ಟಿಪ್ಪು ಸುಲ್ತಾನ್ (Tippu Sulthan) ಎಂಬ ದೊರೆಯ ಒಂದು ಮುಖವನ್ನಷ್ಟೇ ತೋರಿಸಲಾಗಿದೆ. ಆತನನ್ನು ಜನಾನುರಾಗಿಯೆಂದೂ, ಹೋರಾಟಗಾರನೆಂದೂ, ವಿಜ್ಞಾನಿಯೆಂದೂ, ಸರ್ವಧರ್ಮಸಹಿಷ್ಣುವೆಂದೂ, ಮಾನವತಾವಾದಿಯೆಂದೂ ಹೇಳಲಾಗಿದೆ. ಹಾಗೆಂದು ಜನರನ್ನು ನಂಬಿಸುವ ಪ್ರಯತ್ನಗಳೂ ಆಗಿವೆ. ಆಗುತ್ತಿವೆ. ಇವೆಲ್ಲವುಗಳ ಮಧ್ಯೆ ಟಿಪ್ಪು ಸುಲ್ತಾನ್ (Tippu Sulthan) ನಡೆಸಿದ ಕ್ರೌರ್ಯಗಳ ಕತೆಗಳಿವೆಯಾದರೂ, ಅವುಗಳನ್ನು ಹೇಳುವುದೇ ಅಪಚಾರವಾಗಿದೆ. ಅವುಗಳನ್ನು ಹೇಳುವವರು ಕೋಮುದ್ವೇಷಿಗಳೆಂದೂ ಬಿಂಬಿಸಲಾಗುತ್ತಿದೆ. ಇತಿಹಾಸದ ಎರಡು ಮುಖಗಳನ್ನೂ ಒಪ್ಪಿಕೊಂಡು, ಇತಿಹಾಸವನ್ನು ಇತಿಹಾಸದಂತೆ ನೋಡುವ, ಹೇಳುವವರೇ ಕಾಣುತ್ತಿಲ್ಲ. ಇದೆಲ್ಲದರ ಮಧ್ಯೆ ಟಿಪ್ಪು (Tippu) ಅನ್ನೋ ಒಂದು ಸಿನಿಮಾ ಬಾಲಿವುಡ್ಡಿನಲ್ಲಿ ಸೆಟ್ಟೇರಿತ್ತು. ಈಗ ನೋಡಿದರೆ, ಇಡೀ ಸಿನಿಮಾ ಸ್ತಬ್ಧವಾಗಿದೆ.
ನನ್ನ ಸಿನಿಮಾಗಳು ಯಾವಾಲೂ ಸತ್ಯದ ಪರವಾಗಿವೆ. ಸುಲ್ತಾನ್ (Sulthan) ಎಂದು ಕರೆಸಿಕೊಳ್ಳುವ ಅರ್ಹತೆ ಟಿಪ್ಪುಗೆ (Tippu) ಇಲ್ಲ. ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ತೋರಿಸಿರುವಂತೆ ಅವನನ್ನು ಧೈರ್ಯಶಾಲಿ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಲಾಗಿದೆ. ಆದರೆ ಆತನ ದುರುದ್ದೇಶ ಯಾರಿಗೂ ತಿಳಿದಿರಲಿಲ್ಲ. ಭವಿಷ್ಯದ ಪೀಳಿಗೆಗೆ ಟಿಪ್ಪುವಿನ ಕರಾಳ ಮುಖವನ್ನು ಬಹಿರಂಗಪಡಿಸಲು ನಾನು ಬಯಸುತ್ತೇನೆ..
ಕೆಲವೇ ತಿಂಗಳ ಹಿಂದೆ ಇಂಥಾದ್ದೊಂದು ಟ್ವೀಟ್ ಮಾಡಿದ್ದ ನಿರ್ಮಾಪಕ ಸಂದೀಪ್ ಸಿಂಗ್ (Sandeep Singh) ಸಂಚಲನ ಸೃಷ್ಟಿಸಿದ್ದರು. ಮೇ ತಿಂಗಳಲ್ಲಿ ಘೋಷಿಸಿದ್ದ ಆ ಸಿನಿಮಾವನ್ನು ನಿರ್ಮಾಪಕ ಸಂದೀಪ್ ಸಿಂಗ್ ಕೈಬಿಟ್ಟಿದ್ದಾರೆ. ಹಜರತ್ ಟಿಪ್ಪು ಸುಲ್ತಾನ್ (Tippu Sulthan) ಕುರಿತ ಚಿತ್ರ ನಿರ್ಮಾಣವಾಗುವುದಿಲ್ಲ. ನನ್ನ ಕುಟುಂಬ, ನನ್ನ ಸ್ನೇಹಿತರು ಮತ್ತು ನನಗೆ ಬೆದರಿಕೆ ಅಥವಾ ನಿಂದನೆ ಮಾಡುವುದನ್ನು ನಿಲ್ಲಿಸಿ ಎಂದು ನನ್ನ ಸಹೋದರರು ಮತ್ತು ಸಹೋದರಿಯಲ್ಲಿ ದಯೆಯಿಂದ ವಿನಂತಿಸುತ್ತೇನೆ ಎಂದು ಟ್ವೀಟ್ ಮಾಡಿ ಸುಮ್ಮನಾಗಿದ್ದಾರೆ. ಹಾಗಾದರೆ ನಿರ್ಮಾಪಕ ಸಂದೀಪ್ ಸಿಂಗ್ ಅವರಿಗೆ ಬೆದರಿಕೆಗಳು ಬಂದಿವೆಯಾ..? ಈ ಪ್ರಶ್ನೆಗೆ ಅವರ ಸ್ಪಷ್ಟೀಕರಣದಲ್ಲೇ ಉತ್ತರ ಇದೆ. ಬೆದರಿಕೆ ಹಾಕುವುದು ನಿಲ್ಲಿಸಿ ಎಂದು ಹೇಳಿಯೇ ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಟಿಪ್ಪು ಚಿತ್ರದಲ್ಲಿ ಸಂದೀಪ್ ಸಿಂಗ್ ಟಿಪ್ಪು ಸುಲ್ತಾನ್ ನಾಶ ಮಾಡಿದ್ದ 8000 ದೇವಸ್ಥಾನಗಳು, 27 ಚರ್ಚ್‍ಗಳು, 40 ಲಕ್ಷಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರ ಮಾಡಿದ್ದು, 1 ಲಕ್ಷ ಹಿಂದೂಗಳನ್ನು ಸೆರೆಮನೆಗೆ ಹಾಕಿದ್ದು, ಕ್ಯಾಲಿಕಟ್`ನಲ್ಲಿ 2 ಸಾವಿರ ಬ್ರಾಹ್ಮಣರನ್ನು ನಾಶ ಮಾಡಿದ್ದು.. ಸೇರಿದಂತೆ ಹಲವು ಅಂಶಗಳ ಬಗ್ಗೆ ಹೇಳುವುದಾಗಿ ಮೋಷನ್ ಪೋಸ್ಟರಿನಲ್ಲಿ ಹೇಳಲಾಗಿತ್ತು. ಈಗ ಆ ಚಿತ್ರಕ್ಕೇ ಬ್ರೇಕ್ ಬಿದ್ದಿದೆ.
ಅಲ್ಲಿಗೆ ಟಿಪ್ಪು ಸುಲ್ತಾನ್`ನ ಇನ್ನೊಂದು ಮುಖವನ್ನು ಹೊರ ಜಗತ್ತಿಗೆ ತೋರಿಸುವ ಇನ್ನೊಂದು ಅವಕಾಶಕ್ಕೆ ಫುಲ್ ಸ್ಟಾಪ್ ಬಿದ್ದಂತಾಗಿದೆ. ಇಷ್ಟಕ್ಕೂ ಟಿಪ್ಪು ಸುಲ್ತಾನ್`ನ ಇನ್ನೊಂದು ಮುಖವನ್ನು ತೋರಿಸುವ ಪ್ರಯತ್ನಕ್ಕೆ ಬ್ರೇಕ್ ಹಾಕಿದ್ದು ಯಾರು? ಬೆದರಿಕೆ ಹಾಕಿದ್ದು ಯಾರು? ಯಾವುದಕ್ಕೂ ಹೆದರಲ್ಲ ಎಂದು ಘೋಷಿಸಿಯೇ ಸಿನಿಮಾ ಘೋಷಿಸಿದ್ದ ನಿರ್ಮಾಪಕನನ್ನೂ ಹೆದರುವಂತೆ ಮಾಡಿದ್ದು ಯಾರು? ಅದು ಸಸ್ಪೆನ್ಸ್. ಉತ್ತರ ಸಿಕ್ಕುವುದೇ ಇಲ್ಲ.



