ಇಂತಹ ಕೆಲಸ ಕನ್ನಡದಲ್ಲಿನ್ನೂ ಶುರುವಾಗಿಲ್ಲ. ಆಂಧ್ರಪ್ರದೇಶದಲ್ಲಿ ಆರಂಭವಾಗಿದೆ. ಸತತವಾಗಿ ಸೋಲುತ್ತಿರುವ ಸಿನಿಮಾಗಳಿಂದ ಅಲ್ಲಿನ ಪ್ರದರ್ಶಕರು ನಷ್ಟ ಅನುಭವಿಸ್ತಿದ್ದಾರೆ. ಸಿನಿಮಾ ವಿತರಕರು, ಪ್ರದರ್ಶಕರು ನಷ್ಟ ಅನುಭವಿಸುತ್ತಿದ್ದು, ಜೂನ್ 1ರಿಂದ ಅಲ್ಲಿನ ಈಸ್ಟ್ ಗೋದಾವರಿ ಭಾಗದ ಪ್ರದರ್ಶಕರು ಚಿತ್ರಮಂದಿರ ಬಂದ್ ಮಾಡುತ್ತಿದ್ದಾರೆ. ಅಂದಹಾಗೆ ಬಂದ್ʻಗೆ ಆಯ್ಕೆ ಮಾಡಿಕೊಂಡಿರುವುದು ಚಿರಂಜೀವಿ, ರವಿತೇಜ, ನಿತಿನ್ ಅವರಂತಹ ಸ್ಟಾರ್ ಸಿನಿಮಾ ರಿಲೀಸ್ ಆಗುವ ದಿನಾಂಕಗಳನ್ನೇ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣವನ್ನು ನಾಲ್ಕು ವಿಭಾಗಗಳನ್ನಾಗಿ ವಿತರಕರು ವಿಂಗಡಿಸಿಕೊಂಡಿದ್ದಾರೆ. ನಿಜಾಮ್, ಸೀಡೆಡ್, ಈಸ್ಟ್ ಗೋಧಾವರಿ, ಆಂಧ್ರ ಹೀಗೆ ಭಾಗಗಳನ್ನಾಗಿ ಮಾಡಲಾಗಿದೆ. ಇತ್ತೀಚೆಗೆ ಈಸ್ಟ್ ಗೋಧಾವರಿಯ ಸಿನಿಮಾ ಪ್ರದರ್ಶಕರು, ಸಿನಿಮಾ ವಿತರಕರೊಟ್ಟಿಗೆ ಸಭೆ ನಡೆಸಿದ್ದು ಈಗ ಚಾಲ್ತಿಯಲ್ಲಿರುವ ಬಾಡಿಗೆ ಪದ್ಧತಿಯನ್ನು ಮುಂದುವರೆಸಬೇಕು ಹಾಗೂ ಬಾಡಿಗೆ ಹೆಚ್ಚು ಮಾಡಬೇಕು ಎಂದು ಡಿಮ್ಯಾಂಡ್ ಇಟ್ಟಿದ್ದಾರೆ. ಇದಕ್ಕೆ ಒಪ್ಪದ ವಿತರಕರು ʻಪ್ರಾಫಿಟ್ ಶೇರ್ʼ ಹಂಚಿಕೆ ಮಾಡಿಕೊಳ್ಳೋಣ ಎಂಬ ವಾದ ಮುಂದಿಟ್ಟಿದ್ದಾರೆ. ಇದಕ್ಕೆ ಒಪ್ಪದ ಈಸ್ಟ್ ಗೋಧಾವರಿ ಸಿನಿಮಾ ಪ್ರದರ್ಶಕರು, ಜೂನ್ 1 ರಿಂದ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.
ಜೂನ್ 1ನ್ನೇ ಆಯ್ಕೆ ಮಾಡಿಕೊಳ್ಳೋದಕ್ಕೆ ಕಾರಣ ಇದೆ. ಜೂನ್ ತಿಂಗಳಲ್ಲಿ ಮೆಗಾ ಸ್ಟಾರ್ ಚಿರಂಜೀವಿ, ಮಾಸ್ ಮಹಾರಾಜ ರವಿತೇಜ, ನಿತಿನ್ ಅಭಿನಯದ ಹೊಸ ಸಿನಿಮಾಗಳು ರಿಲೀಸ್ ಆಗೋದಾಗಿ ಹೇಳಿಕೊಂಡಿವೆ. ಬಿಸಿ ತಟ್ಟಬೇಕು, ಕಬ್ಬಿಣ ಕಾಯಿಸಬೇಕು. ಸಿನಿಮಾ ಇಂಡಸ್ಟ್ರಿಯೂ ಹಾಗೆಯೇ.. ಸ್ಟಾರ್ ಸಿನಿಮಾಗಳಿಗೆ ಶಾಕ್ ಕೊಡದ ಹೊರತು, ಅವರಿಗೆ ಸಮಸ್ಯೆ ಅರ್ಥವಾಗಲ್ಲ ಎನ್ನುವುದು ಈಸ್ಟ್ ಗೋದಾವರಿ ಚಿತ್ರಮಂದಿರ ಮಾಲೀಕರ ವಾದ. ಈಸ್ಟ್ ಗೋದಾವರಿ, ತೆಲುಗು ಚಿತ್ರಗಳ ಅತಿ ದೊಡ್ಡ ಮಾರ್ಕೆಟ್.