ಹೆಚ್ಚಿದಂತೆ ವೆಚ್ಚ ಜಾಸ್ತಿಯಾದಂತೆ ಬಿಲ್ಲುಗಳೂ ದುಬಾರಿಯಾಗಲಿವೆ.



