ಪಕ್ಷದಲ್ಲಿ ಪ್ರಮುಖ ಹುದ್ದೆಗಳು ಅಂಗಡಿಯಲ್ಲಿ ಸಿಗುವುದಿಲ್ಲ. ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳೇನು ಸ್ಥಾನಮಾನ ಕೊಡಿಸುವುದಿಲ್ಲ. ನಮ್ಮ ಕೆಲಸ ನೋಡಿ ಪಕ್ಷದ ನಾಯಕರು ಹುದ್ದೆ ನೀಡುತ್ತಾರೆ. ನಾವು ಮಾಡುವ ಕೆಲಸ ಮತ್ತು ಶ್ರಮವನ್ನು ಪಕ್ಷದ ನಾಯಕರು ಗುರುತಿಸಿ ಸೂಕ್ತ ಹುದ್ದೆಗಳನ್ನು ನೀಡುತ್ತಾರೆ. ಅದನ್ನು ಬಿಟ್ಟು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದರೆ ಮಾಧ್ಯಮಗಳು ಸ್ಥಾನಮಾನ ಕೊಡಿಸುವುದಿಲ್ಲ. ಇದನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ.
ಸಾಮಾನ್ಯವಾಗಿ ಪಕ್ಷದ ವಿಚಾರಗಳ ಬಗ್ಗೆ ಹೊರಗೆ ಮಾತನಾಡದ ಡಿಕೆ ಶಿವಕುಮಾರ್ ಬಹಿರಂಗವಾಗಿ ಈ ಹೇಳಿಕೆ ಕೊಟ್ಟಾಗ ಅಚ್ಚರಿಯಾದವರೇ ಹೆಚ್ಚು. ಏಕೆಂದರೆ ಪಕ್ಷದೊಳಗೆ ನಡೆಯೋ ವಿಷಯವನ್ನ ನಿಮ್ಮ ಮುಂದೆ ಹೇಳೋಕಾಗಲ್ಲ ಎನ್ನುತ್ತಿದ್ದ ಡಿಕೆ ಶಿವಕುಮಾರ್, ಇದೇ ಮೊದಲ ಬಾರಿಗೆ ಓಪನ್ ಆಗಿಯೇ ಟಾಂಟ್ ಕೊಟ್ಟಿದ್ದಾರೆ.
ಇಷ್ಟು ದಿನ ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡೆವೆ ನಡೆಯುತ್ತಿದ್ದ ಕುರ್ಚಿ ಕದನ.. ಈಗ ಸತೀಶ್ ಜಾರಕಿಹೊಳಿ ಹಾಗೂ ಡಿಕೆ ಶಿವಕುಮಾರ್ ಕಡೆ ತಿರುಗಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲೇಬೇಕು ಎಂದು ಸಾಹುಕಾರ್ ಪಟ್ಟು ಹಿಡಿದು ಕುಳಿತಿದ್ದಾರೆ. ಇಷ್ಟು ದಿನ ಬೂದಿ ಮುಚ್ಚಿದ ಕೆಂಡದಂತೆ ಇದ್ದ ಇವರಿಬ್ಬರ ಜಗಳ ಈಗ ಬೀದಿಗೆ ಬಂದಂತಾಗಿದೆ. ಇಷ್ಟು ದಿನ ತಾನಾಯ್ತು ತಮ್ಮ ಪಾಡಾಯ್ತು ಅಂತ ಇದ್ದ ಸತೀಶ್ ಜಾರಕಿಹೊಳಿ ವೈಲೆಂಟ್ ಆಗಲು ಕಾರಣವೇ ಡಿಕೆ ಶಿವಕುಮಾರ್.. ಸಿಟಿ ರವಿ ಪ್ರಕರಣದಲ್ಲಿ ಡಿಕೆಶಿ, ಜಾರಕಿಹೊಳಿ ಮಾತನ್ನೂ ಮೀರಿ ಬೆಳಗಾವಿ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದರು. ಉಸ್ತುವಾರಿ ಸಚಿವರಾಗಿದ್ದ ಜಾರಕಿಹೊಳಿ ಕೆರಳಿ ನಿಂತರು. ಅಲ್ಲದೆ ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊಡುತ್ತಿರುವ ವಿಶೇಷ ಪ್ರಾಶಸ್ತ್ಯ ಹಾಗೂ ತಮ್ಮನ್ನು ದೂರಕ್ಕೆ ತಳ್ಳುವ ಪ್ರಯತ್ನ ಜಾರಕಿಹೊಳಿ ಅವರನ್ನು ಸಿಟ್ಟಿಗೆಬ್ಬಿಸಿದ್ದರೆ ಆಶ್ಚರ್ಯವಿಲ್ಲ. ಅದು ಎಷ್ಟರಮಟ್ಟಿಗೆ ಎಂದರೆ ಸುರ್ಜೇವಾಲ ಅವರ ಎಚ್ಚರಿಕೆಗೂ ಜಾರಕಿಹೊಳಿ ಡೋಂಟ್ ಕೇರ್ ಅಂತಿದ್ದಾರೆ.
ಆದರೆ ಸತೀಶ್ ಜಾರಕಿಹೊಳಿ, ತಮ್ಮ ಅಣ್ಣ ರಮೇಶ್ ಜಾರಕಿಹೊಳಿಯಂತಲ್ಲ. ಒಂದೊಂದ ಮಾತನ್ನೂ ಅಳೆದೂ ತೂಗಿ ಮಾತನಾಡ್ತಾರೆ. ಈಗ ಡಿಕೆಶಿ ಮಾತಿಗೂ ಅಷ್ಟೇ.. ಅವರು ಕೋಪದಲ್ಲಿದ್ದಾಗ ಆ ರೀತಿ ಹೇಳಿಕೆ ನೀಡಿರಬಹುದು. ಎರಡ್ಮೂರು ದಿನ ಬಿಟ್ಟರೆ ಎಲ್ಲ ಸರಿ ಆಗುತ್ತದೆ ಎಮದು ಉತ್ತರ ಕೊಟ್ಟಿದ್ದಾರೆ.
ಇನ್ನು ಬೆಳಗಾವಿ ಕಾಂಗ್ರೆಸ್ ಕಚೇರಿಯ ಕ್ರೆಡಿಟ್ಟನ್ನ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊಡುವ ಪ್ರಯತ್ನಕ್ಕೂ ಬ್ರೇಕ್ ಹಾಕಿದ್ದ ಸತೀಶ್ ಜಾರಕಿಹೊಳಿ ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ವೋಟು ತರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಪಾಪ್ಯುಲರ್ ಇರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ ಎಂದಿದ್ದಾರೆ. ಸಾಧ್ಯವಾದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಡೆದುಕೊಂಡು, ಬೆಳಗಾವಿ ರಾಜಕಾರಣದ ಮೇಲೆ ಬಿಗಿ ಹಿಡಿತ ಸಾಧಿಸುವುದು, ಲಕ್ಷ್ಮೀ ಹೆಬ್ಬಾಳ್ಕರ್ ಪ್ರಾಬಲ್ಯವನ್ನು ಬೆಳಗಾವಿಯಲ್ಲಿ ಹಾಗೂ ರಾಜ್ಯ ಕಾಂಗ್ರೆಸ್ಸಿನಲ್ಲಿ ಡಿಕೆಗೆ ಮೂಗುದಾರ ಹಾಕುವ ಉದ್ದೇಶ ಸತೀಶ್ ಜಾರಕಿಹೊಳಿಗೆ ಇದ್ದಂತಿದೆ.



