ಬಡವರಿಗೆ 5 ರೂಪಾಯಿಯಲ್ಲಿ ತಿಂಡಿ, ಊಟ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ, ಅದಕ್ಕಾಗಿ ಬೆಂಗಳೂರಿನಲ್ಲಿ ವಾರ್ಡಿಗೆ ಒಂದರಂತೆ (ಕೆಲವು ಕಡೆ ಎರಡು) ಸುಮಾರು 200+ ಕ್ಯಾಂಟೀನ್ ಆರಂಭ ಮಾಡಿತ್ತು. ಅಂದರೆ ಇಲ್ಲಿ ಇಂದಿರಾ ಕ್ಯಾಂಟೀನ್ʻನಲ್ಲಿ ಗ್ರಾಹಕರು 5 ರೂ.ಗೆ ಉಪಹಾರ ಪಡೆಯುತ್ತಿದ್ದರು. ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ 10 ರೂ. ಕೊಡುತ್ತಿದ್ದರು. ಆದರೆ ಈಗ ದಿಢೀರ್ ಎಂದು ಬೆಂಗಳೂರಿನ ಹಲವು ಕ್ಯಾಂಟೀನ್ʻಗಳು ಬಂದ್ ಆಗಿವೆ.
ಹೇಗೆ ನಡೆಯುತ್ತಿತ್ತು ಇಂದಿರಾ ಕ್ಯಾಂಟೀನ್..?
ಇಂದಿರಾ ಕ್ಯಾಂಟೀನ್ ಗ್ರಾಹಕರಿಗೆ 5 ರೂ.ಗೆ ತಿಂಡಿ ದೊರೆಯುತ್ತಿತ್ತಾದರೂ, ರಾಜ್ಯ ಸರ್ಕಾರ ಟೆಂಡರ್ ಪಡೆದವರಿಗೆ 28 ರೂ. ಕೊಡುತ್ತಿತ್ತು. ಅಲ್ಲಿಗೆ 150 ಗ್ರಾಂ ತೂಕದ 3 ಇಡ್ಲಿಗೆ 32 ರೂ. ವೆಚ್ಚವಾಗುತ್ತಿತ್ತು. ಸರ್ಕಾರಕ್ಕೆ ಹೊರೆಯಾದರೂ, ಗ್ರಾಹಕರಿಗೆ 5 ರೂ.ಗೆ 3 ಇಡ್ಲಿ ತಿಂದ ತೃಪ್ತಿ ಸಿಗುತ್ತಿತ್ತು.
ಅಲ್ಲದೆ ಇಂದಿರಾ ಕ್ಯಾಂಟೀನ್ʻಗೆ ಸರ್ಕಾರದ ಜಾಗ, ನೀರು, ಕರೆಂಟ್ ವೆಚ್ಚ ಪ್ರತ್ಯೇಕವಾಗಿರುತ್ತಿತ್ತು. ಆದರೆ.. ಅದೇ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಿದೆ.
ಒಂದು ವರ್ಷದಿಂದ ಬಿಲ್ ಪಾವತಿಯಾಗಿಲ್ಲ :
ಬಿಲ್ ಪಾವತಿ ಮಾಡದ ಕಾರಣ ಗುತ್ತಿಗೆ ಪಡೆದ ಸಂಸ್ಥೆ ಆಹಾರ ಪೂರೈಕೆ ಮಾಡದ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದ 11 ಇಂದಿರಾ ಕ್ಯಾಂಟೀನ್‌ಗಳು ಬುಧವಾರದಿಂದ ಸ್ಥಗಿತಗೊಂಡಿವೆ.
ಈ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಕೆಯ ಗುತ್ತಿಗೆಯನ್ನು ಶೆಫ್ ಟಾಕ್ ಸಂಸ್ಥೆ ಪಡೆದುಕೊಂಡಿದೆ. ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್ ಗಳಿಗೆ ಪೂರೈಕೆ ಮಾಡಿದ ಬಿಲ್ ಪಾವತಿ ಮಾಡಿಲ್ಲವೆಂದು ಬುಧವಾರದಿಂದ ಆಹಾರ ಪೂರೈಕೆಯನ್ನು ಏಕಾಏಕಿ ಸ್ಥಗಿತಗೊಳಿದೆ. ಸುಮಾರು 47 ಕೋಟಿ ರು. ಬಿಲ್ ಬಾಕಿ ಇದ್ದು, ಹಣ ಬಿಡುಗಡೆ ಮಾಡುವಂತೆ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದರೂ ಹಣ ಬಿಡುಗಡೆ ಮಾಡಿಲ್ಲ ಎಂಬ ಕಾರಣಕ್ಕೆ ಆಹಾರ ಪೂರೈಕೆ ನಿಲ್ಲಿಸಿದೆ. ಹಲವು ದಿನಗಳ ಹಿಂದೆಯೇ ಈ 11 ಇಂದಿರಾ ಕ್ಯಾಂಟೀನ್ ನಲ್ಲಿ ರಾತ್ರಿ ಊಟವನ್ನು ಸ್ಥಗಿತಗೊಳಿಸಲಾಗಿತ್ತು. ಬುಧವಾರದಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಗುತ್ತಿಗೆ ಒಪ್ಪಂದದಲ್ಲಿ ಇಂದಿರಾ ಕ್ಯಾಂಟೀನ್ ಗಳ ನೀರಿನ ಬಿಲ್ ಮತ್ತು ವಿದ್ಯುತ್ ಬಿಲ್ ಅನ್ನು ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರೇ ಪಾವತಿ ಮಾಡಬೇಕು. ಆದರೆ, ಗುತ್ತಿಗೆ ಪಡೆದಿರುವ ಶೆಫ್ ಟಾಕ್ ಸಂಸ್ಥೆ ಬಿಲ್ ಪಾವತಿ ಮಾಡಿಲ್ಲ. ಬಿಲ್ ಪಾವತಿ ಮಾಡುವಂತೆ ಬಿಬಿಎಂಪಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದೇ ನೆಪ ಹೇಳಿ ಏಕಾಏಕಿ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ನಿಲ್ಲಿಸಲಾಗಿದೆ ಎಂದು ಬಿಬಿಎಂಪಿಯ ಮೂಲಗಳು ಮಾಹಿತಿ ನೀಡಿವೆ.
ಶೆಫ್‌ಟಾಕ್ ಸಂಸ್ಥೆ ಆಹಾರ ಪೂರೈಕೆ ನಿಲ್ಲಿಸುವ ಇಂದಿರಾ ಕ್ಯಾಂಟೀನ್ ಗಳಿಗೆ ಇತರೆ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳುವ ಮುಖ್ಯ ಆಯುಕ್ತರೊಂದಿಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.
ಸ್ಥಗಿತಗೊಂಡಗೊಂಡ ಕ್ಯಾಂಟೀನ್‌ಗಳು
ಬಸವನಗುಡಿ, ಬೈರಸಂದ್ರ, ಪದ್ಮನಾಭನಗರ, ವಿವಿಪುರ, ಸಿದ್ದಾಪುರ, ಹೊಂಬೇಗೌಡ ನಗರ, ಜಯನಗರ, ವಿದ್ಯಾಪೀಠ, ಈಜಿಪುರ, ಆಡುಗೋಡಿ ವಾರ್ಡ್‌ನ ಇಂದಿರಾ ಕ್ಯಾಂಟೀನ್ ಗಳು ಬುಧವಾರದಿಂದ ಆಹಾರ ಪೂರೈಕೆ ಇಲ್ಲದೇ ಬಂದ್ ಆಗಿವೆ.
ರಾಜ್ಯದ ಹಲವೆಡೆಯೂ ಇಂದಿರಾ ಕ್ಯಾಂಟೀನ್ ಬಂದ್ :
ಇಂದಿರಾ ಕ್ಯಾಂಟೀನ್‌ಗೆ ಸಿಕ್ಕ ಯಶಸ್ಸಿನ ಹಿನ್ನೆಲೆಯಲಿ ರಾಜ್ಯದ ಹಲವು ಕಡೆ ಇಂದಿರಾ ಕ್ಯಾಂಟೀನ್ ಆರಂಭ ಮಾಡಲಾಗಿತ್ತು. ಆದರೆ, ಅಲ್ಲಿಯೂ ಕೂಡಾ ಸುಮಾರು ಐದಾರು ತಿಂಗಳಿಂದ ಕೆಲಸಗಾರರಿಗೆ ಸಂಬಳ ಕೊಟ್ಟಿಲ್ಲ. ಪ್ರತಿ ಜಿಲ್ಲೆಯ ಪ್ರಮುಖ ನಗರಗಳ ಲಿಸ್ಟ್ ತೆಗೆದುಕೊಂಡರೆ ಸರಾಸರಿ 30 ರಿಂದ 50 ಕೆಲಸಗಾರರು ಸಿಗುತ್ತಾರೆ. ಆದರೆ ಅವರಿಗೆ ಐದಾರು ತಿಂಗಳಿಂದ ಸಂಬಳ ಬಾರದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗುತ್ತಿದೆ.



