ಅವನು ಆಕೆಯ ಮಗಳನ್ನು ಪ್ರೀತಿಸಿದ್ದ. ಮದುವೆಗೆ ಒಪ್ಪದೇ ಹೋದಾಗ ಅವರ ಮಗಳನ್ನೇ ಕರೆದುಕೊಂಡು ಹೋಗಿ ಮದುವೆಯಾಗಿದ್ದ. ಮದುವೆಯಾಗಿ ಆಕೆಯ ಜೊತೆ ಒಂದೂವರೆ ವರ್ಷ ಸಂಸಾರವನ್ನೂ ಮಾಡಿದ್ದ. ಆದರೆ ಹುಡುಗಿಗಿಂತ ಹೆಚ್ಚಾಗಿ ಹುಡುಗಿಯ ಆಸ್ತಿ, ಬಂಗಾರದ ಮೇಲೆ ಕಣ್ಣಿಟ್ಟೇ ಲವ್ ಮಾಡಿ ಮದುವೆಯಾಗಿದ್ದವನಿಗೆ ಆಸ್ತಿಯೂ ಸಿಕ್ಕಿರಲಿಲ್ಲ. ಬಂಗಾರವೂ ಸಿಕ್ಕಿರಲಿಲ್ಲ. ಆಮೇಲೆ ಸರಿ ಹೋಗುತ್ತೆ ಎಂದು ಕೊಂಡಿದ್ದವನಿಗೆ ಸರಿ ಹೋಗುವ ಲಕ್ಷಣಗಳೂ ಕಾಣಿಸಲಿಲ್ಲ. ಕಾಯುವ ತಾಳ್ಮೆಯೂ ಇಲ್ಲದವನು ಅತ್ತೆ ಮನೆಗೇ ಕನ್ನ ಹಾಕಿ ಮಾವನ ಮನೆ ಸೇರಿದ್ಧಾನೆ.
ಮಗಳನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಅವಳನ್ನು ಮನೆಯಿಂದ ಕರೆದೊಯ್ದಿದ್ದಲ್ಲದೆ, ಒಂದೂವರೆ ವರ್ಷದ ಬಳಿಕ ಮತ್ತೆ ಅತ್ತೆ ಮನೆಗೆ ನುಗ್ಗಿ ಚಿನ್ನಾಭರಣ ಕದ್ದೊಯ್ದು ಪೊಲೀಸರ ಕೈಗೆ ಸಿಕ್ಕಿಬಿದ್ದ ವಿಚಿತ್ರ ಘಟನೆ ನಡೆದಿರೋದು ಬೆಂಗಳೂರಿನಲ್ಲಿ. ಪ್ರದೀಪ್ ಕುಮಾರ್ ಅರೆಸ್ಟ್ ಆದ ಅಳಿಯ.
ರೆಜಿನಾ ಎಂಬುವವರಿಗೆ ಲಾವಣ್ಯ ಎಂಬ ಮಗಳಿದ್ದಾಳೆ. ಆಕೆಯನ್ನು ಲವ್ ಮಾಡಿ ಕರೆದುಕೊಂಡು ಹೋಗಿದ್ದ ಪ್ರದೀಪ್, ಈಗ ಅತ್ತೆಯ ಮನೆಗೇ ನುಗ್ಗಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾನೆ. ಮಗಳು ಎಲ್ಲಿದ್ದಾಳೆಂದು ಕೂಡ ರೆಜಿನಾ ಅವರಿಗೆ ಈವರೆಗೆ ಗೊತ್ತಿಲ್ಲ. ಮಗಳನ್ನು ಕರೆದೊಯ್ದ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ರೆಜಿನಾಗೆ ಈಗ ಮಗಳನ್ನು ಕರೆದುಕೊಂಡು ಹೋಗಿದ್ದವನೇ ಕಳ್ಳನಾಗಿ ಸಿಕ್ಕಿರೋದು ಅಚ್ಚರಿಗೆ ದೂಡಿದೆ. ಅತ್ತೆ ರೆಜಿನಾ ಕನ್ಯಾಕುಮಾರಿಗೆ ಪ್ರವಾಸ ಹೋಗಿದ್ದ ಸಂದರ್ಭ ನೋಡಿಕೊಂಡು ಅತ್ತೆಯ ಮನೆ ಬಾಗಿಲು ಮುರಿದು ಬೆಲೆಬಾಳುವ ವಸ್ತು ಚಿನ್ನಾಭರಣ ಕದ್ದೊಯ್ದಿದ್ದಾನೆ.
ಕಳ್ಳತನ ಮಾಡಿ ಚಿನ್ನಾಭರಣ ತೆಗೆದುಕೊಂಡು ಹೋಗುವಾಗ ಅಕ್ಕ ಪಕ್ಕದ ನಿವಾಸಿಗಳು ನೋಡಿ ವಿಚಾರಿಸಿದ್ಧಾರೆ. ನೆರೆಹೊರೆಯವರು ಪ್ರಶ್ನೆ ಮಾಡಿದಾಗ ನಾನು ಇವರ ಸಂಬಂಧಿಕರು ಎಂದು ಹೇಳಿದ್ದ ಪ್ರದೀಪ್, ಯಾಮಾರಿಸಿದ್ದರೂ, ನೆರೆಹೊರೆಯ ಜನ ಅವನ ಫೋಟೋ ತೆಗೆದಿಟ್ಟುಕೊಂಡಿದ್ದಾರೆ.
ಮೊಬೈಲ್ ನಲ್ಲಿ ಫೊಟೋ ತೆಗೆದು ರೆಜಿನಾ ಅವರಿಗೆ ಕರೆ ಮಾಡಿದ್ದ ಸ್ಥಳೀಯರು. ಆದರೆ ಆ ವೇಳೆಗೆ ರೆಜಿನಾ ಅವರ ನಂಬರ್ ನಾಟ್ ರೀಚೆಬಲ್ ಆದ ಹಿನ್ನಲೆ ಸಂಪರ್ಕ ಸಾಧ್ಯವಾಗಿರಲಿಲ್ಲ. ನಂತರ ಕನ್ಯಾಕುಮಾರಿಯಿಂದ ರೆಜಿನಾ ವಾಪಾಸ್ ಬಂದಾಗ ಬಾಗಿಲು ಒಡೆದಿತ್ತು . ಅನುಮಾನಗೊಂಡು ನೋಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಗದು ಸೇರಿ ಒಟ್ಟು 40 ಲಕ್ಷ ಕಳ್ಳತನವಾಗಿತ್ತು.
ಕಳ್ಳತನವಾಗಿರುವುದು ಗೊತ್ತಾದ ಕೂಡಲೇ ಶಾಕ್ ಆಗಿದ್ದ ರೆಜಿನಾ. ಅಕ್ಕಪಕ್ಕದವರನ್ನು ವಿಚಾರಿಸಿದ್ದರು. ಆಗ ಕಳ್ಳತನ ಮಾಡುವುದನ್ನು ನಾವು ನೋಡಿದ್ದೇವೆ ಎಂದಿದ್ದ ಸ್ಥಳೀಯ ನಿವಾಸಿಗಳು ಆರೋಪಿಯ ಫೋಟೊ ತೆಗೆದಿರೋದಾಗಿ ಪ್ರದೀಪ್‌ಕುಮಾರನ ಫೋಟೊ ತೋರಿಸಿದ್ದರು. ಫೊಟೋ ನೋಡಿದಾಗ ತನ್ನ ಅಳಿಯನೇ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.



