ಹಿಂದೆ ಚಿತ್ರಗಳಲ್ಲಿ ಬರುತ್ತಿದ್ದ ದೃಶ್ಯಗಳು ನಮ್ಮ ನಡುವೆ ನಡೆದ ಘಟನೆಗಳಂತೆಯೇ ಇದ್ದವು. ಆದರೆ ಆಗಿನ ಕಾಲದಲ್ಲಿ ರಾಜಕೀಯ ವಿಷಯಗಳಿಗೆ ಕೈಹಾಕುತ್ತಿರಲಿಲ್ಲ. ಅದನ್ನು ಬ್ರೇಕ್ ಮಾಡಿದ್ದು ಚಕ್ರವ್ಯೂಹ. ಆಗಿನ ಕಾಲಕ್ಕೆ ಬ್ಲಾಕ್ ಟಿಕೆಟ್ ಮಾರ್ತಿದ್ದ ಯುವಕ, ಪೊಲೀಸ್ ಆಗಿ, ರಾಜಕಾರಣಿಯಾಗಿ, ಸಿಎಂ ಆಗಿ.. ದುಷ್ಟರನ್ನೆಲ್ಲ ಕ್ಯಾಬಿನೆಟ್ ಹಾಲಿನಲ್ಲೇ ಕೊಲ್ಲುವ ದೃಶ್ಯ ಆಗಿನ ಕಾಲಕ್ಕೆ ಸಂಚಲನ ಹುಟ್ಟುಹಾಕಿತ್ತು. ಅದಾದ ನಂತರ ಹಲವು ಸಿನಿಮಾಗಳಲ್ಲಿ ರಾಜಕೀಯವನ್ನು ಕಾಮಿಡಿಯಾಗಿ, ಲೇವಡಿಯಾಗಿ, ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ. ಅಂಥದ್ದೇ ಒಂದು ದೃಶ್ಯ ಭೈರತಿ ರಣಗಲ್ ಚಿತ್ರದಲ್ಲೂ ಇದ್ದು ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ.
ಇಷ್ಟಕ್ಕೂ ಆ ದೃಶ್ಯ ಏನು ಎಂದರೆ.. ʻರಾಜಕಾರಣಿಗಳ ತುಲಾಭಾರʼದ ದೃಶ್ಯ..!
ಚಿತ್ರದ ನಾಯಕ ತನ್ನೆಲ್ಲಾ ವಹಿವಾಟುಗಳಿಗೆ ತೊಂದರೆ ಕೊಡುತ್ತಿದ್ದಾನೆಂದು, ಖಳನಾಯಕ ರಾಜಕಾರಣಿಯೊಬ್ಬನ ಮೊರೆ ಹೋಗುತ್ತಾನೆ. ದುಡ್ಡಿನ ಸುರಿಮಳೆ ಮಾಡ್ತಾನೆ. ಆ ರಾಜಕಾರಣಿ, ತನ್ನ ತಮ್ಮನನ್ನು ಮುಖ್ಯಮಂತ್ರಿ ಮಾಡಲು ಹೊರಟಿರುತ್ತಾನೆ. ಇವನು, ನಾಯಕನ ಎಲ್ಲಾ ವ್ಯಾಪಾರಗಳಿಗೆ ತೊಂದರೆ ಕೊಡುತ್ತಾನೆ. ಆಗ ಚಿತ್ರದ ನಾಯಕ ಇನ್ನೊಂದು ಗುಂಪಿನ ರಾಜಕಾರಣಿಯನ್ನು ಮನವೊಲಿಸಿ, ಅವನಿಗೂ ಅವನ ಕಡೆಯವರಿಗೂ ದುಡ್ಡಿನ ತುಲಾಭಾರ ಮಾಡಿಸುತ್ತಾನೆ. ಅಷ್ಟೇ ಅಲ್ಲದೇ ಸಿಎಂ ಅನ್ನಾಗಿಯೂ ಮಾಡುತ್ತಾನೆ. ಆ ಮೂಲಕ, ಸರ್ಕಾರದ ಮೇಲೆ ತನ್ನ ಛಾಪು ಮೂಡಿಸುತ್ತಾನೆ. ಭೈರತಿ ರಣಗಲ್ ಮೇಲಿನ ದುಡ್ಡಿನ ನಿಯತ್ತಿನಿಂದ, ಆತನ ಯಾವುದೇ ಕಾರುಬಾರುಗಳು ತೊಂದರೆಯಾಗದಂತೆ ಆ ಸರ್ಕಾರ ನೋಡಿಕೊಳ್ಳುತ್ತದೆ.
ಇದೀಗ ಕೇಳಿ ಬರುತ್ತಿರುವ 50 ಕೋಟಿ ಆಫರು, 100 ಕೋಟಿ ಆಫರುಗಳ ಸುದ್ದಿಗಳ ನಡುವೆಯೇ ಈ ಸಿನಿಮಾದ ದೃಶ್ಯವೂ ಪರ್ಫೆಕ್ಟ್ ಮ್ಯಾಚಿಂಗ್ ಆಗಿದೆ. ನಾಗಾಲೋಟದಲ್ಲಿ ಸಾಗುವ ಚಿತ್ರಕಥೆಗೆ ಇದೊಂದು ಬಿಲ್ಡಪ್ ಕೊಡುವ ಸನ್ನಿವೇಶ ಆಗಿರಬಹುದು. ಆದರೆ, ಈಗ ಏನು, ಸರ್ಕಾರವನ್ನು ಬೀಳಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಖುದ್ದು ಮುಖ್ಯಮಂತ್ರಿಗಳೇ ಆರೋಪವನ್ನು ಮಾಡುತ್ತಿದ್ದಾರೋ, ಅದಕ್ಕೂ, ಚಿತ್ರದ ಈ ದೃಶ್ಯಕ್ಕೂ ತಾಳೆಯಾಗುವಂತಿದೆ.
ಕರ್ನಾಟಕದ ಮೂರು ಉಪಚುನಾವಣೆಗೆ ಬಹಿರಂಗ ಪ್ರಚಾರ ಮುಗಿದ ಬೆನ್ನಲ್ಲೇ, ಸಿದ್ದರಾಮಯ್ಯನವರು ಐವತ್ತು ಕಾಂಗ್ರೆಸ್ ಶಾಸಕರಿಗೆ 50 ಕೋಟಿಯ ಆಮಿಷಯವನ್ನು ಒಡ್ಡಲಾಗಿದೆ ಎನ್ನುವ ಗಂಭೀರ ಆರೋಪವನ್ನು ಮಾಡಿದ್ದರು. ಆ ಮೂಲಕ 2,500 ಕೋಟಿ ವ್ಯವಹಾರದ ಬಗ್ಗೆ ಸಿಎಂ ಮಾತನಾಡಿದಂಗಾಗಿತ್ತು. ಸಿಎಂ ಅವರ ಹೇಳಿಕೆ, ವಿಪಕ್ಷಗಳಿಗೆ ಮುಜುಗರ ತರಲು ನೀಡಿದೆ ಹೇಳಿಕೆಯೋ, ಅದರಲ್ಲಿ ಅಸಲಿಯತ್ತು ಇದೆಯೋ ಎನ್ನುವುದು ಇಂದಲ್ಲಾ ನಾಳೆ ಗೊತ್ತಾಗುತ್ತದೆ. ಆದರೆ, ಭೈರತಿ ರಣಗಲ್ ಸಿನಿಮಾದ ದೃಶ್ಯವೊಂದು ನಮ್ಮ ಇಂದಿನ ರಾಜಕೀಯಕ್ಕೆ ಹಿಡಿದ ಕನ್ನಡಿಯಂತಿರುವಂತದ್ದು ಮಾತ್ರ ನಿಜ.
ಈ ಕಥೆ ಸೇಮ್ ಟು ಸೇಮ್ ಪ್ರಸಕ್ತ ರಾಜಕೀಯಕ್ಕೆ ಮ್ಯಾಚ್ ಆಗುವಂತಿದ್ದು, ದುಡ್ಡಿನ ತುಲಾಭಾರದಂತೆಯೇ, ಎಂಎಲ್‌ಎಗಳು ಮಾರಾಟಕ್ಕಿದ್ದಾರೆ ಎಂಬ ಸೂಚನೆ ಕೊಟ್ಟಿದೆ. ದೃಶ್ಯ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿರೋದು ಆ ಕಾರಣಕ್ಕೆ.



