ಪ್ರತಿಪಕ್ಷಗಳು ಪ್ರಶ್ನೆ ಕೇಳುತ್ತಲೇ ಇದ್ದವು. ಸಾರ್ವಜನಿಕರೂ ಪ್ರಶ್ನಿಸುತ್ತಿದ್ದರು. ಗ್ಯಾರಂಟಿ ಭಾಗ್ಯಗಳಿಗಾಗಿ ಬಜೆಟ್ಟಿನ ಅಷ್ಟು ದೊಡ್ಡ ಮೊತ್ತವನ್ನು ತೆಗೆದಿಟ್ಟರೆ ಬೇರೆ ಕೆಲಸಗಳಿಗೆ ಹಣ ಹೇಗೆ ಹೊಂದಿಸುತ್ತೀರಿ ಎಂದು ಕೇಳುತ್ತಲೇ ಇದ್ದರು. ಇದೀಗ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಮುಖ್ಯಮಂತ್ರಿ ಅವರು ಬಾಕಿ ಬಿಲ್ಗಳು, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿದ್ದಾರೆ. ಆದರೆ, ಸದ್ಯ ಹೊಸ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಲು ಅನುದಾನ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ನನ್ನ ಇಲಾಖೆಯಲ್ಲೂ ಸಣ್ಣ ಕೆಲಸ ಮಾಡಲೂ ಆಗುತ್ತಿಲ್ಲ. 1.25 ಲಕ್ಷ ಕೋಟಿ ರು. ಕೆಲಸ ನಡೆಯುತ್ತಿದೆ. ಇದಕ್ಕೆ ಹಣ ಬೇಕು, ಜೊತೆಗೆ ಸಂಬಳ, ಸಾಲ ಎಲ್ಲ ಕೊಡಬೇಕು. ಗ್ಯಾರಂಟಿಗಳ ಜಾರಿಗೆ ಅನುದಾನ ಕೊಡಬೇಕಿದೆ ಎಂದಿರುವ ಡಿಕೆ ಶಿವಕುಮಾರ್, ಹೊಸ ಕಾಮಗಾರಿಗಳಿಗೆ ಮಂಜೂರಾತಿ ನೀಡಬಹುದು. ಆದರೆ, ಹಣವನ್ನೂ ಕೊಡಬೇಕಲ್ವಾ? ಈ ಬಜೆಟ್ನಲ್ಲಿ ಅನುದಾನ ಕಡಿಮೆಯಾಗಿದೆ. ? 16 ಸಾವಿರ ಕೋಟಿ ರು.ನಷ್ಟು ಬಾಕಿ ಬಿಲ್ ನನ್ನ ಹತ್ತಿರವೇ ಇದೆ. ಅದೇ ರೀತಿ ಇತರೆ ಸಚಿವರಿಗೂ ಸಮಸ್ಯೆ ಇರುತ್ತಲ್ವಾ? ಇದನ್ನೆಲ್ಲಾ ಶಾಸಕರೂ ಅರ್ಥಮಾಡಿಕೊಳ್ಳಬೇಕು ಎಂದು ಶಾಸಕರಿಗೆ ಬುದ್ದಿಮಾತು ಹೇಳಿದ್ದಾರೆ.
ಅಲ್ಲದೆ ಸತತ 2ನೇ ದಿನವೂ ಕುಮಾರಸ್ವಾಮಿ ವಿರುದ್ಧ ದಾಳಿ ಮುಂದುವರೆಸಿರುವ ಡಿಕೆ ಶಿವಕುಮಾರ್ ಕೆಲವರು ಸರ್ಕಾರವನ್ನು ಅತಂತ್ರಗೊಳಿಸಬೇಕು ಎಂದು ಕಾಯುತ್ತಾ ಇರುತ್ತಾರೆ. ಇದಕ್ಕಾಗಿ ಶಾಸಕರಿಗೆ ಗಾಳ ಹಾಕುತ್ತಾ ಇರುತ್ತಾರೆ. ಸರ್ಕಾರವನ್ನು ಅತಂತ್ರಗೊಳಿಸಲಾಗದು ಎಂದು ಗೊತ್ತಿದ್ದರೂ, ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಈ ರೀತಿ ಮಾಡುತ್ತಾರೆ. ಸರ್ಕಾರದಲ್ಲಿ ಇಲ್ಲದಾಗಲೇ ನನಗೆ ಮಾಹಿತಿ ಬರುತ್ತಿತ್ತು. ಈಗ ಸರ್ಕಾರವಿರುವಾಗ ಸಿಗುವುದಿಲ್ಲವೇ ಎಂದು ಸುದ್ದಿಗಾರರಿಗೇ ಪ್ರಶ್ನಿಸಿದ್ದಾರೆ.
ನಗೆ ವೈಯಕ್ತಿಕ ಮಾಹಿತಿ ಕೂಡ ಸಿಗುತ್ತದೆ. ಎಲ್ಲಿ ಕರೆದರು, ಯಾರಿಗೆ ರೆಡಿ ಇರಿ ಎಂದು ಹೇಳಿದ್ದಾರೆ ಎಂಬುದನ್ನು ಖುದ್ದು ಶಾಸಕರೇ ನನಗೆ ಬಳಿ ಹೇಳಿದ್ದಾರೆ. ಡಿಸೆಂಬರ್ ಹೊತ್ತಿಗೆ ಮಾಯ-ಮಂತ್ರ ಮಾಡುತ್ತೇವೆ ಎಂದಿದ್ದಾರೆ. ವಿಧಾನಸಭೆಯಲ್ಲಿ ಕೆಲವರು ಚಾಕೊಲೇಟ್ ಕೊಡುತ್ತಾ ಇರುತ್ತಾರೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಸುಮ್ಮನೆ ಕೂರಲು ಆಗುವುದಿಲ್ಲ. ಎಲ್ಲವನ್ನು ಗಮನಿಸುತ್ತಾ ಇರುತ್ತೇನೆ. ಪಿತೂರಿ ಮಾಹಿತಿ ಬಂದಿದ್ದರಿಂದಲೇ ಆ ಬಗ್ಗೆ ಹೇಳಿಕೆ ನೀಡಿದ್ದೇನೆ ಎಂದು ಉತ್ತರ ಕೊಟ್ಟಿದ್ದಾರೆ.
ಆದರೆ ಡಿಕೆಶಿಯವರ ಈ ಹೇಳಿಕೆ, ಸರ್ಕಾರವನ್ನು ಕೆಡವುತ್ತಾರೆ ಎಂಬ ಆರೋಪ ಎಲ್ಲವೂ ಕೂಡಾ ಪಕ್ಷದೊಳಗೆ ಎದ್ದಿರುವ ಬೆಂಕಿಯನ್ನು ತಣ್ಣಗಾಗಿಸಲು, ಮುಂಜಾಗ್ರತಾ ಕ್ರಮವಾಗಿ ಶಾಸಕರನ್ನು ಕಂಟ್ರೋಲಿನಲ್ಲಿ ಇಟ್ಟುಕೊಳ್ಳಲು ಹಾಗೂ ಅನುದಾನ ಇಲ್ಲದೆ ಕೆಲಸ ಮಾಡಲಾಗದೆ ಆಗುತ್ತಿರುವ ಪರದಾಟವನ್ನು ಬೇರೆ ಕಡೆ ಸೆಳೆಯಲು ನೀಡುತ್ತಿರುವ ಹೇಳಿಕೆಗಳಷ್ಟೇ ಎನ್ನುವುದು ಜೆಡಿಎಸ್ ನಾಯಕರು ಹಾಗೂ ಬಿಜೆಪಿಯವರ ಮಾತು.



