95 ವರ್ಷ. ಶಾಮನೂರು ಶಿವಶಂಕರಪ್ಪ ಅವರೀಗ ಇಡೀ ಭಾರತದಲ್ಲೇ ಸೀನಿಯರ್ ಲೀಡರ್. ರಾಜಕಾರಣಿ. ದೇವೇಗೌಡರಿಗಿಂತಲೂ ಹಿರಿಯರಾಗಿರುವ ನಾಯಕ. ದಾವಣಗೆರೆಯಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ 95ನೇ ಜನ್ಮದಿನದ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯನವರೇ ಮುಖ್ಯ ಅತಿಥಿ.
ಶಿವಶಂಕರಪ್ಪನವರು ಆರೋಗ್ಯವಾಗಿದ್ದು, ಶತಾಯುಷಿಯಾಗಲಿದ್ದಾರೆ. ಅವರು ಬಯಸಿದರೆ ಪಕ್ಷವು ಮತ್ತೆ ಟಿಕೆಟ್ ನೀಡಲು ಸಿದ್ಧವಿದೆ ಎಂದಿದ್ದಾರೆ ಸಿದ್ಧರಾಮಯ್ಯ. ಇವರ ಉತ್ಸಾಹ, ಕ್ರಿಯಾಶೀಲತೆ ನೋಡಿದರೆ ಮತ್ತೆ ಚುನಾವಣೆಗೆ ನಿಲ್ಲಬಹುದು, ಅವರು ಉತ್ಸಾಹ ತೋರಿದರೆ ಪಕ್ಷ ಟಿಕೆಟ್ ಕೊಡಲು ಸಿದ್ಧ ಎಂದಿರುವ ಸಿದ್ದರಾಮಯ್ಯ, ಶಾಮನೂರು ಅವರಿಗೆ ಶುಭ ಕೋರಿದ್ಧಾರೆ.
ವಿಷಯವೇನೆಂದರೆ ಶಾಮನೂರು ಶಿವಶಂಕರಪ್ಪ ಅವರು ಈ 95ರ ವಯಸ್ಸಿನಲ್ಲೂ ಆಕ್ಟಿವ್ ಇದ್ದಾರೆ. ನಡೆದಾಡುವುದಕ್ಕೆ ಯಾರದ್ದಾದರೂ ಸಹಾಯ ಬೇಕು. ನಿಜ. ಆದರೆ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಮಾತುಗಳು ಇವತ್ತಿಗೂ ನಿಯಂತ್ರಣದಲ್ಲೇ ಇರುತ್ತವೆ. ಅವರು ಈಗ ಹಿಂದಿನಂತೆ ಬಿರುಸಾಗಿ ಓಡಾಡುತ್ತಾ ಸಂಘಟನೆ ಮಾಡುವುದಕ್ಕೆ ಆಗುವುದಿಲ್ಲ. ಅವರೀಗ ಲೀಡರ್. ಒಂದು ಕಣ್ಸನ್ನೆಯಲ್ಲೇ ರಾಜಕೀಯ ನಾಯಕರ ಹಣೆಬರಹ ಬದಲಿಸುವ ಶಕ್ತಿಯೂ ಇದೆ. ರಾತ್ರಿಯಾದರೆ ಈಗಲೂ ಲಿಮಿಟ್ಟಿನಲ್ಲೇ ಔಷಧಿ ತೆಗೆದುಕೊಳ್ಳುವ ಶಾಮನೂರು, ಬಹಿರಂಗವಾಗಿ ಶಾಖಾಹಾರಿ.
ವಯಸ್ಸು 95. ರಾಜಕೀಯಕ್ಕೆ ಕೇವಲ 35..!
95ನೇ ವಸಂತಕ್ಕೆ ಕಾಲಿಟ್ಟ ಶಾಮನೂರು ಶಿವಶಂಕರಪ್ಪ, ರಾಜಕೀಯಕ್ಕೆ ಪ್ರವೇಶಿಸಿ ಬರೋಬ್ಬರಿ 35 ವರ್ಷ. ಅರೆ.. ಇಷ್ಟೇನಾ ಎನ್ನುವಂತಿಲ್ಲ. ರಾಜಕೀಯ, ಶಾಮನೂರು ಅವರ ಪ್ರಥಮ ಆಯ್ಕೆ ಆಗಿರಲಿಲ್ಲ. ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶ ಮಾಡಿದ್ದು, ಬಹುತೇಕ ನಾಯಕರು ವಾನಪ್ರಸ್ಥಕ್ಕೆ ತೆರಳುವಾಗ.. ಇದು ಇತಿಹಾಸ. 1994ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದಾಗ ಅವರ ವಯಸ್ಸು 64. 1994ರಲ್ಲಿ ದಾವಣಗೆರೆ ನಗರಸಭೆ ಅಧ್ಯಕ್ಷರಾದರು. ಬಳಿಕ ಅದೇ ವರ್ಷ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಶಾಸಕರೂ ಆದರು.
2008ರಲ್ಲಿ ಕ್ಷೇತ್ರ ವಿಂಗಡಣೆಯಾದಾಗ 2008, 2013 ಹಾಗೂ 2018, 2023 ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಶಾಸಕರಾಗಿ ಒಟ್ಟು ಆರು ಬಾರಿ ಆಯ್ಕೆಯಾಗಿದ್ದಾರೆ. ಇನ್ನು 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲೇ ತೋಟಗಾರಿಕೆ ಸಚಿವರಾಗಿ ಕೆಲಸ ಮಾಡಿದ್ದ ಶಾಮನೂರು, ದಾವಣಗೆರೆಯಲ್ಲಿ ಪಕ್ಷವನ್ನೂ ಮೀರಿ ಬೆಳೆದವರು.
ದಾವಣಗೆರೆ ಜಿಲ್ಲೆಯಲ್ಲಿ ಬಾಪೂಜಿ ವಿದ್ಯಾಸಂಸ್ಥೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದವರು. ದಾವಣಗೆರೆ ಕ್ಷೇತ್ರದಲ್ಲಿ ವೀರಶೈವ ಪಂಚಮಸಾಲಿ ಸಮಾಜದ ಹಾಗೂ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಸಂಬಂಧಿಯೂ ಆಗಿದ್ದ ಯಜಮಾನ್ ಮೋತಿ ವೀರಣ್ಣ ಅವರು ಈ ಕ್ಷೇತ್ರದಿಂದ ಶಾಸಕರಾಗಿದ್ದರು. ಬಳಿಕ ಈ ಕ್ಷೇತ್ರ ಶಾಮನೂರು ಶಿವಶಂಕರಪ್ಪ ಅವರ ಭದ್ರಕೋಟೆಯಾಗಿದ್ದು ಚರಿತ್ರೆ. 1994, 2004, 2008, 2013 ಹಾಗೂ 2018, 2023 ಹೀಗೆ.. ಆರು ಸಲ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೇ 1997ರಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ.
1997ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ 1999ರಲ್ಲಿ ಮತ್ತೆ ಲೋಕಸಭಾ ಚುನಾನಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಅಷ್ಟೇ. ಈಗ ಅವರ ಮಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ. ಸೊಸೆಯೂ ಶಾಸಕಿ.



