ರಿಷಬ್ ಶೆಟ್ಟಿ ಸಿನಿಮಾಗಳಲ್ಲಿ ರೊಮ್ಯಾನ್ಸ್ ಕೂಡಾ ರೋಮಾಂಚನ ಕೊಡುತ್ತದೆ. ಕಾಂತಾರದಲ್ಲಿ ಸೊಂಟು ಗಿಲ್ಲುವ ದೃಶ್ಯವಾಗಲೀ, ಬೀಡಿ ವಾಸ್ನೆ ಬತ್ತಾ ಉಂಟು ಎನ್ನುವ ದೃಶ್ಯವೇ ಆಗಲಿ, ಮೀನು ಸಾರು ಮಾಡುವ ದೃಶ್ಯವೇ ಆಗಲಿ.. ರೊಮ್ಯಾಂಟಿಕ್ ಆಗಿಯೇ ಶೂಟ್ ಮಾಡ್ತಾರೆ. ಈಗ ಬರುತ್ತಿರುವ ಕಾಂತಾರದಲ್ಲೂ ಅಷ್ಟೇ.. ರೊಮ್ಯಾನ್ಸ್ ಝಲಕ್ ಕಾಣುತ್ತಿದೆ. ಇಷ್ಟಕ್ಕೂ ಕಾಂತಾರಕ್ಕೆ ರಿಷಬ್ ಶೆಟ್ಟಿಯೇ ನಿರ್ದೇಶಕರು. ಅವರೇ ಹೀರೋ.
ಹೀಗಿರುವಾಗ ಚಿತ್ರದ ಪ್ರೀತಿ ಪ್ರೇಮ ಪ್ರಣಯದ ದೃಶ್ಯಗಳನ್ನೂ ಅವರೇ ಡೈರೆಕ್ಟ್ ಮಾಡ್ತಾರೆ ಅಂದ್ಕೊಂಡ್ರೆ ಅದು ಸಹಜವೂ ಹೌದು. ಆದರೆ ಕಾಂತಾರ ಭಾಗ-01ರಲ್ಲಿ ಪ್ರೀತಿ ಪ್ರೇಮ ಪ್ರಣಯದ ದೃಶ್ಯಗಳಿಗೆ ಪ್ರಗತಿ ಶೆಟ್ಟಿ ಅವರೇ ಡೈರೆಕ್ಟರ್ ಎಂಬಂತೆ ನಡೆದುಕೊಂಡಿದ್ದಾರಂತೆ.
ಡ್ಯಾನ್ಸ್ ಮಾಸ್ಟರ್ ಭೂಷಣ್ ಅವರು ಇದನ್ನೆಲ್ಲ ಹಂಚಿಕೊಂಡಿದ್ದಾರೆ. ʻʻರೊಮ್ಯಾನ್ಸ್ ಸೀನ್ ಶೂಟ್ ಮಾಡ್ತಾ ಇದ್ವಿ. ಪ್ರಗತಿ ಮೇಡಂ ಸೆಟ್ಟಿಗೆ ಬಂದ್ರು. ಏನಪ್ಪಾ ಮಾಡೋದು.. ಹೆಂಡತಿ ಎದುರಿಗೇ ಇಂತಹ ಸೀನ್ ಮಾಡೋಕೆ ಒಪ್ತಾರೋ ಇಲ್ವೋ ಎಂದು ಯೋಚನೆ ಮಾಡ್ತಾ ಇದ್ದೆ. ಆಗ ಪ್ರಗತಿ ಅವರೇ ಮಾಸ್ಟರ್ ಬನ್ನಿ ಇಲ್ಲಿ ಅಂತ ಕರೆದ್ರು. ನಾನು ಅಂದ್ಕೊಂಡಿದ್ದು.. ಏನ್ ಹಿಂಗೆಲ್ಲಾ, ಕೊಂಚ ನೋಡ್ಕೊಂಡು ಮಾಡ್ಸಿ ಅಂತಾರೆ ಅಂತ ನಿರೀಕ್ಷೆ ಮಾಡಿದ್ದೆ. ಆದರೆ.. ಅವ್ರು, ಹೇಯ್.. ಮಾಸ್ಟರ್.. ಇದೆಲ್ಲ ಸಾಕಾಕ್ತಿಲ್ಲ, ಫುಲ್ ರೊಮ್ಯಾನ್ಸ್ ಮಾಡ್ಸಿ ಅಂದ್ರು. ನೀವಿದ್ದರೆ ಹೆಂಗೆ ಮೇಡಂ, ಅಂದೆ, ನಾನು ಬರಲ್ಲ, ನೀವು ಚೆನ್ನಾಗಿ ಮಾಡ್ಸಿ, ಕೆಮೆಸ್ಟ್ರಿ ಚೆನ್ನಾಗಿ ವರ್ಕ್ ಆಗಬೇಕು..ʼʼ ಅಂದರಂತೆ.
ನಾಯಕಿಯರ ಜೊತೆ ರೊಮ್ಯಾನ್ಸ್ ಮಾಡೋದ್ರಲ್ಲಿ ರಿಷಬ್ ಶೆಟ್ಟಿ ಸ್ವಲ್ಪ ವೀಕು ಅನ್ನೋದೇನೋ ನಿಜ. ಅರೆ.. ಅದ್ ಹೆಂಗ್ ಹೇಳ್ತೀರಾ ಅಂದ್ರೆ.. ಬೆಲ್ ಬಾಟಂ ಚಿತ್ರದ ಘಟನೆ ನೆನಪು ಆಡಿಕೊಳ್ಳಿ. ಅಲ್ಲಿ ರಿಷಬ್ ಎದುರು, ಹರಿಪ್ರಿಯಾ ಜೋಡಿ. ಹರಿಪ್ರಿಯಾ ಅವರು ರಿಷಬ್ ಮತ್ತು ಪ್ರಗತಿ ಇಬ್ಬರಿಗೂ ಒಳ್ಳೆಯ ಫ್ರೆಂಡ್. ನೀನು ಸರಿಯಾಗಿ ರೊಮ್ಯಾನ್ಸ್ ಮಾಡ್ತಿಲ್ಲ ಅಂತಾ ಹರಿಪ್ರಿಯಾ, ಸರಿಯಾಗಿ ಕಣ್ಣು ಬಿಟ್ಟು ನೋಡೋ ಅಂತಾ ಪ್ರಗತಿ ಶೆಟ್ಟಿ.. ಇಬ್ಬರೂ ರೇಗಿಸಿ ರೇಗಿಸಿ ಹಾಕಿದ್ರಂತೆ. ಸಾಮಾನ್ಯವಾಗಿ ಗಂಡನ ಸಿನಿಮಾಗಳಲ್ಲಿ ರೊಮ್ಯಾನ್ಸ್ ಸೀನ್ ಶೂಟ್ ಮಾಡುವಾಗ ಪತ್ನಿಯಾದವರು ಅಲ್ಲಿಗೆ ಬರೋದಿಲ್ಲ. ಆದರೆ ಪ್ರಗತಿ ಶೆಟ್ಟಿ ಹಾಗಲ್ಲ. ಅವರೇ ಗಂಡನಿಂದ ರೊಮ್ಯಾನ್ಸ್ ಮಾಡಿಸ್ತಾರೆ. ಇಷ್ಟಕ್ಕೂ ಅದಕ್ಕೆ ಕಾರಣ ಏನೆಂದು ನೋಡಿದರೆ ಮೊದಲನೆಯದ್ದು ನಂಬಿಕೆ. ಎರಡನೆಯದ್ದು ಪ್ರೊಫೆಷನ್. ಅವರು ಪ್ರೊಫೆಷನಲ್ ಆಗಿದ್ದಾರೆ, ಅಷ್ಟೇ.
ಅಂದಹಾಗೆ ಇದನ್ನೆಲ್ಲ ವಿಶೇಷವಾಗಿ ಹೇಳುವುದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಕನ್ನಡದ ಬಹುತೇಕ ನಟರ ರೊಮ್ಯಾನ್ಸ್ ಸೀನ್ಸ್ ಚಿತ್ರೀಕರಣದಲ್ಲಿ ಹೀರೋಗಳ ಪತ್ನಿಯರು ಖುದ್ದಾಗಿ ಹಾಜರ್ ಇರುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ರೊಮ್ಯಾನ್ಸ್ ಮಾಡುವಂತೆ ನೋಡಿಕೊಳ್ತಾರೆ. ಇತ್ತೀಚೆಗೆ ಕನ್ನಡ ಸಿನಿಮಾಗಳ ʻಡೈರೆಕ್ಟರ್ʼಗಳು ಅತ್ತ ಹೀರೋ ಹೇಳಿದಂತೆ ಶಾಟ್ ಇಟ್ಟು, ನಿರ್ಮಾಪಕ ಹೇಳಿದಂತೆ ಕ್ಯಾಮೆರಾ ಇಟ್ಟು.. ಹೀರೋಗೆ ತಕ್ಕಂತೆ ಡೈಲಾಗ್ ಬರೆಸಿ ಒದ್ದಾಡುತ್ತಿರುವ ಹೊತ್ತಿನಲ್ಲೆ.. ಪ್ರೀತಿ ಮಾಡೋಕೂ ಹೊಸ ಡೈರೆಕ್ಟರ್ ಆಗಿ ಹೆಂಡತಿಯರು ಬಂದಿದ್ದಾರೆ. ಇದರ ನಡುವೆ ಪ್ರಗತಿ ಶೆಟ್ಟಿ ಡಿಫರೆಂಟ್ ಅಗಿದ್ದಾರೆ. ಮತ್ತು ಪ್ರೊಫೆಷನಲ್ ಆಗಿದ್ದಾರೆ.



