ಧರ್ಮಸ್ಥಳಕ್ಕೆ ತಲೆಬುರುಡೆ ತಂದವರು ಯಾರು..? ಚಿನ್ನಯ್ಯನಾ.. ಜಯಂತ್‌ನಾ.. ಗಿರೀಶ್ ಮಟ್ಟಣ್ಣವರಾ.. ಅಥವಾ.. ಯಾರು.. ಎಂಬ ಪ್ರಶ್ನೆಗೆ ದಿಢೀರನೆ ಟ್ವಿಸ್ಟ್ ಸಿಕ್ಕಿದೆ. ಸೌಜನ್ಯಳ ಮಾವ ವಿಠ್ಠಲ ಗೌಡರೇ ತಲೆಬುರುಡೆ ತಂದು ಕೊಟ್ಟ ವ್ಯಕ್ತಿ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ..
ಚಿನ್ನಯ್ಯ ಈಗಾಗಲೇ ತಲೆಬುರುಡೆ ತಂದಿದ್ದು ನಾನಲ್ಲ.. ನನಗೆ ಬುರುಡೆ ಕೊಟ್ಟಿದ್ದು ಜಯಂತ್ ಎನ್ನುತ್ತಿದ್ದರೆ, ಆ ಜಯಂತ್.. ತಲೆಬುರುಡೆ ಕಥೆಯನ್ನು ಗಿರೀಶ್ ಮಟ್ಟಣ್ಣವರ್ ಮೇಲೆ ಎತ್ತಿ ಹಾಕಿದ್ದಾನಂತೆ. ಮಟ್ಟಣ್ಣವರ್ ಕೇಳಿದರೆ.. ನನಗೆ ತಲೆಬುರುಡೆ ಕಥೆಯೇ ಗೊತ್ತಿಲ್ಲ ಎನ್ನುತ್ತಿದ್ಧಾನೆ. ಎಸ್‌ಐಟಿಯವರು ಇನ್ನಷ್ಟು ಪ್ರಶ್ನೆ ಮಾಡಿದಾಗ.. ದಿಢೀರನೆ ಸೌಜನ್ಯ ಅವರ ಮಾವ ವಿಠ್ಠಲ್ ಗೌಡ ಹೆಸರು ಹೊರಬಿದ್ದಿದೆ.
ಶನಿವಾರ ಸಂಜೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಅರಣ್ಯಕ್ಕೆ ವಿಠಲ ಗೌಡ ಹಾಗೂ ಹೋರಾಟಗಾರ ಜಯಂತ್ ಅವರೊಂದಿಗೆ ಬಂದ ಎಸ್ಐಟಿ, ತಲೆಬುರುಡೆ ಸ್ಥಳದ ಮಹಜರು ನಡೆಸಿದ್ದು, ವಿಠಲ ಗೌಡನನ್ನು ಬಂಗ್ಲೆಗುಡ್ಡಕ್ಕೆ ಕರೆದುಕೊಂಡು ಹೋಗಿದೆ. ಗಿರೀಶ್ ಮಟ್ಟಣ್ಣವರ್‌ಗೆ ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತೆಗೆದುಕೊಟ್ಟಿದ್ದೆ. ಬಂಗ್ಲೆಗುಡ್ಡೆ ಕಾಡಿನ ಮಣ್ಣಿನ ಮೇಲ್ಭಾಗದಿಂದ ಬುರುಡೆ ತೆಗೆದಿದ್ದೆ ಎಂದು ವಿಠಲಗೌಡನೇ ತನಿಖಾ ತಂಡದ ಎದುರು ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಚಿನ್ನಯ್ಯನನ್ನು ಪರಿಚಯ ಮಾಡಿಸಿದ್ದೇ ವಿಠ್ಠಲ ಗೌಡ..!
ಬುರುಡೆ ಟೀಂಗೆ ಚಿನ್ನಯ್ಯನ ಪರಿಚಯಿಸಿದ್ದೇ ಸೌಜನ್ಯ ಮಾವ ವಿಠಲಗೌಡ. ಚಿನ್ನಯ್ಯನ ಪರಿಚಯಿಸಿ ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ಕೂಡ ತಂದುಕೊಟ್ಟಿದ್ದ. ಬುರುಡೆ ಗ್ಯಾಂಗ್‌ಗೂ ಮೊದಲೇ ವಿಠಲಗೌಡನಿಗೆ ಚಿನ್ನಯ್ಯ ಪರಿಚಿತನಾಗಿದ್ದ. ವಿಠ್ಠಲ ಗೌಡನಿಗೆ ಒಂದು ಹೋಟೆಲ್ ಇತ್ತು. ಆ ಹೋಟೆಲ್ಲಿಗೆ ಚಿನ್ನಯ್ಯ ರೆಗ್ಯುಲರ್ ಕಸ್ಟಮರ್. ನೇತ್ರಾವತಿ ಬಳಿ ಹೋಟೆಲ್ ಇದ್ದಾಗ ಚಿನ್ನಯ್ಯ ಬಂದು ಹೋಗುತ್ತಿದ್ದ. ಚಿನ್ನಯ್ಯ ಅನಾಥ ಶವ ಹಾಗೂ ಯುಡಿಆರ್ ಕೇಸ್‌ನ ಶವಗಳನ್ನು ದಫನ್ ಮಾಡುತ್ತಾನೆ ಎನ್ನುವುದು ವಿಠ್ಠಲ್ ಗೌಡನಿಗೆ ಗೊತ್ತಿತ್ತು. ಅದನ್ನು ಹೇಳಿದ ಮೇಲೆ ಗಿರೀಶ್ ಮಟ್ಟಣ್ಣವರ್ ಕಥೆ ಕಟ್ಟಿದ. ಆಗ ಚಿನ್ನಯ್ಯ ಎಂಟ್ರಿ ಕೊಟ್ಟ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಇಡೀ ಪ್ರಕರಣದಲ್ಲಿ ಈ ಬುರುಡೆಯ ಸುತ್ತ ಹಲವು ಕತೆಗಳನ್ನು ಹೆಣೆಯಲಾಗಿತ್ತು. ಆದರೆ ಅದೆಲ್ಲದಕ್ಕೂ ಇದೀಗ ಕೊನೆಯಾಗಿದ್ದು ತಲೆಬುರುಡೆಯನ್ನು ಇದೇ ಸ್ಥಳದಿಂದ ತೆಗೆದಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಈ ಪ್ರಕರಣದಲ್ಲಿ ಬುರುಡೆಯನ್ನು ಮೊದಲು ನೋಡಿರುವ ವಿಠಲಗೌಡ ಹಾಗೂ ಜಯಂತ್ ಅವರೊಂದಿಗೆ ಸ್ಥಳಕ್ಕೆ ತೆರಳಿದ ಎಸ್ಐಟಿ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ. ಈ ಪ್ರಕರಣದ ಸತ್ಯ ಹೊರಗೆ ಬಂದಿರುವುದರಿಂದ ವಿಠಲ ಗೌಡನನ್ನು ಬಂಧಿಸುವ ಸಾಧ್ಯತೆ ಇದೆ.
ಏಕೆಂದರೆ ಈ ಮಹಜರು ಪ್ರಕ್ರಿಯೆ ಮಾಡುವಾಗ ಅಲ್ಲಿ ಚಿನ್ನಯ್ಯ ಇರಲಿಲ್ಲ. ತಲೆಬುರುಡೆಯನ್ನು ನ್ಯಾಯಾಲಯಕ್ಕೆ ತಂದು ಒಪ್ಪಿಸಿದ್ದ ಚಿನ್ನಯ್ಯ ಇಲ್ಲದೆ ಮಹಜರು ಪ್ರಕ್ರಿಯೆ ನಡೆಸಿದ್ದಾರೆ. ಚಿನ್ನಯ್ಯ ವಿಚಾರಣೆಯ ವೇಳೆ ಬುರುಡೆಯನ್ನು ತಾನು ತೆಗೆದಿರುವುದಲ್ಲ ಎಂದು ಹೇಳಿಕೆ ನೀಡಿದ್ದ. ಆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಗಿರೀಶ್ ಮಟ್ಟೆಣ್ಣವರ್, ಜಯಂತ್ ಟಿ. ಹಾಗೂ ಸೌಜನ್ಯಾ ಮಾವ ವಿಠಲ ಗೌಡ ಹಾಗೂ ಯೂಟ್ಯೂಬರ್ ಅಭಿಷೇಕ್‌ನನ್ನೂ ವಿಚಾರಣೆ ಮಾಡಲಾಗಿತ್ತು.



