ಮುತ್ತಯ್ಯ ಮುರಳೀಧರನ್ (muttiah muralitharan). ಈ ಆಟಗಾರನ ಹೆಸರು ಕೇಳಿದರೇ ಆಸ್ಟ್ರೆಲಿಯಾ, ಇಂಗ್ಲೆಂಡ್ ಬೌಲರುಗಳು ಹೆದರಿ ನಡುಗುತಿದ್ದರು. ಆತನ ಕೈಯ್ಯಲ್ಲಿ ಬಾಲ್ ಅನ್ನೋದು ಗಿರಗಿರನೆ ತಿರುಗುತ್ತಿತ್ತು. ಯಾವಾಗ ಟರ್ನ್ ತೆಗೆದುಕೊಳ್ಳುತ್ತೋ ಗೊತ್ತಾಗುತ್ತಿರಲಿಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್`ನಲ್ಲಿ 800 ವಿಕೆಟ್ ಕಬಳಿಸಿರುವ ಬೌಲರ್ ಮುತ್ತಯ್ಯ ಮುರಳೀಧರನ್(muttiah muralitharan). 800 ವಿಕೆಟ್ ದಾಖಲೆ ಮಾಡಿರುವುದು ಟೆಸ್ಟ್ ಕ್ರಿಕೆಟ್`ನಲ್ಲಿ. ಏಕದಿನ ಕ್ರಿಕೆಟ್ಟಿನಲ್ಲಿ 534 ವಿಕೆಟ್ ಪಡೆದಿದ್ದಾರೆ. ಅದೂ ವಿಶ್ವದಾಖಲೆಯೇ. ಪ್ರತೀ 22.72 ರನ್ನಿಗೆ ಒಂದು ವಿಕೆಟ್ ಪಡೆದಿರುವ ಮಾರಕ ಬೌಲರ್ ಮುತ್ತಯ್ಯ ಮುರಳೀಧರನ್. ಅವರು ಕ್ರಿಕೆಟ್ಟಿಂದ ನಿವೃತ್ತರಾಗಿಯೇ 13 ವರ್ಷಗಳಾಗಿವೆ. ಈಗ್ಯಾಕೆ ವಿಚಾರ ಅಂದ್ರೆ, ಅವರದ್ದೇ ಲೈಫ್ ಸ್ಟೋರಿ ಆಧರಿಸಿದ 800 ಸಿನಿಮಾ ತಯಾರಾಗಿದೆ. ಟ್ರೇಲರ್ ಕೂಡಾ ರಿಲೀಸ್ ಆಗಿದೆ.
ಮೈದಾನದಲ್ಲಿದ್ದಾಗ ಗಂಭೀರವಾಗಿ, ಬೌಲಿಂಗ್ ಮಾಡುವಾಗ ಭೀಕರವಾಗಿ, ಮೈದಾನದ ಹೊರಗೆ ಕೇವಲ ನಗುಮುಖದಲ್ಲಿ ಕಾಣುವ ಮುರಳಿಧರನ್, ಕ್ರಿಕೆಟರ್ ಆಗುವ ಮುನ್ನ ಹಾಗೂ ಕ್ರಿಕೆಟರ್ ಆದ ಬಳಿಕ ಪಟ್ಟ ಕಷ್ಟಗಳಿಗೆ ಲೆಕ್ಕವೇ ಇಲ್ಲ. ವಿಶ್ವದ ಶ್ರೇಷ್ಠ ಸ್ಪಿನ್ ಬೌಲರ್ ಆದ ಮುರಳಿಧರನ್ರ ಪಯಣ ಈಗ ಸಿನಿಮಾ ಆಗಿದೆ. ಆ ಮೂಲಕ ಕೋಟ್ಯಂತರ ಜನರಲ್ಲಿ ಸ್ಪೂರ್ತಿ ತುಂಬಲು ತಯಾರಾಗಿದೆ. ಗೆಳೆಯನ ಜೀವನ ಆಧರಿಸಿದ ‘800’ ಸಿನಿಮಾ ಟ್ರೇಲರ್ ರಿಲೀಸ್ ಮಾಡಿರುವುದು ವಿಶ್ವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar).
ಈ ವೇಳೆ ಸಹಜವಾಗಿಯೇ ಮುರಳೀಧರನ್ ಅವರಿಗೆ ನಿಮ್ಮ ಬೌಲಿಂಗ್`ನ್ನು ಚೆನ್ನಾಗಿ ರೀಡ್ ಮಾಡುತ್ತಿದ್ದ ಆಟಗಾರ ಯಾರು ಎಂಬ ಪ್ರಶ್ನೆ ಎದುರಾಯಿತು. ಲಾರಾ ನನ್ನ ವಿರುದ್ಧ ಚೆನ್ನಾಗಿ ಆಡಿದ್ದಾರಾದರೂ ಅವರಿಗೆ ನನ್ನನ್ನು ರೀಡ್ ಮಾಡಲು ಆಗಿರಲಿಲ್ಲ. ಇನ್ನು ದ್ರಾವಿಡ್ (Rahul Dravid) ಅದ್ಭುತವಾದ ಬ್ಯಾಟ್ಸ್ಮ್ಯಾನ್ ಆದರೆ ಅವರಿಗೂ ನನ್ನನ್ನು ರೀಡ್ ಮಾಡಲು ಆಗಿರಲಿಲ್ಲ. ಸೆಹ್ವಾಗ್ಗೆ (Veerendra Sehwag) ಸಹ ಆಗಲಿಲ್ಲ. ಆದರೆ ಸಚಿನ್ (Sachin Tendulkar) ಬಹಳ ಚೆನ್ನಾಗಿ ರೀಡ್ ಮಾಡುತ್ತಿದ್ದರು, ಸೀಮ್ ಪೊಸಿಷನ್, ನನ್ನ ಕೈ ಚಲನೆ, ಪಿಚ್ ಎಲ್ಲವನ್ನೂ ರೀಡ್ ಮಾಡಿ ಆಡುತ್ತಿದ್ದರು ಎಂದಿದ್ದಾರೆ ಮುತ್ತಯ್ಯ ಮುರಳೀಧರನ್.
ಮುರಳೀಧರನ್ ಕತೆ, ಕಷ್ಟ ನನಗೆ ಗೊತ್ತು, ಅದು ಎಲ್ಲರಿಗೂ ಗೊತ್ತಾಗಬೇಕು ಎಂದರು ಸಚಿನ್ ತೆಂಡೂಲ್ಕರ್ (Sachin Tendulkar) . ಈ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ, ಎಲ್ಲರೂ ಸ್ಪೂರ್ತಿ ಪಡೆಯುತ್ತಾರೆ ಅನ್ನೋದು ಸಚಿನ್ ತೆಂಡೂಲ್ಕರ್ (Sachin Tendulkar) ಮಾತು. ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ (Sanath Jayasurya) ಕೂಡಾ ಕಾರ್ಯಕ್ರಮದಲ್ಲಿದ್ದರು.
ಮುರಳೀಧರನ್ ಎಂಥಹಾ ದಿಗ್ಗಜ ಆಟಗಾರ ಎಂದು ಹೇಳುತ್ತಾ, ಈ ವರೆಗೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 10,500 ಓವರ್ಗಳನ್ನು ಬೌಲ್ ಮಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸುಮಾರು 10 ಸಾವಿರ, ಅದಕ್ಕೂ ಮುನ್ನ ಸುಮಾರು 15 ಸಾವಿರ ಓವರ್ಗಳನ್ನು ಬೌಲಿಂಗ್ ಮಾಡಿದಬಹುದು ಎಂದು ಸಚಿನ್ (Sachin Tendulkar) ಹೇಳುತ್ತಿದ್ದರೆ, ಪಕ್ಕದಲ್ಲೇ ಇದ್ದ ಸನತ್ ಜಯಸೂರ್ಯ ಒಮ್ಮೆ ಟೆಸ್ಟ್ ಕ್ರಿಕೆಟ್ನ ಒಂದು ದಿನದ 90 ಓವರ್ಗಳಲ್ಲಿ 35 ಓವರ್ಗಳನ್ನು ಮುರಳಿಯೇ ಬೌಲಿಂಗ್ ಮಾಡಿದ್ದರು ಎಂದು ಹೇಳಿ ಕೇಳುತ್ತಿದ್ದವರನ್ನೂ ಅಚ್ಚರಿಗೆ ದೂಡಿದರು.
ಇನ್ನು ಮುತ್ತಯ್ಯ ಮುರಳೀಧರನ್ ಅವರಿಗೆ ಯೂಸಫ್ ಯುಹಾನಾರನ್ನು ಔಟ್ ಮಾಡುವುದು ನನಗೆ ಬಹಳ ಸುಲಭವಾಗಿತ್ತಂತೆ. ನನ್ನನ್ನು ಕಂಡರೆ ಹೆದರುತ್ತಿದ್ದ ತಂಡಗಳೆಂದರೆ ಅದು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಎಂದರು ಮುರಳಿಧರನ್.
ಅಂದಂತೆ ಮುತ್ತಯ್ಯ ಮುರಳೀಧರನ್ ಅವರ ಬೌಲಿಂಗ್`ನಲ್ಲಿ ಸಚಿನ್ ತೆಂಡೂಲ್ಕರ್ (Sachin Tendulkar) 13 ಬಾರಿ ಔಟ್ ಆಗಿದ್ದಾರೆ.



