ಶಕ್ತಿ (Shakthi Scheme) ಯೋಜನೆ ಶೀಘ್ರದಲ್ಲಿಯೇ ನಿಲ್ಲಲಿದೆ. ಫ್ರೀ ಬಸ್ KSRTC Free Bus ಯೋಜನೆಯನ್ನು ಕೆಲವೇ ದಿನಗಳಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ವಾಪಸ್ ತೆಗೆದುಕೊಳ್ಳಲಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಸಾರಿಗೆ ಸಂಕಷ್ಟಕ್ಕೆ ಸಿಲುಕಿದೆ. ಸಂಬಳ ಕೊಡುವುದಕ್ಕೂ ದುಡ್ಡಿಲ್ಲ. ಹೀಗಾಗಿಯೇ ಯೋಜನೆ ಜಾರಿಯಾದ ಕೆಲವೇ ತಿಂಗಳಲ್ಲಿ ಯೋಜನೆ ನಿಲ್ಲುತ್ತಿದೆ..
ಇಂಥಾದ್ದೊಂದು ಸುದ್ದಿ ರಾಜ್ಯದೆಲ್ಲೆಡೆ ಹರಿದಾಡುತ್ತಿದೆ. ಪ್ರಮುಖ ಮಾಧ್ಯಮಗಳಲ್ಲಿ ಇಂತಹ ಸುದ್ದಿ ಇಲ್ಲವಾದರೂ, ಸೋಷಿಯಲ್ ಮೀಡಿಯಾ, ವಾಟ್ಸಪ್‍ಗಳಲ್ಲಿ (Whats app) ಹರಿದಾಡುತ್ತಲೇ ಇದೆ. ಇವುಗಳೆಲ್ಲ ಗಾಸಿಪ್, ಸುಳ್ಳು ಸುದ್ದಿ, ವದಂತಿಗಳು ಎಂದು ಹಲವರಿಗೆ ಗೊತ್ತಿದ್ದರೂ, ಇದೀಗ ಅಧಿಕೃತವಾಗಿದೆ. ಏಕೆಂದರೆ ಕೆಎಸ್‍ಆರ್‍ಟಿಸಿ (KSRTC), ಸಿಎಂ ಸಿದ್ದರಾಮಯ್ಯ (CM Siddaraiah) ಹಾಗೂ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಅವರ ಕಡೆಯಿಂದಲೇ ಸ್ಪಷ್ಟನೆ ಬಂದಿದೆ. ಶಕ್ತಿ ಯೋಜನೆ ಸಾವಿರ ಕೋಟಿ ಕ್ಲಬ್ ಸೇರುತ್ತಿರುವ ಸಮಯದಲ್ಲಿಯೇ ಹಬ್ಬಿದ ವದಂತಿಗಳಿಗೆ ಸರ್ಕಾರ ತೆರೆ ಎಳೆದಿದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ
ಮೊದಲಿಗೆ ಗ್ಯಾರಂಟಿ ಯೋಜನೆಗಳು (Gurantee Schemes) ಜಾರಿಯಾಗುವುದಿಲ್ಲ ಎಂದು ಅಪಪ್ರಚಾರ ಮಾಡಿದರು. ಈಗ ಆ ಯೋಜನೆಗಳು ಹೆಚ್ಚು ಕಾಲ ಚಾಲನೆಯಲ್ಲಿ ಇರುವುದಿಲ್ಲ ಎಂದು ಅಪಪ್ರಚಾರ ಆರಂಭಿಸಿದ್ದಾರೆ. ಇಂತಹ ಸುಳ್ಳು ಸುದ್ದಿಗೆ (Fake News) ಕಿವಿಗೊಡಬೇಡಿ. ಯಾವುದೇ ಕಾರಣಕ್ಕೂ ಶಕ್ತಿ ಯೋಜನೆ ಸ್ಥಗಿತಗೊಳ್ಳುವುದಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರ. ಇದಕ್ಕೆ ನಾನೇ ಗ್ಯಾರಂಟಿ.
ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಶಕ್ತಿ ಯೋಜನೆಯನ್ನು (Shakthi Scheme) ನಿಲ್ಲಿಸಲಾಗುತ್ತದೆ ಎಂದು ಒಂದು ರಾಜಕೀಯ ಪಕ್ಷ ಸುಳ್ಳು ಹರಡುತ್ತಿದೆ. ಯೋಜನೆಯ ಯಶಸ್ಸನ್ನು ಸಹಿಸಿಕೊಳ್ಳಲಾಗದ ಪ್ರತಿಪಕ್ಷದವರು ಈ ರೀತಿ ಮಾಡುತ್ತಿದ್ದಾರೆ. ಈ ಐದು ವರ್ಷ ಮಾತ್ರವಲ್ಲ ಇನ್ನೂ ಹತ್ತು ವರ್ಷ ಶಕ್ತಿ ಯೋಜನೆ ಮುಂದುವರೆಯಲಿದೆ. ಯೋಜನೆಯ ಲಾಭ ಪಡೆಯಲು ಸದ್ಯಕ್ಕೆ ಯಾರೂ ಪಾಸ್ ಪಡೆಯುವ ಅಗತ್ಯವೂ ಇಲ್ಲ. ಮುಂದೆಯೂ (2028) ನಾವೇ ಅಧಿಕಾರಕ್ಕೆ ಬರುತ್ತೇವೆ. ಹೀಗಾಗಿ ಮುಂದಿನ 10 ವರ್ಷ ಮಹಿಳೆಯರು ರಾಜ್ಯಾದ್ಯಂತ ಸಾರಿಗೆ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಇದರಲ್ಲಿ ಯಾವುದೇ ಗೊಂದಲಗಳು ಬೇಕಿಲ್ಲ.
ಕೆಎಸ್‍ಆರ್‍ಟಿಸಿ (KSRTC)
ಸಾರ್ವಜನಿಕರು ಶಕ್ತಿ ಯೋಜನೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಗೊಂದಲಕಾರಿ ಸಂದೇಶಗಳನ್ನು ನಂಬಬಾರದು. ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯು ಎಂದಿನಂತೆಯೇ ಮುಂದುವರೆಯಲಿದೆ.
ಹೀಗೆ ಶಕ್ತಿ ಯೋಜನೆಗೆ ಸಂಬಂದಪಟ್ಟ ಇಲಾಖೆ (KSRTC), ಜವಾಬ್ದಾರಿ ಹೊತ್ತಿರುವ ಸಚಿವ ಹಾಗೂ ಖುದ್ದು ಮುಖ್ಯಮಂತ್ರಿಗಳೇ ಈ ಬಗ್ಗೆ ಹೇಳಿದ್ದಾರೆ. ಇನ್ನು ಗೊಂದಲ ಇಟ್ಟುಕೊಳ್ಳುವ ಅಗತ್ಯ ಇಲ್ಲ. ವದಂತಿಗಳಿಗೆ ಕಿವಿಗೊಡುವ ಅಗತ್ಯವೂ ಇಲ್ಲ. ಈ ನಡುವೆ ಶಕ್ತಿ ಯೋಜನೆ ಭರ್ಜರಿಯಾಗಿ ನಡೆಯುತ್ತಿದೆ. ಶಕ್ತಿ ಯೋಜನೆ ಅಡಿಯಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರ ಸಂಖ್ಯೆ ಸರಾಸರಿ 60 ಲಕ್ಷ ತಲುಪಿದೆ. ಅದರ ಜತೆಗೆ ನಿತ್ಯ ಟಿಕೆಟ್ ಮೌಲ್ಯ 16 ಕೋಟಿ ರು. ದಾಟುತ್ತಿದೆ. ಅದರಂತೆ ಆಗಸ್ಟ್ 14ರವರೆಗೆ ಒಟ್ಟು 39.36 ಕೋಟಿ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆ ಲಾಭ ಪಡೆದಿದ್ದು, ಅವರು ಪ್ರಯಾಣಿಸಿದ ಟಿಕೆಟ್ ಮೌಲ್ಯ 916.18 ಕೋಟಿ ರು.ಗಳಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಾವಿರ ಕೋಟಿ ಕ್ಲಬ್ ಸೇರಲಿದೆ ಶಕ್ತಿ ಸ್ಕೀಂ.



