ದರ್ಶನ್ ಅವರು ಇತ್ತೀಚೆಗೆ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದಾಗಿನಿಂದ ದರ್ಶನ್ ಅಭಿಮಾನಿಗಳಷ್ಟು ಟೀಕೆಗೆ ಗುರಿಯಾದವರು ಇನ್ನೊಬ್ಬರಿಲ್ಲ ಎನ್ನಬಹುದು. ದರ್ಶನ್ ಅವರ ವೈಯಕ್ತಿಕ ವಿಷಯಗಳು, ಕೆಲವು ದರ್ಶನ್ ಅಭಿಮಾನಿಗಳ ಅತಿರೇಕದ ವರ್ತನೆಗಳು.. ಇಡೀ ದರ್ಶನ್ ಅಭಿಮಾನಿಗಳನ್ನನೇ ಕಟಕಟೆಗೆ ನಿಲ್ಲಿಸಿದ್ದು ಸುಳ್ಳಲ್ಲ. ಈಗ ಇಷ್ಟು ದಿನಗಳ ನಂತರ ದರ್ಶನ್ ಅಭಿಮಾನಿಗಳ ಮುಖದಲ್ಲಿ ಒಂದು ಖುಷಿ ಕಾಣಿಸಿದೆ. ಅದು ದರ್ಶನ್ ಅವರು ತಮ್ಮ ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡಿರುವ ಒಂದು ವಿಡಿಯೋ.
ತಮ್ಮ ದಿನಕರ್ ತೂಗುದೀಪ ನಿರ್ದೇಶನದ ರಾಯಲ್ ಚಿತ್ರಕ್ಕೆ ದರ್ಶನ್ ಅವರ ಇಡೀ ಕುಟುಂಬ ಸಪೋರ್ಟ್ ಕೊಟ್ಟಿದೆ. ‘ರಾಯಲ್’ ಸಿನಿಮಾವನ್ನು ಇಡೀ ಕುಟುಂಬ ನೋಡಿ ಮೆಚ್ಚಿಕೊಂಡಿದೆ. ಜನವರಿ 24ರಂದು ‘ರಾಯಲ್’ ಸಿನಿಮಾ ತೆರೆಗೆ ಬರುತ್ತಿದೆ. ವಿರಾಟ್, ಸಂಜನಾ ಆನಂದ್ ಪ್ರಧಾನ ಪಾತ್ರದಲ್ಲಿರುವ ಚಿತ್ರಕ್ಕೆ ಜಯಣ್ಣ-ಭೋಗೇಂದ್ರ ಪ್ರೊಡ್ಯೂಸರ್ಸ್. ಈ ಚಿತ್ರದ ಪ್ರಚಾರದಲ್ಲಿ ದರ್ಶನ್ ಕೂಡಾ ಪಾಲ್ಗೊಂಡಿದ್ದಾರೆ. ದರ್ಶನ್ ಮತ್ತವರ ಕುಟುಂಬಕ್ಕಾಗಿಯೇ ರಾಯಲ್ ಚಿತ್ರದ ವಿಶೇಷ ಶೋವನ್ನು ಏರ್ಪಡಿಸಲಾಗಿತ್ತು. ದರ್ಶನ್ ಜೊತೆಗೆ ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ ತೂಗುದೀಪ ಶ್ರೀನಿವಾಸ್, ಅಕ್ಕ ಮತ್ತು ಬಾವ ಆಗಮಿಸಿದ್ದರು. ದಿನಕರ್ ತೂಗುದೀಪ ಅವರ ಪತ್ನಿ ಮತ್ತು ಮಕ್ಕಳು ಕೂಡ ‘ರಾಯಲ್’ ಸಿನಿಮಾವನ್ನು ನೋಡಿದರು. ದರ್ಶನ್ ಆಭಿಮಾನಿಗಳ ಖುಷಿಗೆ ಕಾರಣವಾಗಿರುವುದು ಇದೇ ವಿಡಿಯೋ.
‘ರಾಯಲ್’ ಸಿನಿಮಾದ ನೆಪದಲ್ಲಿ ಬಹಳ ಸಮಯದ ನಂತರ ದರ್ಶನ್ ಅವರು ಇಡೀ ಕುಟುಂಬದ ಜೊತೆಗೆ ಕಾಣಿಸಿಕೊಂಡಿದ್ದಾರೆ. ಫ್ಯಾನ್ಸ್ ಅಂತೂ, “ನಮ್ ಬಾಸ್ ಫ್ಯಾಮಿಲಿ ಜೊತೆಗೆ ಹೀಗೆ ಇರಲಿ, ಈ ಕುಟುಂಬದ ಮೇಲೆ ಯಾರ ಕೆಟ್ಟ ಕಣ್ಣು ಬೀಳದೇ ಇರಲಿ” ಎಂದು ಹಾರೈಸುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿದ್ದ ದರ್ಶನ್ ಅವರು ಸದ್ಯ ಜಾಮೀನು ಪಡೆದು ಹೊರಬಂದಿದ್ದಾರೆ.
ಕಿಸ್ ಮೂಲಕ ಕನ್ನಡ ಚಿತ್ರರಂಕ್ಕೆ ಎಂಟ್ರಿ ಕೊಟ್ಟ ವಿರಾಟ್ ಎದುರು ಸಂಜನಾ ಆನಂದ್ ನಾಯಕಿ. ಚರಣ್ ರಾಜ್ ಎಂ ಆರ್ ಸಂಗೀತ ನಿರ್ದೇಶನವಿರುವ ಚಿತ್ರದಲ್ಲಿ ರಘು ಮುಖರ್ಜಿ, ಛಾಯಾ ಸಿಂಗ್, ಅಚ್ಯುತ್ ಕುಮಾರ್, ರಂಗಾಯಣ ರಘು, ಪ್ರಮೋದ್ ಶೆಟ್ಟಿ, ಲವ್ ಮಾಕ್‌ಟೇಲ್ ಖ್ಯಾತಿಯ ಅಭಿಲಾಷ್ ನಟಿಸಿದ್ದಾರೆ.
ಇನ್ನು ದರ್ಶನ್ ಅವರು ಜೈಲು ಸೇರುವುದಕ್ಕೂ ಮೊದಲು ಅವರ ಜೊತೆಯಲ್ಲಿದ್ದ ಅನೇಕರು ಮಿಸ್ ಆಗಿದ್ದಾರೆ. ಕಾಣಿಸಿಕೊಳ್ಳುತ್ತಿಲ್ಲ. ದರ್ಶನ್ ಅವರು ಕೂಡಾ ತಮ್ಮ ಕೆಲವು ವರ್ತನೆಗಳನ್ನು ಬದಲಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಇದೆ. ಅಣ್ಣನಿಂದ ಅಂತರ ಕಾಯ್ದುಕೊಂಡಿದ್ದ ದಿನಕರ್, ದರ್ಶನ್ ಅವರ ತಾಯಿ ಮೀನಾ ಅವರೂ ಕೂಡಾ ಮಗನಿಗೆ ಬುದ್ದಿ ಹೇಳಿ ಜೊತೆಗಿದ್ದಾರೆ. ಪತ್ನಿ ವಿಜಯಲಕ್ಷಿ ಅವರಂತೂ ದರ್ಶನ್ ಅವರಿಗಾಗಿ ಎಲ್ಲ ಆರೋಪ, ಅವಮಾನ ಎದುರಿಸಿ ನಿಂತಿದ್ದಾರೆ. ಒಟ್ಟಿನಲ್ಲೀಗ ದರ್ಶನ್ ಅವರು ಯಜಮಾನ ಚಿತ್ರದಂತೆಯೇ ಇದ್ಧಾರೆ. ನಿಂತ ನೋಡೋ ಯಜಮಾನ.. ಎನ್ನುತ್ತಿದ್ದಾರೆ ದರ್ಶನ್ ಫ್ಯಾನ್ಸ್.



