ರಾಹುಲ್ ಗಾಂಧಿಯವರಿಗೆ ಪದೇ ಪದೇ ಸಂಕಷ್ಟಗಳು ಎದುರಾಗುತ್ತಿವೆ. ಈ ಬಾರಿ ಅವರ ಒಂದು ಹೇಳಿಕೆ ಹಾಗೂ ಒಂದು ಪೋಸ್ಟ್ ಕಷ್ಟಕ್ಕೆ ತಂದಿಟ್ಟಿದೆ. ಎರಡೂ ಗಂಭೀರ ವಿಷಯಗಳೇ. ಇತ್ತೀಚೆಗೆ ರಾಹುಲ್ ಗಾಂಧಿ ಮತ್ತೆ ಮತ್ತೆ ವಿವಾದಕ್ಕೀಡಾಗುತ್ತಿದ್ಧಾರೆ. ಮೋದಿಯನ್ನು ಪನೌತಿ ಎಂದು ಟೀಕಿಸಿದ್ದು, ಉಪರಾಷ್ಟ್ರಪತಿಯನ್ನು ಲೇವಡಿ ಮಾಡುತ್ತಿದ್ದ ಸಂಸದನನ್ನು ನಗುತ್ತಾ ವಿಡಿಯೋ ಮಾಡಿದ್ದು.. ಹೀಗೆ ಹಲವು ವಿವಾದಗಳಿವೆ. ಅವುಗಳಲ್ಲಿ ಈಗ ಎರಡು ಸೀರಿಯಸ್ಸಾಗಿವೆ.
ಪ್ರಕರಣ ಒಂದು : ಮೋದಿಯನ್ನು ಜೇಬುಗಳ್ಳ ಎಂದಿದ್ದ ಹೇಳಿಕೆ
ನವೆಂಬರ್ 22 ರಂದು ರಾಜಸ್ಥಾನದ ಚುನಾವಣಾ ಪ್ರಚಾರದ ವೇಳೆ ರಾಹುಲ್ ಗಾಂಧಿ, ಪ್ರಧಾನಿ ಮೋದಿ, ಉದ್ಯಮಿ ಗೌತಮ್ ಅದಾನಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಅವರು ಜೇಬುಗಳ್ಳರು. ಒಗ್ಗಟ್ಟಿನಿಂದ ಬಂದು ಜನರ ದರೋಡೆ ಮಾಡುತ್ತಾರೆ ಎಂದಿದ್ದರು. ಜೇಬುಗಳ್ಳರು ಹೆಚ್ಚಾಗಿ 3 ಜನರ ತಂಡ ಹೊಂದಿರುತ್ತಾರೆ. ಮೊದಲನೆಯವ ಜನರ ಗಮನವನ್ನು ಬೆರೆಡೆ ಹರಿಸಲು ನಿರತನಾಗಿದ್ದರೆ ಮತ್ತೊಬ್ಬ ಹಿಂದಿನಿಂದ ಜೇಬುಗಳ್ಳತನ ಮಾಡುತ್ತಾನೆ. ಮತ್ತೊಬ್ಬ ಹೊರಗಿನಿಂದ ಯಾರೂ ಗಮನಿಸುತ್ತಿಲ್ಲವೆಂದು ಖಾತರಿ ಮಾಡಿಕೊಳ್ಳುತ್ತಿರುತ್ತಾನೆ. ಅದೇ ರೀತಿ ಮೋದಿ ಅವರು ಟಿವಿಯಲ್ಲಿ ಜನರನ್ನು ಉದ್ದೇಶಿಸಿ ಅಭಿವೃದ್ಧಿ ಹಾಗೂ ಇತರ ವಿಷಯಗಳಲ್ಲಿ ಪ್ರಚೋದನಾತ್ಮಕವಾಗಿ ಭಾಷಣ ಮಾಡುತ್ತಿರುತ್ತಾರೆ. ಆಗ ಅದಾನಿ ಇನ್ನೊಂದು ಕಡೆಯಿಂದ ಜನರ ಸಂಪತ್ತನ್ನು ಹಗಲುದರೋಡೆ ಮಾಡುತ್ತಿರುತ್ತಾರೆ. ಮತ್ತೊಂದೆಡೆ ಅಮಿತ್ ಶಾ ಕಾವಲುಗಾರನಾಗಿದ್ದು, ಯಾರಾದರೂ ಪ್ರಶ್ನಿಸಲು ಬಂದರೆ ಅವರ ಮೇಲೆ ದೇಶದ್ರೋಹ, ವಂಚನೆ ಮುಂತಾದ ಪ್ರಕರಣ ದಾಖಲಿಸಿ ತೆಪ್ಪಗಾಗಿಸುತ್ತಾರೆ ಎಂದು ಟೀಕಿಸಿದ್ದರು.
ಜೇಬುಗಳ್ಳ ಹೇಳಿಕೆ ಕುರಿತು ದೂರು ದಾಖಲಾಗಿತ್ತು. ಜಸ್ಟೀಸ್ ಮನ್‌ಮೋಹನ್ ನೇತೃತ್ವದ ಪೀಠ ವಿಚಾರಣೆ ನಡೆಸಿತ್ತು. ಆದರೆ ಈ ಕುರಿತು ನೀಡಿರುವ ನೋಟಿಸ್ʻಗೆ ರಾಹುಲ್ ಗಾಂಧಿ ಉತ್ತರ ನೀಡಿಲ್ಲ ಎಂದು ಚುನಾವಣಾ ಆಯೋಗ ಹೈಕೋರ್ಟ್ ಪೀಠದ ಮುಂದೆ ಸ್ಪಷ್ಟಪಡಿಸಿತ್ತು. ಇದೇ ವೇಳೆ ಈ ಪ್ರಕರಣದ ಕುರಿತು ರಾಹುಲ್ ಗಾಂಧಿಯಿಂದ ಹೇಳಿಕೆ ಪಡೆದು 8 ವಾರದೊಳಗೆ ಕ್ರಮ ಕೈಗೊಳ್ಳುವಂತೆ ಕೋರ್ಟ್ ಸೂಚಿಸಿದೆ. ಪ್ರಧಾನಿ ಮೋದಿ ಜೇಬುಗಳ್ಳ ಅನ್ನೋ ರಾಹುಲ್ ಗಾಂಧಿ ಹೇಳಿಕೆ ಉತ್ತಮ ಅಭಿರುಚಿ ಹೊಂದಿದೆ ಹೇಳಿಕೆಯಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಕರಣ ಎರಡು : ಅಪ್ರಾಪ್ತ ಅತ್ಯಾಚಾರ ಸಂತ್ರಸ್ತೆಯ ವಿವರ ಬಹಿರಂಗ ಪಡಿಸಿದ್ದ ರಾಹುಲ್ ಗಾಂಧಿ
2021ರಲ್ಲಿ ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಮಾಡಲಾಗಿತ್ತು. ಯುವತಿಯ ತಂದೆ ಜೊತೆಗಿರುವ ಫೋಟೋವನ್ನು ರಾಹುಲ್ ಗಾಂಧಿ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ್ದರು. ಒಂಬತ್ತು ವರ್ಷದ ದಲಿತ ಬಾಲಕಿ ತನ್ನ ಪೋಷಕರೊಂದಿಗೆ ತನ್ನ ಮಾಜಿ ಫೋಟೋವನ್ನು ಪೋಸ್ಟ್ ಮಾಡಿದ್ದರು. 2021ರ ಆಗಸ್ಟ್ 1ರಂದು ಬಾಲಕಿ ಮೃತಪಟ್ಟಿದ್ದಳು. ಘಟನೆ ನಡೆದಿದ್ದು ದೆಹಲಿಯ ಹೊರಗೆ. ಪಾದ್ರಿಯೊಬ್ಬರ ಮೇಲೆ ಆರೋಪ ಕೇಳಿ ಬಂದಿತ್ತು. ಆದರೆ ಕಾನೂನಿನ ಪ್ರಕಾರ ಅತ್ಯಾಚಾರ ಸಂತ್ರಸ್ತರ ಗುರುತು ಬಹಿರಂಗ ಪಡಿಸುವುದು ಅಪರಾಧ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿ, ಡಿಲೀಟ್ ಮಾಡಿದ್ದ ರಾಹುಲ್ ಗಾಂಧಿ, ಅದು ಭಾರತದಲ್ಲಿ ಮಾತ್ರ ಎಂಬ ವಿಷಯ ಗೊತ್ತಾಗಿ ನ್ಯಾಯಾಲಯ ಸಿಟ್ಟಾಗಿದೆ.
ನ್ಯಾಯಾಲಯದಲ್ಲಿ ಹಾಜರಿದ್ದ ರಾಹುಲ್ ಗಾಂಧಿ ಪರ ವಕೀಲ ತರನ್ನುಮ್ ಚೀಮಾ ಅವರನ್ನು ಪ್ರಶ್ನಿಸಿದ ನ್ಯಾಯಾಲಯ, ‘ನೀವು ಈ ಟ್ವೀಟ್ ಅನ್ನು ಏಕೆ ತೆಗೆದುಹಾಕುತ್ತಿಲ್ಲ? ದಯವಿಟ್ಟು ಈ ಪೋಸ್ಟ್ ಅನ್ನು ತೆಗೆದುಹಾಕಿ ಏಕೆಂದರೆ ಈ ಪೋಸ್ಟ್ ಅನ್ನು ಪ್ರಪಂಚದಾದ್ಯಂತ ತೆಗೆದುಹಾಕಬೇಕು. ದಯವಿಟ್ಟು ಸೂಚನೆಗಳನ್ನು ಅನುಸರಿಸಿ. ಇಲ್ಲದಿದ್ದರೆ ಜಗತ್ತಿನಾದ್ಯಂತ ಮಾಧ್ಯಮಗಳು ಅದನ್ನು ಎತ್ತಿಕೊಳ್ಳುತ್ತವೆ. ಇದನ್ನು ಮಾಡಲು ಸಾಧ್ಯವಿಲ್ಲ, ದಯವಿಟ್ಟು ಅದನ್ನು ತೆಗೆದುಹಾಕಿ ಎಂದು ಹೇಳಿದೆ.



