ಒಂದು ಹಾಡು ಏಕಕಾಲಕ್ಕೆ ಭಕ್ತಿ ಗೀತೆಯೂ ಆಗಬಹುದು. ಪ್ರೇಮಗೀತೆಯೂ ಆಗಬಹುದು. ನಾಯಕಿಯೊಬ್ಬಳು ರಾಮನ ಹೆಸರಲ್ಲಿ ಮಾಡಿಕೊಳ್ಳುವ ಪ್ರೇಮದ ನಿವೇದನೆ ಶ್ರೀರಾಮನ ಭಕ್ತಿಗೀತೆಯೂ ಹೌದು. ನಾಯಕಿಯ ವಿರಹ ಗೀತೆಯೂ ಹೌದು. ಇದು ಸಾಧ್ಯವಾಗುವುದು ಹಿಂದೂ ಧರ್ಮದ ದೇವರ ಭಕ್ತಿ ಗೀತೆಗಳಲ್ಲಿ ಮಾತ್ರವೇ ಎನ್ನುವುದು ನಿಜವೂ ಹೌದು. ಅಂತಹ ಅಣ್ಣಾವ್ರ ಚಿತ್ರದ ಹಾಡೊಂದು ಪ್ರಧಾನಿ ನರೇಂದ್ರ ಮೋದಿಯವರನ್ನೂ ತಲುಪಿದ ವಿಶೇಷ ಕಥೆ ಇದು.
ಇದು ಡಾ.ರಾಜ್-ಕಲ್ಪನಾ-ಮಂಜುಳ ಅಭಿನಯದ ಎರಡು ಕನಸು ಚಿತ್ರದ ಹಾಡು. ಪ್ರೀತಿಸಿದವಳ ಜೊತೆ ಮದುವೆಯಾಗಲು ಸಾಧ್ಯವಾಗದೆ, ಇನ್ನೊಬ್ಬಳನ್ನು ಮದುವೆಯಾಗುವ ನಾಯಕ. ಮದುವೆಯಾದರೂ ಪ್ರೀತಿಸಿದವಳ ನೆನಪಲ್ಲೇ ಇರುತ್ತಾನೆ. ತಾನೂ ಬೇಯುತ್ತಾ.. ಮದುವೆಯಾದ ಪತ್ನಿಯನ್ನೂ ನೋವಿನಲ್ಲೇ ಇಟ್ಟಿರುವ ನಾಯಕ ಹೆಂಡತಿಯನ್ನು ಪ್ರೀತಿಸುವುದಿಲ್ಲ. ಪತಿಯ ಹತ್ತಿರವಾಗಲು ಬರುವ ನಾಯಕಿ ಪತಿಯ ಪ್ರೀತಿಗಾಗಿ ಹಂಬಲಿಸಿ ಹಾಡುವ ಗೀತೆಯೇ
ಪೂಜಿಸಲೆಂದೇ ಹೂಗಳ ತಂದೆ..
ಸಾಹಿತ್ಯ ಚಿ.ಉದಯಶಂಕರ್. ಹಾಡಿದ್ದವರು ಗಾಯಕಿ ಎಸ್.ಜಾನಕಿ.
ಹಾಡಿನ ಸನ್ನಿವೇಶ : ಮದುವೆಯಾಗಿದ್ದರೂ ಹೆಂಡತಿಯನ್ನು ಪ್ರೀತಿಸದ ಗಂಡ. ಹಾಗಂತ ದುಷ್ಟನಲ್ಲ. ಒಳ್ಳೆಯವನು. ಆದರೆ ಹೆಂಡತಿಯನ್ನು ಮಾತನಾಡಿಸುವುದಿಲ್ಲ. ಪ್ರೀತಿಸುವುದಿಲ್ಲ. ಹೆಂಡತಿಯತ್ತ ಕಣ್ಣೆತ್ತಿಯೂ ನೋಡದವನು. ಆತನನ್ನು ರಾಮನಿಗೆ ಹೋಲಿಸಿ ಹಾಡುತ್ತಾಳೆ ನಾಯಕಿ. ಪೂಜಿಸಲೆಂದೇ ಹೂಗಳ ತಂದೆ.. ದರುಶನ ಕೋರಿ ನಾ ನಿಂದೇ.. ಎಂದು ಹಾಡುತ್ತಾಳೆ. ಮುಂಜಾನೆ ಪೂಜೆ ಮಾಡುವಾಗ ಹಾಡುವ ಆ ಹಾಡು ಅತ್ತ ಭಕ್ತಿಗೀತೆಯೂ ಹೌದು. ಪ್ರೇಮಗೀತೆಯೂ ಹೌದು. ಈಗ ಈ ಹಾಡು ಮೋದಿಯವರ ಪ್ರೀತಿಗೆ ಪಾತ್ರವಾಗಿದೆ.
ಈ ಹಾಡನ್ನು ಕನ್ನಡದವರೇ ಆದ ಶಿವಶ್ರೀ ಸ್ಕಂದಪ್ರಸಾದ್ ಹಾಡಿದ್ದರು. ತಮ್ಮದೇ ಶೈಲಿಯಲ್ಲಿ ಹಾಡಿ ಯೂಟ್ಯೂಬ್ʻಗೆ ಅಪ್ʻಲೋಡ್ ಮಾಡಿದ್ದರು. ಆ ಹಾಡು ಪ್ರಧಾನಿ ನರೇಂದ್ರ ಮೋದಿಯವರಿಗೂ ತಲುಪಿದೆ. ಶಿವಶ್ರೀ ಅವರು ಕಲಾವಿದರ ಕುಟುಂಬದಿಂದಲೇ ಬಂದವರು. ಶಿವಶ್ರೀ ಅವರ ತಂದೆ ಖ್ಯಾತ ಮೃದಂಗ ವಾದಕ ವಿದ್ವಾನ್ ಸೀರ್ಕಾಜಿ ಜೆ. ಸ್ಕಂದಪ್ರಸಾದ್. ಶಿವಶ್ರೀ ಅವರು ಎ.ಎಸ್. ಮುರಳಿ ಮತ್ತು ಆಚಾರ್ಯ ಚೂಡಾಮಣಿ ಅವರಲ್ಲಿ ಸಂಗೀತ ಕಲಿತಿದ್ದಾರೆ. ರೋಜಾ ಕಣ್ಣನ್ ಅವರಿಂದ ಭರತನಾಟ್ಯ ತರಬೇತಿ ಪಡೆದಿದ್ದಾರೆ. ಶಿವಶ್ರೀ ಅವರ ತಾತ ಖ್ಯಾತ ಸಂಗೀತಕಾರರಾಗಿದ್ದವರು. ಶಿವಶ್ರೀ ಬಯೋ-ಇಂಜಿನಿಯರಿಂಗ್ ಪದವೀಧರೆಯೂ ಹೌದು. ಮದ್ರಾಸ್ ಯುನಿವರ್ಸಿಟಿಯಲಿಲ ಭರತನಾಟ್ಯದಲ್ಲಿ ಮಾಸ್ಟರ್ ಡಿಗ್ರಿ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಡಿಪ್ಲೊಮಾ ಮಾಡಿದ್ದಾರೆ.
ಮೋದಿಯವರು ಈ ಹಾಡನ್ನು ಮೆಚ್ಚಿಕೊಂಡಿದ್ದು, ಗಾಯಕಿ ಶಿವಶ್ರೀ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದೇಶಾದ್ಯಂತ ಶ್ರೀರಾಮೋತ್ಸವ ನಡೆಯುತ್ತಿದ್ದು, ಕನ್ನಡದವರೇ ಆದ ಅರುಣ್ ಯೋಗಿರಾಜ್ ಅವರು ಕೆತ್ತಿದ ಶಿಲ್ಪ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ.
ಇಂತಹ ಪ್ರೇಮಗೀತೆಗಳು ಭಕ್ತಿ ಗೀತೆಗಳೂ ಆಗಿರುವ ನೂರಾರು ಉದಾಹರಣೆ ಕನ್ನಡದಲ್ಲಿದೆ. ಕನ್ನಡದಲ್ಲಷ್ಟೇ ಅಲ್ಲ, ವಿವಿಧ ಭಾಷೆಗಳ ಸಿನಿಮಾಗಳಲ್ಲಿಯೂ ಇಂತಹ ಕಥೆಗಳಿವೆ. ಹಾಡುಗಳಿವೆ. ಸನ್ನಿವೇಶಗಳಿವೆ.



