ಆತ ಹೊಸ ಹುಡುಗ. ಹೊಸ ನಟ. ಇದೇ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಚಿತ್ರದ ಮೂವರು ಹೀರೋಗಳಲ್ಲಿ ಆತನೂ ಒಬ್ಬ. ಹೆಸರು ಅಜಿತ್ ಬೊಪ್ಪನಳ್ಳಿ (Ajith Boppanalli). ಇಂತಹ ಬೊಪ್ಪನಳ್ಳಿಗೆ ವೇದಿಕೆ ಮೇಲೆಯೇ ಕಪಾಳಕ್ಕೆ ಬಾರಿಸಿದ್ದಾರೆ ಡೈರೆಕ್ಟರ್ ಪಿ.ಹೆಚ್.ವಿಶ್ವನಾಥ್. ಪಿ.ಹೆಚ್.ವಿಶ್ವನಾಥ್ (P.H. Vishwanath) . ಚಿತ್ರರಂಗದ ಹಿರಿಯ ನಿರ್ದೇಶಕ. ಪುಟ್ಟಣ್ಣ ಕಣಗಾಲ್ (Puttanna Kanagal) ಜೊತೆ ಕೆಲಸ ಮಾಡಿದ್ದವರು. ಪುಟ್ಟಣ್ಣನವರೂ ಮುಖಮೂತಿ ನೋಡದೆ ಕಪಾಳಕ್ಕೆ ಹೊಡೀತಿದ್ರಂತೆ. ಈ ಬಾರಿ ಪುಟ್ಟಣ್ಣ ಶಿಷ್ಯನ ಸರದಿ. ಇಷ್ಟಕ್ಕೂ ಆಗಿದ್ದೇನು..
ಇತ್ತೀಚೆಗೆ ವಿಶ್ವನಾಥ್ ನಿರ್ದೇಶನದ ಆಡೇ ನಮ್ ಗಾಡು (Ade nam God) ಚಿತ್ರದ ಟೀಸರ್ ರಿಲೀಸ್ ಆಯ್ತು. ಆ ಟೀಸರ್ ರಿಲೀಸ್ ಕಾರ್ಯಕ್ರಮದ ನಿರೂಪಣೆಗೆ ಸ್ವತಃ ಹೀರೋಗಳಲ್ಲಿ ಒಬ್ಬರಾದ ಅಜಿತ್ ಬೊಪ್ಪನಳ್ಳಿ ಇದ್ದರು. ನಿರೂಪಣೆ ಮಾಡುತ್ತಾ ಎಲ್ಲರನ್ನು ವೇದಿಕೆಗೆ ಕರೆಯುವಾಗ ನಿರ್ದೇಶಕರನ್ನೂ ವೇದಿಕೆಗೆ ಕರೆದರು. ಆದರೆ.. ಇವರು ಸೀನಿಯರ್ ಡೈರೆಕ್ಟರ್, ಅಂತಹ ಖ್ಯಾತಿ ಪಡೆದವರು..ಇಂತಹ ಖ್ಯಾತಿ ಪಡೆದವರು ಎಂದೆಲ್ಲ ಹೇಳಿ.. ಸರ್, ನಿಮ್ಮ ಹೆಸರೂ..???? ಎಂದುಬಿಟ್ಟರು. ಡೈರೆಕ್ಟರ್ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.
ಗಾಬರಿಗೊಂಡವರಿಗೆ ಕೊನೆಗೆ ಉತ್ತರ ಕೊಟ್ಟಿದ್ದು ನಿರ್ದೇಶಕ ವಿಶ್ವನಾಥ್. ಇದು ಹುಡುಗರ ತರಲೆ. ಇದು ತರಲೆಯ ಭಾಗವೇ ಆಗಿತ್ತು. ಅಷ್ಟೇ.. ಅದರ ಹೊರತಾಗಿ ಆ ಹುಡುಗನಿಗೆ ನನ್ನ ಮೇಲೆ ಗೌರವವೂ ಇದೆ. ಪ್ರೀತಿಯೂ ಇದೆ. ಇದೆಲ್ಲ ಹುಡುಗರಾಡಿದ ನಾಟಕ ಎಂದು ನಕ್ಕರು. ವೇದಿಕೆ ಕೆಳಗಿದ್ದವರು ನಿಟ್ಟುಸಿರು ಬಿಟ್ಟರು. ಅಂದಹಾಗೆ ಇದು ಪ್ರಚಾರದ ತಂತ್ರವಷ್ಟೇ.
ಅಂದಹಾಗೆ ಆಡೇ ನಮ್ ಗಾಡ್ (Ade nam God) ಚಿತ್ರವಿದ್ಯಲ್ಲ, ಒಂದು ಆಡು ದೇವರಾಗುವ, ಆ ಆಡು ಸೃಷ್ಟಿಸುವ ತರಲೆ, ತಲ್ಲಣಗಳನ್ನೆಲ್ಲ ಹಾಸ್ಯವನ್ನಾಗಿ ಸಿನಿಮಾ ಮಾಡಿದ್ದಾರೆ. ಇದು ಹಿರಿಯ ನಿರ್ದೇಶಕ ಪಿ.ಹೆಚ್.ವಿಶ್ವನಾಥ್ ನಿರ್ದೇಶನದ ಸಿನಿಮಾ.
ಪಿ.ಹೆಚ್. ವಿಶ್ವನಾಥ್ ಕನ್ನಡದಲ್ಲಿ ಪಂಚಮವೇದ ವಿಶ್ವನಾಥ್ ಎಂದೇ ಚಿರಪರಿಚಿತರು. ಪಂಚಮವೇದ, ಶ್ರೀಗಂಧ, ಅರಗಿಣಿ, ಅರುಣೋದಯ, ರಂಗೋಲಿ, ಅಂಡಮಾನ್, ಮುಂಜಾನೆ ಮಂಜು, ಮುಸುಕು ಸಿನಿಮಾಗಳ ಮೂಲಕ ಖ್ಯಾತಿ ಪಡೆದವರು. ಇದೀಗ ಆಡೇ ನಮ್ ಗಾಡ್ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿಶ್ವನಾಥ್ ಅವರ ಚಿತ್ರದಲ್ಲಿ ಕೆಲವರನ್ನು ಬಿಟ್ಟರೆ ಎಲ್ಲರೂ ಹೊಸಬರೇ.
ಈ ಸಿನಿಮಾದಲ್ಲಿ ರಾಮ ರಾಮ ರೇ ಸಿನಿಮಾ ಖ್ಯಾತಿಯ ನಟರಾಜ್ (Rama Rama re Nataraj) , ಮಂಜುನಾಥ್ ಜಂಬೆ (Manjunath Jambe) , ಅಜಿತ್ ಬೊಪ್ಪನಹಳ್ಳಿ (Ajith Boppanalli), ಪಿಂಕಿ ಎಲ್ಲಿ ಚಿತ್ರದ ಅನೂಪ್ ಶೂನ್ಯ (Pinki ellil, Anoop Shunya), ಸಾರಿಕ ರಾವ್, ಬಿ ಸುರೇಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಬಿ.ಬಿ.ಆರ್ ಫಿಲ್ಮಂಸ್ ಹಾಗೂ ಎವೆರೆಸ್ಟ್ ಇಂಡಿಯಾ ಎಂಟರ್ ಟೈನರ್ಸ್ ಬ್ಯಾನರ್ ನಡಿ ಪ್ರೊ.ಬಿ.ಬಸವರಾಜ್ ಹಾಗೂ ರೇಣುಕಾ ಬಸವರಾಜ್ ಚೊಚ್ಚಲ ಬಾರಿಗೆ ನಿರ್ಮಾಣ ಮಾಡಿದ್ದಾರೆ.
ಜನಗಳು ಯಾವುದಾದರೂ ಒಂದು ವಿಷಯಕ್ಕೆ ಬೇಗ ಪ್ರಭಾವಕ್ಕೆ ಒಳಗಾಗುತ್ತಾರೆ. ನಮ್ಮಲ್ಲಿ ಹಂದಿಯನ್ನು ವರಾಹ ಎಂದು ಪೂಜೆ ಮಾಡುತ್ತೇವೆ. ಹಾವು, ಕಪ್ಪೆ ಮೊಸಳೆ ಎಲ್ಲವನ್ನೂ ಪೂಜೆ ಮಾಡುತ್ತವೆ. ಈ ಬಗ್ಗೆ ಯೋಚನೆ ಮಾಡುತ್ತಾ ನಾನು ಕಂಡ ಒಬ್ಬ ವ್ಯಕ್ತಿ ಮತ್ತು ನನಗೇ ಆದ ಅನುಭವಗಳ ಆಧಾರದ ಮೇಲೆ ಆಡು ಕೂಡ ಒಂದು ದೇವರು ಆಗಬಹುದು ಅನ್ನಿಸಿ ಅದನ್ನೇ ಚಿತ್ರವಾಗಿಸಿದ್ದೇವೆ. ಮೂಡನಂಬಿಕೆ ನಂಬಿಕೊಂಡು ಹೋಗುವ ಜನರ ಹಿಂದೆ ಇಡೀ ಸಿನಿಮಾವಿದೆ. ನಾಲ್ಕು ಜನ ಯುವಕರ ಜೀವನದಲ್ಲಿ ಒಂದು ಆಡು ಬಂದಾಗ ಏನಾಗುತ್ತದೆ ಎನ್ನುವುದು ಚಿತ್ರದ ತಿರುಳು ಎಂದು ಹೇಳಿದ್ದಾರೆ ಪಿ.ಹೆಚ್.ವಿಶ್ವನಾಥ್.



