ಪುನೀತ್ ರಾಜ್ ಕುಮಾರ್ ಅವರಿಗೆ ಆ ಸಹಾಯ ಮಾಡಿದ್ದಾರಂತೆ.. ಇವರಿಗೆ ಈ ರೀತಿ ಸಹಾಯ ಮಾಡಿದ್ರಂತೆ ಅನ್ನೋ ಕಥೆಗಳೆಲ್ಲ ಅವರು ಇನ್ನಿಲ್ಲವಾದ ಮೇಲೆ ಹೊರಬಂದವು. ಕೇಳಿದವರು ಶಾಕ್ ಆದರು. ಇಂತಹ ಮನುಷ್ಯ ನೂರು ವರ್ಷ ಬದುಕಬೇಕಿತ್ತು ಎಂದು ಹಲುಬಿದರು. ಯಾವತ್ತೂ.. ಯಾರೊಂದಿಗೂ.. ಇಂತಹವುಗಳನ್ನೆಲ್ಲ ಹೇಳಿಕೊಳ್ಳದೆ ಇರುತ್ತಿದ್ದ ಪುನೀತ್, ಸಹಾಯ ಮಾಡಿದವರಿಗೂ ಯಾರಿಗೂ ಹೇಳಬೇಡಿ ಎಂದು ತಾಕೀತು ಮಾಡುತ್ತಿದ್ದರು. ಅಕಸ್ಮಾತ್.. ಕ್ಯಾಮೆರಾ ಕಂಡರೆ.. ತಕ್ಷಣ ಜಾಗೃತರಾಗುತ್ತಿದ್ದ ಪುನೀತ್, ಕ್ಯಾಮೆರಾದವರು ಹೋದ ಮೇಲೆಯೇ ಸಹಾಯ ಮಾಡಿದ್ದರು ಎಂಬ ವಿಷಯವೂ ಗೊತ್ತಾಗಿದೆ. ಅಂತಹ ಪುನೀತ್ ಸತ್ತ ಮೇಲೂ ನೂರಾರು.. ಅಲ್ಲ.. ಸಾವಿರಾರು ಜನರ ಬದುಕಿಗೆ ಬೆಳಕಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಹೃದಯ ಜ್ಯೋತಿ ಯೋಜನೆಯಡಿ ನೀಡಲಾಗುವ ಸ್ಟಮಿ ಚಿಕಿತ್ಸೆಯಿಂದಾಗಿ ಮೈಸೂರಿನಲ್ಲಿ ಇತ್ತೀಚೆಗೆ, 1775 ಜನರು ಹೃದಯಾಘಾತದಿಂದ ಪಾರಾಗಿ ಪುನರ್ಜನ್ಮ ಕಂಡುಕೊಂಡಿದ್ದಾರೆ. ತಾಲೂಕು ಕೇಂದ್ರಗಳಲ್ಲಿರುವವರು, ಹಳ್ಳಿಗಳಲ್ಲಿ ಇರುವವರಿಗೆ ಹೃದಯಾಘಾತ ಸಂಭವಿಸಿದಾಗ ಸಕಾಲದಲ್ಲಿ ಈ ಚಿಕಿತ್ಸೆ ಸಿಗುವಂತೆ ಮಾಡಲು ಈ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಈ ಯೋಜನೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ 43 ಸಾವಿರಕ್ಕೂ ಹೆಚ್ಚು ಜನರು ಅಪಾಯದಿಂದ ಪಾರಾಗಿದ್ದಾರೆ.
ಹೃದಯಾಘಾತಕ್ಕೆ ಒಳಗಾದ ಮೊದಲ ಒಂದೂವರೆ ಗಂಟೆಯನ್ನು ಗ್ರೀನ್ ಅವರ್ ಅಥವಾ ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಚಿಕಿತ್ಸೆ ಕೊಡಿಸಬೇಕು. ಇಲ್ಲವಾದಲ್ಲಿ ಅವರಿಗೆ ಪ್ರಾಣಾಪಾಯವಾಗುವ ಸಾಧ್ಯತೆ ಇರುತ್ತದೆ. ಆದರೆ, ತಾಲೂಕು ಕೇಂದ್ರ ಹಾಗೂ ಇತರ ದೂರದ ಪ್ರದೇಶದಲ್ಲಿ ಹೃದಯಾಘಾತಕ್ಕೆ ಒಳಗಾದವರು ಜಿಲ್ಲಾ ಕೇಂದ್ರದಲ್ಲಿರುವ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಕನಿಷ್ಠ ಎರಡು ಗಂಟೆ ಸಮಯಬೇಕಾಗುತ್ತಿತ್ತು. ಹೀಗಾಗಿ ಬಹುತೇಕ ಸಂದರ್ಭದಲ್ಲಿ ದೂರದ ಊರುಗಳಿಂದ ಬರುವ ಈ ಮಾದರಿ ರೋಗಿಗಳು ಚಿಕಿತ್ಸೆ ವಿಳಂಬವಾಗಿ ತೀವ್ರ ತೊಂದರೆಗೆ ಒಳಗಾಗುತ್ತಿದ್ದರು. ಬಹಳಷ್ಟು ಮಂದಿ ಜೀವ ಕಳೆದುಕೊಳ್ಳುತ್ತಿದ್ದರು. ಈ ರೀತಿಯ ಸಮಸ್ಯೆಯನ್ನು ತಪ್ಪಿಸಲೆಂದು ರಾಜ್ಯ ಸರಕಾರ ಎಲ್ಲಾ ತಾಲೂಕು ಕೇಂದ್ರದಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿಯೇ ಹೃದ್ರೋಗಕ್ಕೆ ಪ್ರಾಥಮಿಕ ಚಿಕಿತ್ಸೆ ದೊರೆಯುವ ಡಾ.ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ ಯೋಜನೆಯನ್ನು ಮೊದಲ ಹಂತದಲ್ಲಿ ಮೈಸೂರು ಸೇರಿದಂತೆ ರಾಜ್ಯದ 15 ಜಿಲ್ಲೆಗಳಲ್ಲಿ ಜಾರಿಗೆ ತಂದಿದೆ.
ಹಬ್ ಆ್ಯಂಡ್ ಸ್ಪೋಕ್ ಮಾದರಿಯಲ್ಲಿ ಸ್ಟೆಮಿ (ಎಸ್‌ಟಿ ಎಲಿವೇಟೆಡ್ ಮಯೋಕಾರ್ಡಿಯಲ್ ಇನ್‌ಫೆಕ್ಷನ್) ಯೋಜನೆಯಲ್ಲಿ ಹೃದ್ರೋಗ ಚಿಕಿತ್ಸೆ ನೀಡಲಾಗುತ್ತದೆ. ಮೈಸೂರಿನ ಎಲ್ಲಾ ತಾಲೂಕು ಆಸ್ಪತ್ರೆಗಳು ಸ್ಪೋಕ್ ಆಸ್ಪತ್ರೆಯಾದರೆ, ಜಿಲ್ಲಾ ಕೇಂದ್ರದಲ್ಲಿರುವ ಜಯದೇವ ಆಸ್ಪತ್ರೆ ಹಬ್ ಆಸ್ಪತ್ರೆಯಾಗಿ ಕೆಲಸ ಮಾಡುತ್ತದೆ. ಹೃದ್ರೋಗಕ್ಕೆ ಸಂಬಂಸಿದ ತೊಂದರೆ ಇರುವವರು ತಾಲೂಕು ಕೇಂದ್ರದಲ್ಲಿರುವ ಸ್ಪೋಕ್ ಆಸ್ಪತ್ರೆಗೆ ಭೇಟಿ ನೀಡಿದರೆ, ಇಲ್ಲಿಎಐ ಆಧರಿತ ಯಂತ್ರವನ್ನು ಬಳಸಿಕೊಂಡು ಇಸಿಜಿ ಮಾಡುತ್ತಾರೆ.
ಆ ಸಂದರ್ಭದಲ್ಲಿ ತೊಂದರೆ ಇದ್ದರೆ ಕೂಡಲೇ ಹಬ್ ಆಸ್ಪತ್ರೆಗೆ ಮಾಹಿತಿ ಹೋಗಿ, ಅಲ್ಲಿಂದ ಅಲರ್ಟ್ ಕಾಲ್ ಬರುತ್ತದೆ. ಆಗ ತಾಲೂಕು ಕೇಂದ್ರದಲ್ಲಿರುವ ವೈದ್ಯರು 30 ಸಾವಿರ ರೂ. ಬೆಲೆ ಬಾಳುವ ಚುಚ್ಚುಮದ್ದನ್ನು ನೀಡುತ್ತಾರೆ. ಇದು ದೇಹದಲ್ಲಿ ಸರಾಗವಾಗಿ ರಕ್ತ ಸಂಚಾರವಾಗುವಂತೆ ಮಾಡುತ್ತದೆ. ಆನಂತರ ಕೆಲವು ಮಾತ್ರೆಗಳನ್ನು ಕೊಡಲಾಗುತ್ತದೆ. ಆರಂಭಿಕ ಚಿಕಿತ್ಸೆಯ ಸಂಪೂರ್ಭ ವಿವರಗಳ ಜೊಎ ಹಬ್ ಆಸ್ಪತ್ರೆಯಾದ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಕಳುಹಿಸಿ ಕೊಡುತ್ತಾರೆ. ಅಲ್ಲಿ ಮುಂಚಿತವಾಗಿಯೇ ರೋಗಿಗೆ ಬೇಕಾದ ಹಾಸಿಗೆ ರಿಸರ್ವ್ ಆಗಿರುತ್ತದೆ. ಅಲ್ಲಿನ ಹೃದ್ರೋಗ ತಜ್ಞರು ಚಿಕಿತ್ಸೆ ಮುಂದುವರಿಸುತ್ತಾರೆ. ಇದು ಪದ್ಧತಿ.
ಆದರೆ.. ಇಂಥಾದ್ದೇ ಒಂದು ದುರ್ಘಟನೆ, ದುರಂತ ಪುನೀತ್ ಅವರಿಗೂ ಆಗಿತ್ತು. ಆ ದಿನ ಬೆಂಗಳೂರಿನ ಟ್ರಾಫಿಕ್ ಜಾಮ್ʻನಿಂದಾಗಿ ಪುನೀತ್ ಕೆಲವೇ ಕಿಲೋಮೀಟರುಗಳಷ್ಟು ದೂರವಿದ್ದ ಎಂಎಸ್ ರಾಮಯ್ಯ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ. ಪತ್ನಿ ಅಶ್ವಿನಿ ಜೊತೆಗಿದ್ದರು. ಡಾಕ್ಟರುಗಳು ಕೂಗಳತೆಯಲ್ಲೇ ಇದ್ದರು. ಆದರೆ.. ಕೇವಲ ಟ್ರಾಫಿಕ್ ಜಾಮ್ʻನಿಂದಾಗಿ ಗೋಲ್ಡನ್ ಅವರ್ ಟೈಂ ಮುಗಿದು ಹೋಗಿತ್ತು. ಇದಾದ ನಂತರ ರಾಜ್ಯ ಸರ್ಕಾರ ಹೃದ್ರೋಗಿಗಳಾಗಿಯೇ ಈ ಯೋಜನೆ ಜಾರಿಗೆ ತಂದಿದ್ದು, ಅದಕ್ಕೆ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನೇ ಇಟ್ಟಿದೆ.



