ಅಯೋಧ್ಯೆಯ ರಾಮಮಂದಿರದಲ್ಲಿ ಜ. 22ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಆಗಲಿದೆ. ಅಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ವಿಗ್ರಹಕ್ಕೆ, ಮೈಸೂರಿನ ಶಿಲ್ಪಿಯಾದ ಅರುಣ್ ಯೋಗಿರಾಜ್ ಅವರು ಕೆತ್ತಿದ್ದ ಬಾಲರಾಮನ ಮೂರ್ತಿಯೇ ಆಯ್ಕೆಯಾಗಿದೆ. ರಾಜಸ್ಥಾನದ ಓರ್ವ ಶಿಲ್ಪಿ ಹಾಗೂ ಕರ್ನಾಟಕದವರೇ ಆದ ಗಣೇಶ್ ಭಟ್ ಎಂಬ ಮತ್ತೊಬ್ಬ ಶಿಲ್ಪಿ ಸಹ ಶ್ರೀರಾಮನ ಮೂರ್ತಿಯನ್ನು ಕೆತ್ತಿದ್ದರು. ಇವರಲ್ಲಿ ಯೋಗಿರಾಜ್ ಅವರ ವಿಗ್ರಹವನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಆದರೆ ಆಯ್ಕೆ ಅಂತಿಮವಾಗಿಲ್ಲ.
ರಾಜ್ಯ ಬಿಜೆಪಿಯ ಮಾಜಿ ಸಚಿವರು, ಸಂಸದರೆಲ್ಲ ಯೋಗಿರಾಜ್ ಅವರನ್ನು ಹೊಗಳಿದ್ದರು. ಇದು ಕರ್ನಾಟಕದ ಹೆಮ್ಮೆ ಎಂದು ಹೇಳಿಕೊಂಡಿದ್ದರು. ಮಾಜಿ ಸಚಿವರಾದ ಸುರೇಶ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಂಸದ ಪ್ರತಾಪ್ ಸಿಂಹ.. ಮೊದಲಾದವರೆಲ್ಲ ಸುದ್ದಿಗೆ ಇನ್ನಷ್ಟು ಅಧಿಕೃತ ಮುದ್ರೆ ಒತ್ತುವ ಕೆಲಸ ಮಾಡಿದ್ದರು. ಆದರೆ ಈ ರೀತಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಈ ಮಾತು ಹೇಳಿರುವುದು ಸ್ವತಃ ಪೇಜಾವರ ಶ್ರೀಗಳು. ಪೇಜಾವರ ಶ್ರೀಗಳು ಟ್ರಸ್ಟ್ʻನ ಸದಸ್ಯರೂ ಹೌದು.
ಉಡುಪಿಯ ಕೃಷ್ಣ ಮಠದಲ್ಲಿ ಮಾತನಾಡಿರುವ ಶ್ರೀಗಳು ʻʻಪ್ರತಿಷ್ಠೆಗೆ ಮೊದಲು ಜ.17ರಂದು ಬಾಲರಾಮನ ವಿಗ್ರಹವನ್ನು ಮೆರವಣಿಗೆಯಲ್ಲಿ ಸರಯೂ ನದಿಗೆ ತೆಗೆದುಕೊಂಡ ಹೋಗಿ ಜಲಾಭಿಷೇಕ ಮಾಡುತ್ತೇವೆ. ಈಗಾಗಲೇ ತಯಾರಾಗಿರುವ 3 ವಿಗ್ರಹಗಳಲ್ಲಿ ಯಾವ ವಿಗ್ರಹ ಎನ್ನುವುದು ಅಂದು ಬಹಿರಂಗವಾಗುತ್ತದೆ. ಟ್ರಸ್ಟ್ ನ ವಿಶ್ವಸ್ಥರೆಲ್ಲರೂ ವಿಗ್ರಹಗಳನ್ನು ನೋಡಿ ನಮ್ಮ ಆಯ್ಕೆಯನ್ನು ತಿಳಿಸಿದ್ದೇವೆ. ಮೂರೂ ಮೂರ್ತಿಗಳೂ ಬಹಳ ಉತ್ತಮವಾಗಿದೆ. ಎರಡು ಕರಿಕಲ್ಲಿನಲ್ಲಿ, ಒಂದು ಅಮೃತ ಶಿಲೆಯಲ್ಲಿ ಕೆತ್ತಲಾಗಿವೆ. ಅಂತಿಮ ತೀರ್ಮಾನ ಇನ್ನೂ ಆಗಬೇಕಾಗಿದೆ ಎಂದಿದ್ದಾರೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ .
ರಾಮಲಲ್ಲಾನ ವಿಗ್ರಹ ಎರಡು ತಿಂಗಳ ಹಿಂದೆಯೇ ಸಿದ್ಧವಾಗಿದೆ. ಈಗ ವೈರಲ್ ಆಗುತ್ತಿರುವ ರಾಮ, ಸೀತೆ, ಲಕ್ಷ್ಮಣ, ಆಂಜನೇಯ ಎಲ್ಲರೂ ಇರುವ ವಿಗ್ರಹ, ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ರಾಮನದ್ದಲ್ಲ. ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಲಿರುವುದು ಬಾಲಕ ರಾಮನ ವಿಗ್ರಹವೇ ಹೊರತು, ಸೀತಾರಾಮ ಲಕ್ಷ್ಮಣ ಆಂಜನೇಯ ಇರುವ ವಿಗ್ರಹವಲ್ಲ. ಯೋಗಿರಾಜ್ ಹೆಸರಿನಲ್ಲಿ ವೈರಲ್ ಆಗುತ್ತಿರೋ ವಿಗ್ರಹ, ಬೇರೊಂದು ದೇವಸ್ಥಾನದಲ್ಲಿ ಅವರೇ ಕೆತ್ತಿದ ವಿಗ್ರಹ.
ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳವಾಗಿರುವುದರಿಂದ ಅಲ್ಲಿ ಪ್ರತಿಷ್ಠಾಪನೆಯಾಗುವ ರಾಮನ ವಿಗ್ರಹವು ಬಾಲರಾಮನದ ಆಕೃತಿಯಲ್ಲೇ ಇರಬೇಕು. ಈಗ ಅಲ್ಲಿ ಪೂಜಿಸಲ್ಪಡುತ್ತಿರುವ ವಿಗ್ರಹವೂ ರಾಮಲಲ್ಲಾನದ್ದೇ. ರಾಮಲಲ್ಲಾ ಎಂದರೆ ಬಾಲಕ ರಾಮ ಎಂದರ್ಥ. 51 ಇಂಚು ಉದ್ದ, 3 ಅಡಿ ಅಗಲವಿರುವ ಕಲ್ಲಿನ ವಿಗ್ರಹ. ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಬಜ್ಜೇಗೌಡನಪುರ ಎಂಬಲ್ಲಿ ದೊರೆತ ಕಪ್ಪುಶಿಲೆಯಲ್ಲೇ ಕೆತ್ತಲಾಗಿದೆ. ಶ್ರೀರಾಮ ಎಂದರೆ ಗಾಂಭೀರ್ಯವಲ್ಲ, ಬದಲಿಗೆ ಈ ರಾಮಲಲ್ಲಾನ ವಿಗ್ರಹದಲ್ಲಿ ತುಂಟತನ ಇರಬೇಕು, ಮುಗ್ಧತೆ, ಮುಗುಳ್ನಗೆ ಇರಬೇಕು. ಹಾಗೆಂದು ಬರೀ ಅಷ್ಟನ್ನೇ ಮಾಡುವಂತಿಲ್ಲ. ಏಕೆಂದರೆ ಶ್ರೀರಾಮನ ವಿಗ್ರಹ ಎಂದ ಮೇಲೆ ಭಕ್ತಿ ಭಾವ ಸ್ಫುರಿಸಿ ಬರಬೇಕು. ಹೀಗಾಗಿಯೇ.. ರಾಮ ಲಲ್ಲಾ ವಿಗ್ರಹ ಕೆತ್ತುವುದು ಎಂದರೆ ಒಂದು ಸವಾಲೇ ಸರಿ.
ಇಷ್ಟಕ್ಕೂ ಯೋಗಿರಾಜ್ ಅವರ ವಿಗ್ರಹವೇ ಅಂತಿಮವಾದರೆ ಸಂಭ್ರಮಿಸೋಣ. ಅಷ್ಟೊಂದು ಅರ್ಜೆಂಟ್ ಯಾಕೆ, ಅಕಸ್ಮಾತ್ ಆಯ್ಕೆಯಾಗಲೇ ಇಲ್ಲವೆನ್ನಿ, ಆಗಲೂ ಅಷ್ಟೆ, ರಾಮನ ಸೇವೆ ಮಾಡುವ ಪುಟ್ಟ ಅವಕಾಶ ನಮ್ಮ ಯೋಗಿರಾಜ್ ಅವರಿಗೂ ಸಿಕ್ಕಿತು ಎಂದು ಖುಷಿ ಪಡೋಣ. ಅಲ್ವೇ..



