ವಿಜಯೇಂದ್ರ ಮತ್ತು ಯತ್ನಾಳ್ ನಡುವಿನ ಸಮರಕ್ಕೆ ಬ್ರೇಕ್ ಬೀಳುವ ಯಾವುದೇ ಲಕ್ಷಣಗಳಿಲ್ಲ. ಈ ಬಾರಿಯೂ ಅಷ್ಟೆ, ಎಲ್ಲವನ್ನೂ ಹೈಕಮಾಂಡ್ ಸರಿ ಪಡಿಸಿದ್ದರೆ ಫೆಬ್ರವರಿ 20ರ ನಂತರ ಎಲ್ಲದಕ್ಕೂ ಫುಲ್ ಸ್ಟಾಪ್ ಬೀಳಬೇಕಿತ್ತು. ಹಾಗಾಗಿಲ್ಲ. ಹಾಗಾದರೆ ಹೈಕಮಾಂಡ್ ಕೂಡಾ ಡಬಲ್ ಗೇಮ್ ಆಡ್ತಿದೆಯಾ ಎಂಬುದು ವಿಜಯೇಂದ್ರ ಬೆಂಬಲಿಗರ ಅನುಮಾನ. ಹೀಗಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪರ ವೀರಶೈವ-ಲಿಂಗಾಯತ ಸಮುದಾಯವನ್ನು ಸೆಳೆಯಲು ಅವರ ಬೆಂಬಲಿಗರು ಮುಂದಾಗಿದ್ದು, ಆ ಮೂಲಕ ಅದೇ ಸಮುದಾಯದ ಯತ್ನಾಳ್ ಟೀಂಗೆ ತಿರುಗೇಟು ನೀಡಲು ಸಜ್ಜಾಗಿದ್ದಾರೆ.
ದಾವಣಗೆರೆಯಲ್ಲಿ ಶನಿವಾರ ದಾವಣಗೆರೆ, ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳ ವೀರಶೈವ-ಲಿಂಗಾಯತ ಮಹಾಸಂಗಮದ ಪೂರ್ವ ಸಿದ್ಧತಾ ಸಭೆ ನಡೆದಿದೆ. ಮಾ.4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ವೀರಶೈವ-ಲಿಂಗಾಯತ ಸಮಾಜದ ಬೃಹತ್ ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಸಭೆ ನಡೆದಿರುವುದು ವಿಶೇಷ. ಈ ಸಭೆಯನ್ನು ನಿಲ್ಲಿಸುವಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮನವಿ ಮಾಡಿದ್ದರು. ಆದರೂ ಸಭೆ ನಡೆದಿದೆ ಅನ್ನೋದು ರೇಣುಕಾಚಾರ್ಯ ಮಾತು. ಈ ಮಾತನ್ನು ಎಷ್ಟರಮಟ್ಟಿಗೆ ನಂಬುವುದು ಬಿಡುವುದು ಎನ್ನುವುದು ಅವರವರ ಬೆಂಬಲಿಗರಿಗೆ ಬಿಟ್ಟಿದ್ದು. ಈ ಸಭೆಗೆ ವಿಜಯೇಂದ್ರ ಅವರಷ್ಟೇ ಅಲ್ಲ, ಯಡಿಯೂರಪ್ಪನವರದ್ದೂ ಬೆಂಬಲ ಇದೆ ಎನ್ನುವುದು ಗುಟ್ಟೇನಲ್ಲ. ಆದರೆ ಈ ರೀತಿಯ ಬೇಡ ಎನ್ನುವ ಹೇಳಿಕೆಗಳು ಹೈಕಮಾಂಡ್ ಪ್ರಶ್ನೆ ಮಾಡಿದಾಗ ನೀಡಬಹುದಾದ ಸಬೂಬುಗಳಷ್ಟೇ.
ಇನ್ನು ಸಭೆಯ ವಿವರಗಳಿಗೆ ಬಂದರೆ.. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರವೀಂದ್ರನಾಥ, ಮಾಡಾಳ್ ವಿರುಪಾಕ್ಷಪ್ಪ, ಬಳ್ಳಾರಿ ವಿರುಪಾಕ್ಷಪ್ಪ ಸೇರಿ ವಿಜಯೇಂದ್ರ ಅವರ ಬೆಂಬಲಿಗ ನಾಯಕರು ಪಾಲ್ಗೊಂಡಿದ್ದರು. ಯಡಿಯೂರಪ್ಪ ಹಾಗೂ ವಿಜಯೇಂದ್ರ ಪರ ಬಹಿರಂಗವಾಗಿಯೇ ಈ ಸಭೆ ನಡೆಸಲು ಉದ್ದೇಶಿಸಲಾಗಿತ್ತಾದರೂ, ಪಕ್ಷದ ನಾಯಕರಾರೂ ತಮ್ಮ ಪರ ಬಣ ಸಭೆ ನಡೆಸಬೇಡಿ ಎಂಬ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಸಮುದಾಯದ ಸಭೆಯನ್ನಾಗಿ ಇದನ್ನು ನಡೆಸಲಾಯಿತು. ಸಮುದಾಯ ವಿಜಯೇಂದ್ರ ಪರ ನಿಲ್ಲುವಂತೆ ಸಭೆಯಲ್ಲಿ ಆಗ್ರಹಿಸಲಾಯಿತು.
ರೇಣುಕಾಚಾರ್ಯ ಮಾತನಾಡಿ, ಬೆಂಗಳೂರಿನ ಸಮಾವೇಶದ ಬಗ್ಗೆ ನನಗೆ ಹಲವು ಮಠಾಧೀಶರು ವಾಟ್ಸಪ್ ಕರೆ ಮಾಡಿ, ವಿಜಯೇಂದ್ರ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ, ವಿಜಯೇಂದ್ರ ನನಗೆ ಕರೆ ಮಾಡಿ, ಇಂದು ಸಮಾವೇಶ ಮಾಡಬೇಡಿ ಅಂದಿದ್ದರು. ಆದರೆ, ಇದು ಸಮಾಜದ ಒಗ್ಗಟ್ಟಿಗಾಗಿ, ಸಮಾಜದಲ್ಲಿರುವ ಭಿನ್ನಮತೀಯ ಮನಸ್ಥಿತಿ ಹೊಂದಿದವರಿಗೆ ಎಚ್ಚರಿಕೆ ನೀಡುವ ಸಮಾವೇಶ ಎಂಬುದಾಗಿ ತಿಳಿಸಿ, ಸಭೆ ನಡೆಸುತ್ತಿದ್ದೇವೆ ಎಂದರು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ, ರಾಜ್ಯಾದ್ಯಂತ ಬೇರು ಮಟ್ಟದಿಂದ ಪಕ್ಷ ಸಂಘಟಿಸಿದ ಯಡಿಯೂರಪ್ಪ ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿರುವ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುವ ಮೂಲಕ ವಿರೋಧಿಗಳಿಗೆ ತಕ್ಕ ಸಂದೇಶ ನೀಡಲು ವೀರಶೈವ ಲಿಂಗಾಯತ ಮಹಾಸಂಗಮ ಪೂರ್ವ ಸಿದ್ಧತಾ ಸಭೆ ತೀರ್ಮಾನ ಕೈಗೊಂಡಿದೆ.



