ಇತ್ತೀಚೆಗೆ ದರ್ಶನ್ ಚಿತ್ರಗಳು ಯಶಸ್ಸಿನ ಕೊರತೆ ಎದುರಿಸುತ್ತಿದ್ದವು. ಆರಂಭದಲ್ಲಿ ಸದ್ದು ಮಾಡಿದರೂ ವಾರದ ಹೊತ್ತಿಗೆ ಅಬ್ಬರ ಮುಗಿದು ಹೋಗುತ್ತಿತ್ತು. ಆದರೆ ಈಗ ರಿಲೀಸ್ ಆಗಿರುವ ಕಾಟೇರ ಹಾಗಿಲ್ಲ. ಏಕೆಂದರೆ ಚಿತ್ರದಲ್ಲಿ ದರ್ಶನ್ ಅವರಿಗಿಂತ ಹೆಚ್ಚು ಕಥೆ ಇಷ್ಟವಾಗಿದೆ.
ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಹಬ್ಬ ಮಾಡುತ್ತಿದ್ದಾರೆ. ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ಧಾರೆ. ಏಕೆಂದರೆ ದರ್ಶನ್ ಚಿತ್ರದಲ್ಲಿ ಕೊಟ್ಟಿರೋದು ಡಬಲ್ ಧಮಾಕಾ. ಚಿತ್ರದಲ್ಲಿ ದರ್ಶನ್ ಎರಡು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಮಾಸ್ ಮತ್ತು ಕ್ಲಾಸ್ ಎರಡೂ ದರ್ಶನವಾಗುತ್ತೆ.
ಒನ್‌ಮ್ಯಾನ್ ಶೋನಂತೆ ಮಿಂಚಿರುವುದು ನಟ ದರ್ಶನ್. ಬಹಳ ದಿನಗಳ ನಂತರ ನಟನೆಗೆ ಹೆಚ್ಚು ಒತ್ತು ಇರುವ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ. ಕಥೆಯ ಗೇಜ್ ಅರಿತು, ತಮ್ಮ ಇಮೇಜ್ ಅನ್ನು ಪಕ್ಕಕ್ಕಿಟ್ಟು ಕಾಟೇರನ ಪಾತ್ರ ಮಾಡಿದ್ದಾರೆ. . ಕುಲುಮೆಯಲ್ಲಿ ಮಚ್ಚು ತಟ್ಟುವ, ಎದುರಾಳಿಗಳ ಎದುರು ತೊಡೆ ತಟ್ಟುವ, ಭಾವುಕ ಸನ್ನಿವೇಶಗಳಲ್ಲಿ ಕಣ್ಣೀರು ಹಾಕಿಸುವ ದರ್ಶನ್ ವ್ಹಾವ್ ಎನ್ನಿಸಿಬಿಡುತ್ತಾರೆ. ಪ್ರೇಕ್ಷಕರನ್ನು ಕಣ್ಣೀರಿಡುವಂತೆ ಮಾಡಿ ತುಂಬಾ ವರ್ಷಗಳೇ ಆಗಿದ್ದವು.
ಇನ್ನು ಮೊದಲ ಚಿತ್ರದಲ್ಲಿ ಆರಾಧನಾ ಕೂಡಾ ಮಿಂಚಿದ್ದಾರೆ. ಆರಾಧನಾ ಶಾನುಭೋಗನ ಮಗಳಾಗಿ, ದರ್ಶನ್ ಕತ್ತಿಗೆ ಮಚ್ಚಿಟ್ಟು ಬೆದರಿಸುವ ದೃಶ್ಯಗಳು ಪಸಂದಾಗಿವೆ.
ಕಾಟೇರ ನೋಡಿದವರು ಎಲ್ಲಕ್ಕಿಂತ ಹೆಚ್ಚು ಮಾತನಾಡುತ್ತಿರುವುದು ತರುಣ್ ಸುಧೀರ್ ನಿರ್ದೇಶನ, ಮಾಸ್ತಿಯ ಸಂಭಾಷಣೆ ಹಾಗೂ ಜಡೇಶ್ ಕೆ ಹಂಪಿಯವರ ಕಥೆಯ ಬಗ್ಗೆ. ಜಾತಿ ಹೆಸರಿನ ದೌರ್ಜನ್ಯ, ಮರ್ಯಾದೆಗೇಡು ಹತ್ಯೆ, ಬರ, ಜಮೀನ್ದಾರನ ದಬ್ಬಾಳಿಕೆ, ಉಳುವವನೇ ಭೂಮಿಯ ಒಡೆಯ.. ಎಲ್ಲವನ್ನೂ ಕಥೆಯೊಳಗೆ ತಂದಿರುವ ತರುಣ್, ಸ್ಟಾರ್ ಇಮೇಜ್ ಪಕ್ಕಕ್ಕಿಟ್ಟು ನಟಿಸಿರುವ ದರ್ಶನ್ ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ.
ರಾಕ್ ಲೈನ್ ವೆಂಕಟೇಶ್ ಗೆದ್ದಿದ್ದಾರೆ.



