ದರ್ಶನ್ ಫ್ಯಾನ್ಸ್ ಅಶ್ಲೀಲ ಪೋಸ್ಟು, ಮೆಸೇಜುಗಳ ವಿರುದ್ಧ ರಮ್ಯಾ ಸಮರ ಸಾರಿದ್ದನ್ನು ಚಿತ್ರರಂಗ ಸಂಭ್ರಮಿಸುತ್ತಿದೆ. ಚಿತ್ರರಂಗದ ಒಳಗೆ ಮಾತನಾಡಿಸಿದರೆ.. ಆ ಸಂಭ್ರಮ ಎದ್ದು ಕಾಣುತ್ತದೆ. ರಮ್ಯಾ ಹೇಳಿದ್ದು ಸತ್ಯ, ಚಿತ್ರರಂಗದವರನ್ನು ದರ್ಶನ್ ಅಭಿಮಾನಿಗಳು ಹೆದರುವಂತೆ ಮಾಡಿದ್ದಾರೆ ಎನ್ನುವುದು ನಿಜ.
ರೇಪ್ ಮಾಡ್ತೀನಿ, ಎತ್ತಾಕ್ಕೊಂಡ್ ಹೋಗ್ತೀನಿ.. ಎಂಬ ಡ್ಯಾಷ್ ಡ್ಯಾಷ್ ಭಾಷೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬರೆಯುವವರ ವಿರುದ್ಧ ಬ್ರೇಕ್ ಹಾಕದೇ ಹೋದರೆ ಕಷ್ಟ ಎಂದಿರುವ ರಮ್ಯಾ, ಪಾಠ ಕಲಿಸಿಯೇ ತೀರುವ ಪಣ ತೊಟ್ಟಿದ್ದಾರೆ. ಆದರೆ.. ದರ್ಶನ್ ಅವರ ಫ್ಯಾನ್ಸ್ ಪೊಲೀಸ್ ದೂರಿಗೂ ಕೇರ್ ಮಾಡಿಲ್ಲ. ಅಶ್ಲೀಲ ಮೆಸೇಜ್ ನಿಂತೇ ಇಲ್ಲ. ಈ ಮಧ್ಯೆ ಶಿವರಾಜ್ ಕುಮಾರ್ ರಮ್ಯಾ ಪರ ಪೋಸ್ಟ್ ಹಾಕಿ, ವಿಡಿಯೋ ಮಾಡಿ ಬೆಂಬಲ ಘೋಷಿಸಿದ್ದಾರೆ. ಆದರೆ.. ಅದೇ ಬೂಮ್ ರಾಂಗ್ ಕೂಡಾ ಆಗಿದೆ.
ಶ್ರೀದೇವಿ ಬೈರಪ್ಪ ಯಾರು ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಶ್ರೀದೇವಿ ಬೈರಪ್ಪ ಶಿವರಾಜ್ ಕುಮಾರ್ ಅವರ ಸೊಸೆ. ಶಿವಣ್ಣನ ಪ್ರೀತಿಯ ತಮ್ಮ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್ ಪತ್ನಿ. ಯುವ ರಾಜಕುಮಾರ್ ಅವರು ಇನ್ನೊಬ್ಬ ನಟಿಯ ಜೊತೆ ಅಫೇರ್ ಇಟ್ಕೊಂಡಿದ್ದಾರೆ ಎಂದು ಆರೋಪಿಸಿ, ಯುವ ರಾಜ್ ಕುಮಾರ್ ಅವರ ವಿರುದ್ಧ ಡಿವೋರ್ಸ್ ಅಪ್ಲಿಕೇಷನ್ ಹಾಕಿದ್ದಾರೆ. ಆ ನಟಿ ನ್ಯಾಯಾಲಯದಿಂದ ಇಂಜಂಕ್ಷನ್ ಆರ್ಡರ್ ತಂದಿದ್ದಾರೆ. ಹೀಗಾಗಿ ಮಾಧ್ಯಮಗಳು ಆಕೆಯ ಹೆಸರನ್ನು ಪ್ರಸಾರ ಮಾಡುವಂತಿಲ್ಲ. ಆ ಪ್ರಕರಣ ಈಗಲೂ ನ್ಯಾಯಾಲಯದಲ್ಲಿದೆ.
ಶಿವಣ್ಣ ʻʻರಮ್ಯಾ ಅವರ ವಿರುದ್ಧ ಬಳಸಿರುವ ಪದಗಳು ಖ೦ಡನೀಯ. ಯಾವ ಮಹಿಳೆಯ ವಿರುದ್ಧವೂ ಆ ರೀತಿ ಮಾತನಾಡುವುದು ಸರಿಯಲ್ಲ. ಅದನ್ನು ನಾವು ಸಹಿಸಬಾರದು. ಮಹಿಳೆಯರನ್ನು ತಾಯಿಯಾಗಿ, ಅಕ್ಕನಾಗಿ, ಮಗಳಾಗಿ, ಮಡದಿಯಾಗಿ ಮತ್ತು ಮೊಟ್ಟಮೊದಲು ಒಬ್ಬ ವ್ಯಕ್ತಿಯಾಗಿ ಗೌರವಿಸುವುದು ತುಂಬಾ ಮುಖ್ಯ. ಸೋಶಿಯಲ್ ಮೀಡಿಯಾ ತುಂಬಾ ಬಲಿಷ್ಠವಾದ ಅಸ್ತ. ಅದನ್ನು ತಮ್ಮ ಏಳಿಗೆಗಾಗಿ ಬಳಸಬೇಕೇ ಹೊರತು, ಅವಾಚ್ಯ ಶಬ್ದಗಳಿಂದ ನಿ೦ದಿಸಿ, ದ್ವೇಷ-ಅಸೂಯೆಯನ್ನು ಬಿತ್ತಲು ಬಳಸಬಾರದುʼʼ ಎಂದು ಪೋಸ್ಟ್ ಹಾಕಿ, ರಮ್ಯಾ ಮಾಡಿದ್ದು ಸರಿ ಇದೆ. ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಕೊಟ್ಟಿದ್ದಾರೆ.
ಅತ್ತ ವಿನಯ್ ರಾಜ್ ಕುಮಾರ್ ಅವರೂ ಕೂಡಾ ‘ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು’ ಎಂದು ಪೋಸ್ಟ್ ಮಾಡಿದ್ದರು.
ಈ ಎರಡೂ ಪೋಸ್ಟುಗಳಿಗೆ ಶ್ರೀದೇವಿ ಭೈರಪ್ಪ ತಿರುಗೇಟು ಕೊಟ್ಟಿದ್ದಾರೆ. ‘ಮಾಧ್ಯಮಗಳಲ್ಲಿ ಮಹಿಳೆಯರನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೇ ಸುಮ್ಮನೇ ಇದ್ರಲ್ಲ, ಆವಾಗ ನಿದ್ರೆ ಮಾಡ್ತಾ ಇದ್ರಾ ಎಲ್ಲ?’ ಎಂದು ಪೋಸ್ಟ್ ಹಾಕಿ ‘ಬೂಟಾಟಿಕೆ ವ್ಯಕ್ತಿಗಳು’ ಮತ್ತು ‘ಡ್ರಾಮಾ’ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ.
ಈಗ ರಮ್ಯಾ ಪರ ಬೆಂಬಲ ಘೋಷಿಸಿರುವ ಶಿವಣ್ಣ, ಗೀತಾ.. ಅವರು ಶ್ರೀದೇವಿ ಭೈರಪ್ಪಗೆ ಅತ್ತೆ, ಮಾವ ಆಗಬೇಕು. ವಿನಯ್ ರಾಜ್ ಕುಮಾರ್ ಅವರು ಭಾವ ಆಗಬೇಕು. ಯುವ ರಾಜ್ ಕುಮಾರ್ ಅವರಿಗೆ ವಿನಯ್ ಅವರು ಅಣ್ಣ. ಹೀಗಾಗಿಯೇ..
ಶ್ರೀದೇವಿ ಬೈರಪ್ಪ ಈ ಪೋಸ್ಟ್ ಹಾಕುತ್ತಿದ್ದಂತೆಯೇ ‘ಶಿವರಾಜ್ಕುಮಾರ್ ಅವರು ಶ್ರೀದೇವಿಗೆ ಈಗಲಾದರೂ ನ್ಯಾಯ ಕೊಡಿಸುತ್ತಾರಾ? ಮನೆಯಿಂದಲೇ ನ್ಯಾಯ ಶುರುವಾಗಬೇಕು’ ಎಂದು ಪೋಸ್ಟ್ ಹಾಕಿ..ದರ್ಶನ್ ಫ್ಯಾನ್ಸ್ ಲೇವಡಿ ಮಾಡ್ತಿದ್ದಾರೆ.
ಅತ್ತ ದರ್ಶನ್ ಫ್ಯಾನ್ಸ್ ತಪ್ಪು, ದರ್ಶನ್ ಫ್ಯಾನ್ಸ್‌ಗೆ ಕಾಣುತ್ತಿಲ್ಲ. ಅವರ ಪ್ರಕಾರ.. ರೇಣುಕಾಸ್ವಾಮಿ, ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದು ಮಾತ್ರ ಅಪರಾಧ. ದರ್ಶನ್ ಫ್ಯಾನ್ಸ್, ದರ್ಶನ್ ಪತ್ನಿ ಮತ್ತು ಗೆಳತಿಯರಿಗೆ ಹಾಗೆಲ್ಲ ಕೆಟ್ಟ ಮೆಸೇಜ್ ಮಾಡಬಾರದು. ಆದರೆ.. ಅವರನ್ನು ಬಿಟ್ಟು ಮಿಕ್ಕವರಿಗೆ ಯಾವ ರೀತಿ ಬೇಕಾದರೂ ಬೈಬಹುದು. ರೇಪ್ ಮಾಡ್ತೇನೆ ಅನ್ನಬಹುದು. ʻ..ʼ ಮಾಡ್ತೇನೆ ಎನ್ನಬಹುದು. ಎರಡೂ ಕೂಡಾ ಬೂಟಾಟಿಕೆಯ ಪರಮಾವಧಿಯೇ.



