ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ 2ನೇ ಸುತ್ತಿನ ಹೋರಾಟ ಶುರುವಾಗಿದೆ. ಇತ್ತೀಚೆಗಷ್ಟೇ ರಾಜ್ಯ ಬಿಜೆಪಿಯ ಬಾಕಿ ಜಿಲ್ಲಾಧ್ಯಕ್ಷರ ನೇಮಕ ಆಗಿತ್ತು. ಇದರೊಂದಿಗೆ ಎಲ್ಲವೂ ಸುಗಮವಾಗಿ ಸಾಗುತ್ತಿದೆ ಎಂಬ ಭಾವನೆ ಬಂದಿತ್ತು. ಆದರೆ.. ಅತೃಪ್ತರು ತಣ್ಣಗಾಗಿಲ್ಲ. ರೆಬಲ್ಸ್ ಟೀಂನ ಒಂದು ಬಣ ಬೆಂಗಳೂರಿನಲ್ಲಿ, ಮತ್ತೊಂದು ಬಣ ದೆಹಲಿಯಲ್ಲಿ ಆಕ್ಟಿವ್ ಆಗಿದೆ. ಆ ಬಣಗಳಿಗೆ ಬೆಂಗಳೂರಿನ ಸ್ಟಾರ್ ಹೋಟೆಲ್ ಒಂದರಿಂದ ಸಿಗ್ನಲ್ಲುಗಳು ಹೋಗುತ್ತಿವೆ. ಇದರಲ್ಲಿ ಹೋಟೆಲ್ಲಿನ ಪಾತ್ರವೇನೂ ಇಲ್ಲ. ಆದರೆ, ಶುರುವಾಗಿರುವುದು ಹೋಟೆಲ್ಲೊಂದರಲ್ಲಿ ನಡೆದ ಸಭೆಯಿಂದ.
ಇತ್ತೀಚೆಗೆ ಫ್ರೀಡಮ್ ಪಾರ್ಕ್ನಲ್ಲಿ ಪ್ರತಿಭಟನೆ ಮುಗಿಸಿದ ವಿಪಕ್ಷ ನಾಯಕ ಆರ್ ಅಶೋಕ್, ಸುನೀಲ್ ಕುಮಾರ್, ಮಾಜಿ ಸಿಎಂ ಬೊಮ್ಮಾಯಿ, ಮತ್ತು ಸಿಸಿ ಪಾಟೀಲ್, ದೊಡ್ಡ ಹೋಟೆಲ್ಲೊಂದರಲ್ಲಿ ಊಟ ಮಾಡಿದ್ದರು. ಅದು ಕೇವಲ ಊಟವಷ್ಟೇ ಆಗಿರಲಿಲ್ಲವಂತೆ. ಹಾಗೆ ಊಟಕ್ಕೆ ಸೇರಿದ್ದ ನಾಯಕರಲ್ಲಿ ಆರ್. ಅಶೋಕ್, ಮಾರನೇ ದಿನ ನಡೆದ ಬಿಜೆಪಿ ಜಿಲ್ಲಾಧ್ಯಕ್ಷರ ಸಭೆಗೆ ಗೈರು ಹಾಜರ್ ಆಗಿದ್ದು ಎಲ್ಲರ ಹುಬ್ಬೇರಿಸಿತ್ತು. ಅಶೋಕ್ ಕೊಟ್ಟಿದ್ದು ʻಕ್ಷೇತ್ರದಲ್ಲಿ ಕಾರ್ಯಕರ್ತರೊಬ್ಬರು ನಿಧನರಾಗಿದ್ದಾರೆʼ ಎಂಬ ಕಾರಣ. ಅದಾದ ಮೇಲೆ ಕೋರ್ ಕಮಿಟಿ ಸಭೆಗೂ ಆಬ್ಸೆಂಟ್ ಆಗಿದ್ದ ಅಶೋಕ್, ಜ್ವರ ಬಂದಿತ್ತು ಎಂದು ಕಾರಣ ನೀಡಿದ್ದರು. ಅದಕ್ಕೆಲ್ಲ ಕಾರಣ ಹೋಟೆಲ್ಲಿನ ಊಟ ಎಂಬ ಕಥೆಯೂ ಇದೆ.
ಇಷ್ಟೆಲ್ಲ ಆದ ಮೇಲೆ ಯತ್ನಾಳ್ ಉಚ್ಚಾಟನೆ ನಂತರ ಸೈಲೆಂಟ್ ಆಗಿದ್ದ ರೆಬೆಲ್ಸ್ ಟೀಮ್’ನ ಶಾಸಕ ಬಿಪಿ ಹರೀಶ್, ಮಾಜಿ ಸಂಸದ ಸಿದ್ದೇಶ್ವರ್ ಮತ್ತು ಕೆಲ ಮಾಜಿ ಪದಾಧಿಕಾರಿಗಳು ಅಶೋಕ್, ಸಿಟಿ ರವಿ, ಗೋವಿಂದ ಕಾರಜೋಳರನ್ನು ಭೇಟಿ ಮಾಡಿದ್ದಾರೆ. ವಿಜಯೇಂದ್ರ ಬದಲಾಗಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ಮೂಲ ಎಲ್ಲಿ ಎಂದು ನೋಡ ಹೋದರೆ ಬಸವರಾಜ ಬೊಮ್ಮಾಯಿ ಹೆಸರು ಕೇಳಿ ಬರುತ್ತಿದೆ. ರಬೆಲ್ಸ್ ಬೇಡಿಕೆಯನ್ನು ಕೇಂದ್ರ ನಾಯಕರ ಗಮನಕ್ಕೆ ತರುವ ಭರವಸೆಯನ್ನು ಬಸವರಾಜ್ ಬೊಮ್ಮಾಯಿ ಹೊತ್ತಿದ್ದಾರಂತೆ.
ಹೀಗಾಗಿ ಈಗ ಪ್ರಹ್ಲಾದ್ ಜೋಷಿ ಎಂಟ್ರಿ ಆಗಿದೆ. ಸಿದ್ದೇಶ್ವರ್ ಹಾಗೂ ಹರೀಶ್ ಅವರು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎನ್ನುತ್ತಿರುವ ಮುಖಂಡರು ಮಾತುಕತೆ ಹಂತಕ್ಕೆ ಬಂದು ನಿಂತಿದ್ದಾರೆ. ಈ ಮಾತುಕತೆ ವೇಳೆ ದಾವಣಗೆರೆ ಜಿಲ್ಲಾಧ್ಯಕ್ಷರನ್ನು ಬದಲಾಯಿಸಿ ತಾವು ಹೇಳಿದವರನ್ನು ನೇಮಿಸಬೇಕು. ಜತೆಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಸೋಲಿಗೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರೂ ಕಾರಣಕರ್ತರಾಗಿದ್ದು, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬೇಡಿಕೆಗಳನ್ನು ಆಲಿಸಿದ ರಾಜ್ಯ ನಾಯಕರು ಜಿಲ್ಲಾಧ್ಯಕ್ಷರ ನೇಮಕ ಪ್ರಕ್ರಿಯೆ ಮುಗಿದ ಬಳಿಕ ಬದಲಾವಣೆ ಮಾಡುವುದು ಸರಿಯಲ್ಲ. ಇತರ ಪದಾಧಿಕಾರಿಗಳ ನೇಮಕದಲ್ಲಿ ನಿಮ್ಮ ಅಭಿಪ್ರಾಯ ಪರಿಗಣಿಸಲಾಗುವುದು ಎಂಬ ಮಾತು ಹೇಳಿದ್ದಾರೆ.



