ಯುಗಪುರುಷ ಸಿನಿಮಾದಲ್ಲೊಂದು ಹಾಡಿದೆ. ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು… ಆ ಹಾಡಿನಲ್ಲೊಂದು ಸಾಲು ಬರುತ್ತದೆ. ಪ್ರೇಮ ಒಂದು ವರದಾನ.. ಅದರ ಹಿಂದೆ ಬಲಿದಾನ.. ಎಂಬುದೇ ತಿಳಿಯದ ಹುಡುಗನು.. ಹುಡುಗಿಯ ಮದುವೆ ಆದನು.. ತನ್ನ ಕಣ್ಣ ನೋಟದಲಿ ಕಡಲಿಗಿಂತ ಆಳದಲಿ ಪ್ರೇಮವ ಕೊಲ್ಲುವ ಚೂರಿಯ ಕಾಣದೆ ಇಟ್ಟಳು ಮರೆಯಲಿ.. ಎಂಬ ಸಾಲದು. ಆ ಸಾಲು ಅಕ್ಷರಶಃ ಸತ್ಯವಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ. ಕೊಳ್ಳೆಗಾಲದಲ್ಲಿ..
ಘಟನೆ ಏನಾಯ್ತು ಎಂದರೆ..
ರವೀಶ್ ಮತ್ತು ನಯನಾ ಎಂಬುವವರ ವಿವಾಹ ನಿಶ್ಚಯವಾಗಿತ್ತು. ಆದರೆ, ಆರತಕ್ಷತೆ ಕಾರ್ಯಕ್ರಮಕ್ಕೆ ತೆರಳುವ ವೇಳೆ ವರ ರವೀಶ್ ಅವರನ್ನು ಅಡ್ಡಗಟ್ಟಿದ ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿರುವ ರವೀಶ್ ಸದ್ಯ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ರವೀಶ್ ಅವರಿಗೆ ಕಳೆದ 15 ದಿನಗಳಿಂದಲೇ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದವು.ಯನಾಳನ್ನು ಮದುವೆಯಾಗಬೇಡ, ಮದುವೆಯಾದರೆ ಸುಮ್ಮನೆ ಬಿಡುವುದಿಲ್ಲ ಎಂದು ಹೆದರಿಸುತ್ತಿದ್ದ. ಆದರೆ ಆಗ ಹೆದರದ ರವೀಶ್, ಚಾಕು ಬಿದ್ದ ಕೂಡಲೇ ಹೆದರಿದೆ.
ಮದುವೆಯಾಗುವ ಮೊದಲೇ ನನ್ನ ಪ್ರಾಣ ತೆಗೆಯಲು ಸಂಚು ರೂಪಿಸಲಾಗಿದೆ. ಮದುವೆಯಾದ ಮೇಲೆ ನಾನು ಸುಖವಾಗಿ ಬದುಕಲು ಸಾಧ್ಯವೇ ಇಲ್ಲ. ಇಂದು ಚೂರಿ ಇರಿದಿದ್ದಾರೆ, ನಾಳೆ ನನ್ನನ್ನು ಕೊಲೆ ಮಾಡಿದರೆ ಯಾರು ಹೊಣೆ? ನನ್ನ ಪ್ರಾಣ ನನಗೆ ಮುಖ್ಯ ಎಂದು ಅಳಲು ತೋಡಿಕೊಂಡಿದ್ದ ರವೀಶ್ ಎದುರು, ಹಾಗೆ ಮಾಡಬೇಡ ಎಂದು ಯುವತಿ ಕಣ್ಣೀರಿಟ್ಟಿದ್ದಳು. ಆದರೆ.. ಘಟನೆಯನ್ನು ಬೆನ್ನು ಹತ್ತಿದ್ದ ಪೊಲೀಸರಿಗೆ ಬೇರೆಯದೇ ಕಥೆ ಸಿಕ್ಕಿದೆ.
ಚಾಕು ಹಾಕಿಸಿದ ಯುವತಿಯೇ ಕಿಂಗ್ ಪಿನ್
ಇಲ್ಲಿ ಡ್ರಾಮಾ ಮಾಡಿದ್ದ ಮದುಮಗಳು ನಯನಾಳೇ ತನ್ನ ಪ್ರಿಯಕರ ದರ್ಶನ್‌ಗೆ ಐಡಿಯಾ ಕೊಟ್ಟಿದ್ದಳು. ದರ್ಶನ್ ತಮಟೆ ಹೊಡೆಯುವ ಕೆಲಸ ಮಾಡುತ್ತಿದ್ದ. ಹೀಗಾಗಿ ನಯನಾ, ತನ್ನ ಲವ್ ಸ್ಟೋರಿಯನ್ನು ಮನೆಯವರಿಗೆ ಹೇಳಿಕೊಳ್ಳೋಕೆ ಹೆದರಿದ್ದಳು.ಒಂದೆಡೆ ರವೀಶ್ ಜೊತೆ ‘ನಿನ್ನನ್ನೇ ಮದುವೆಯಾಗುತ್ತೇನೆ’ ಎಂದು ಪ್ರೀತಿಯ ನಾಟಕವಾಡುತ್ತಿದ್ದ ನಯನಾ, ಇನ್ನೊಂದೆಡೆ ಪ್ರಿಯತಮ ದರ್ಶನ್‌ಗೆ ರವೀಶ್ ಮೊಬೈಲ್ ಸಂಖ್ಯೆ ನೀಡಿ ಬೆದರಿಕೆ ಕರೆ ಹಾಗೂ ಮೆಸೇಜ್ ಹಾಕಿಸುತ್ತಿದ್ದಳು. ರವೀಶ್ ಈ ಬೆದರಿಕೆಗಳಿಗೆ ಸೊಪ್ಪು ಹಾಕಿರಲಿಲ್ಲ. ಇದರಿಂದ ಆಕ್ರೋಶಗೊಂಡ ನಯನಾ, ಹೇಗಾದರೂ ಮಾಡಿ ಮದುವೆ ನಿಲ್ಲಿಸಲು ಪ್ರಿಯತಮನ ಮೂಲಕ ಚೂರಿ ಇರಿಯುವ ಸಂಚು ರೂಪಿಸಿದ್ದಳು. ಚಾಕು ಹಾಕುವಂತೆ ಸಿಗ್ನಲ್ ಕೊಟ್ಟಿದ್ದಳು. ಇಲ್ಲಿ ಡ್ರಾಮಾ ಮಾಡುತ್ತಲೇ ಯನಾ ನಿರಂತರವಾಗಿ ತನ್ನ ಪ್ರಿಯತಮ ದರ್ಶನ್ ಜೊತೆ ಸಂಪರ್ಕದಲ್ಲಿದ್ದಳು ಎಂಬುದು ಕಾಲ್ ರೆಕಾರ್ಡ್‌ಗಳಿಂದ ಪತ್ತೆಯಾಗಿದೆ.
ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮದುವೆಯಾಗಿ ಸುಖವಾಗಿರಬೇಕಿದ್ದ ವಧು ಈಗ ಪ್ರಿಯತಮನ ಜೊತೆ ಜೈಲು ಪಾಲಾಗಿದ್ದಾಳೆ.



