ʻಕಿಂದರ ಜೋಗಿʼ ಸಿನಿಮಾ ನೆನಪಾದರೆ ಆಶ್ಚರ್ಯ ಪಡಬೇಕಿಲ್ಲ. ಆದರೆ ಇದು ಸಿನಿಮಾ ದೇವರ ಕಥೆ ಅಲ್ಲ. ಸಿನಿಮಾದಲ್ಲಿ ಇಬ್ಬರು ನಾಯಕರ ಪ್ರತಿಷ್ಠೆಗೆ ಆಂಜನೇಯ ದೇವರು ಬೀದಿಗೆ ಬೀಳುತ್ತಾನೆ. ಇಲ್ಲಿ ಜಾತಿ ಜಗಳಕ್ಕೆ ದೇವರು ಬೀದಿಗೆ ಬಿದ್ದಿಲ್ಲ.. ದೇವರಿಗೆ ಬೀಗ ಬಿದ್ದಿದೆ. ಇಲ್ಲಿ ಜಗಳ ಆಗಿರುವುದು ಬಸವಣ್ಣನವರ ಫೋಟೋ ವಿಚಾರಕ್ಕೆ. ಜಗಳ ಕೊನೆಗೆ ಅಂಬೇಡ್ಕರ್ ವರ್ಸಸ್ ಬಸವಣ್ಣನವರಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಹಗಿನವಾಳು ಗ್ರಾಮದಲ್ಲಿ ಗ್ರಾಮದ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ್ದರು. ಬಾವುಟ ಹಾಕಿದ್ದು ಯಾಕೆ ಎಂದು ಒಂದು ಜಾತಿಯವರು ಪ್ರಶ್ನೆ ಮಾಡಿದರು. ಹಾಕಿದರೆ ಏನ್ ತಪ್ಪು ಎಂದು ಇನ್ನೊಂದು ಜಾತಿಯವರು ಜಗಳ ಮಾಡಿದರು. ಬಾವುಟ ತೆಗೆಯುವ ವಿಚಾರದಲ್ಲಿ ಎರಡು ಸಮುದಾಯದ ನಡುವೆ ಉಂಟಾದ ಮಾತಿನ ಚಕಮಕಿಗೆ ಇಡೀ ಜಾತ್ರೆಗೇ ಬ್ರೇಕ್ ಬಿದ್ದಿದೆ. ವಿದ್ಯುಕ್ತ ಚಾಲನೆ ದೊರೆತು ಅದ್ದೂರಿಯಿಂದ ಆರಂಭವಾದ ರಥೋತ್ಸವ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ.
ಹಗಿನವಾಳು ಗ್ರಾಮದ ಪಟ್ಟದ ಅಮ್ಮ ರಾಣಿ ದೇವತೆಯ ಜಾತ್ರಾ ಮಹೋತ್ಸವಕ್ಕೆ ಸಂಭ್ರಮದಿಂದ ಚಾಲನೆ ಸಿಕ್ಕಿತ್ತು. ಮೂರು ದಿನಗಳ ಕಾಲ ನಡೆಯುವ ಜಾತ್ರೆಗಾಗಿ ಸಾವಿರಾರು ಜನ ಸೇರಿದ್ದರು. ದೇವಾಲಯದ ಸಮೀಪವಿರುವ ವೃತ್ತದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಭಾವಚಿತ್ರವಿರುವ ಬಾವುಟ ಅಳವಡಿಸಲಾಗಿತ್ತು. ಜಾತ್ರೆ ತೇರು ಇದೇ ವೃತ್ತದಿಂದ ಸಾಗಬೇಕಿತ್ತು. ದೇವಾಲಯದ ಸಮೀಪವಿರುವ ವೃತ್ತದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಫೋಟೋ ಹಾಕಲಾಗಿತ್ತು. ಅದನ್ನು ತೆಗೆದು ಅಂಬೇಡ್ಕರ್ ಫೋಟೋ ಅಳವಡಿಸಲು ಮುಂದಾದಾಗ ಪರಿಸ್ಥಿತಿ ಜಗಳಕ್ಕೆ ಟರ್ನ್ ಆಯ್ತು. ಇದೇ ವೇಳೆ ದೇವಾಲಯಕ್ಕೆ ಬೀಗ ಜಡಿದ ಒಂದು ಸಮುದಾಯ ಪೂಜಾ ಕೈಂಕರ್ಯಗಳಿಗೂ ಬ್ರೇಕ್ ಹಾಕಿತು. ಎರಡು ಸಮುದಾಯಗಳು ಯಾವುದೇ ತೀರ್ಮಾನಕ್ಕೆ ಬರದೆ ಪಟ್ಟು ಹಿಡಿದು ಕುಳಿತ ಕಾರಣ ಇದೀಗ ರಥ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ. ಸಧ್ಯ ಪೊಲೀಸರು ಸ್ಥಳಕ್ಕೆ ಬಂದು ಎರಡು ಸಮುದಾಯದ ಮುಖಂಡರ ಮನ ಒಲಿಕೆಗೆ ಯತ್ನಿಸಿದರಾದರೂ ಪಟ್ಟು ಸಡಿಲಿಸಿಲ್ಲ.
ಗ್ರಾಮದಲ್ಲಿ ಜಾತ್ರೆ ಹಬ್ಬ ಬಂದರೇ ಇಡೀ ಗ್ರಾಮಕ್ಕೆ ಗ್ರಾಮವೇ ಒಂದಾಗಿ ಜಾತ್ರೆಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಜಾತ್ರೆಯಲ್ಲಿ ಒಂದೊಂದು ಸಣ್ಣ ತಪ್ಪುಗಳು ನಡೆದರೆ ಅದನ್ನು ಸರಿ ಮಾಡಿಕೊಂಡು ಹೋಗುತ್ತಾರೆ. ಏಕೆಂದರೆ ಊರು ದೊಡ್ಡದು. ನಾವಲ್ಲ ಎನ್ನುವ ನಂಬಿಕೆ. ಆ ನಂಬಿಕೆ ಇಲ್ಲಿ ಊರ್ಜಿತವಾಗಿಲ್ಲ. ದೇವರು ಬೀದಿಗೆ ಬಿದ್ದಿದ್ದಾನೆ. ಜಾತಿ ದೊಡ್ಡದು. ದೇವರಲ್ಲ.



