ನಟ ಶಿವಣ್ಣ ರೆಗ್ಯುಲರ್ ರಾಜಕೀಯಕ್ಕೆ ಬಂದಾಗಿದೆ. ಒಂದು ಲೆಕ್ಕದಲ್ಲಿ ಈಗ ಕಾಂಗ್ರೆಸ್ ಮುಖಂಡರೇ ಆಗಿರುವ ಶಿವಣ್ಣ ಇದೀಗ ಪೊಲಿಟಿಕಲ್ ಎದುರಾಳಿಗಳಿಗೂ ಉತ್ತರ ಕೊಡ್ತಿದ್ಧಾರೆ. ಸೇಮ್ ರಾಜಕೀಯದ ಬಾಷೆಯಲ್ಲಿಯೇ.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಬ್ಯುಸಿಯಾಗಿರುವ ಶಿವ ರಾಜ್ ಕುಮಾರ್,ರಾಜಕೀಯ ಮಾಡುತ್ತಿದ್ದರೂ.. ಗೀತಾ ಪರ ಪ್ರಚಾರವನ್ನಷ್ಟೇ ಮಾಡ್ತಾ ಇದ್ರು. ಆದರೆ.. ರಾಹುಲ್ ಗಾಂಧಿಯನ್ನು ಹೊಗಳಿದ ಮರುದಿನವೇ.. ಕುಮಾರ್ ಬಂಗಾರಪ್ಪ ಅವರನ್ನು ನೇರಾನೇರ ತರಾಟೆಗೆ ತೆಗೆದುಕೊಂಡಿದ್ದಾರೆ.
ನೀವೇನು ಕಿಸಿಯುತ್ತೀರ ಅಂತ ಹೇಳ ಬೇಕೆ ಹೊರತು, ಇನ್ನೊಬ್ಬರು ಏನು ಕಿಸಿದರು ಅನ್ನೋದು ಬೇಕಾಗಿಲ್ಲ. ನಾನು ಮಾಮೂಲಿ ಮನುಷ್ಯನಾಗಿ ಮಾತಾಡುತ್ತಿದ್ದೇನೆ. ಶಿವರಾಜ್‌ಕುಮಾರ್ ಆಗಿ ಮಾತಾಡುತ್ತಿಲ್ಲ. ಇವತ್ತು ಯಾರ್‍ಯಾರು ಕೇಳಿಸಿಕೊಳ್ಳುತ್ತಾರೋ ಕೇಳಿಸಿಕೊಳ್ಳಲಿ. ಇವತ್ತು ಗೀತಾನ ಗಂಡನಾಗಿ ಮಾತಾಡುತ್ತಿದ್ದೇನೆ ಎಂದಿರುವ ಶಿವಣ್ಣ ನಾನು ಮನೆ ಮಾಡಬೇಕಿರುವುದು ಜನರ ಹೃದಯದಲ್ಲಿ ಎಂದಿದ್ದಾರೆ.
ಮಧು ಬಂಗಾರಪ್ಪ ಹೇಗೋ.. ಹಾಗೆಯೇ ಕುಮಾರ್ ಬಂಗಾರಪ್ಪ ಕೂಡಾ ಶಿವಣ್ಣಗೆ ಭಾವಮೈದುನರಾಗಬೇಕು. ಆದರೆ.. ಬಂಗಾರಪ್ಪ ಕುಟುಂಬದಲ್ಲಿ ಮಧು ಮತ್ತು ಗೀತಾ ಅವರು ಒಂದು ದಿಕ್ಕಿನಲ್ಲಿದ್ದರೆ, ಕುಮಾರ್ ಅವರೇ ಮತ್ತೊಂದು ದಿಕ್ಕು. ಮಧು ಹಾಗೂ ಗೀತಾ ಇಬ್ಬರೂ ಜೆಡಿಎಸ್ಸಿನಲ್ಲಿದ್ದವರು. ಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಕುಮಾರ್, ಕಾಂಗ್ರೆಸ್ಸಿನಲ್ಲಿದ್ದವರು. ಈಗ ಬಿಜೆಪಿಯಲ್ಲಿದ್ದಾರೆ.
ಶಿವಣ್ಣ ಈ ರೀತಿ ರೊಚ್ಚಿಗೇಳುವುದಕ್ಕೆ ಕಾರಣ ಶಿವಮೊಗ್ಗ ಅಖಾಡದಲ್ಲಿ ಕುಮಾರ್ ಬಂಗಾರಪ್ಪ ಗೀತಾ ಅವರ ಬಗ್ಗೆ ಆಡಿದ್ದ ಮಾತುಗಳು. ಚುನಾವಣೆ ಮುಗಿಯುತ್ತಿದ್ದಂತೆ ಗೀತಾ ಶಿವರಾಜ್‌ಕುಮಾರ್ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಅವರಿಗೆ ಶಿವಮೊಗ್ಗದಲ್ಲಿ ಇರೋದಕ್ಕೆ ಒಂದು ಮನೆಯೂ ಇಲ್ಲ. ಇದೆಲ್ಲ ಹಾರಾಟ.. ಓಡಾಟ.. ಎಲ್ಲ ಎಲೆಕ್ಷನ್ ಮುಗಿಯುವವರೆಗೆ ಮಾತ್ರ ಎಂದಿದ್ದರು.
ಅಭ್ಯರ್ಥಿಯಾಗಿರುವಂತಹ ನನ್ನ ತಂಗಿ, ನಮ್ಮ ಭಾವನೇ ಪ್ರಚಾರಕ್ಕೆ ಬಂದಿದ್ದಾರೆ, ಇನ್ನೊಂದು ಕಡೆ ನನ್ನ ತಮ್ಮನೇ ಜಿಲ್ಲಾ ಮಂತ್ರಿಯಾಗಿದ್ದಾರೆ. ನಾನು, ನನ್ನ ತಂಗಿ ಭಾವ ಅನ್ನುವುದನ್ನು ಸ್ಪಷ್ಟವಾಗಿ ಶಿವರಾಜ್ ಕುಮಾರ್, ಗೀತಾಗೆ ಮತ್ತು ಮಧುಗೆ ಹೇಳುತ್ತಾ ಇದ್ದೇನೆ ಎಂದಿದ್ದ ಕುಮಾರ್ ಬಂಗಾರಪ್ಪ, ಅವರು ನನ್ನನ್ನು ಅಣ್ಣ ಅಂತ ಮಾತ್ರ ಒಪ್ಪಿಕೊಳ್ಳುವುದಿಲ್ಲ. ಕುಟುಂಬವನ್ನು ಒಂದುಗೂಡಿಸುವ ಆಲೋಚನೆಯೇ ಅರವಿಗೆ ಇಲ್ಲ. ಶಿವಮೊಗ್ಗದಲ್ಲಿ ನೆಲೆಯೂರುವ ಆಸೆ ಇದ್ದರೆ, ಐದೈದು ವರ್ಷಕ್ಕೆ ಯಾಕೆ ಬರುತ್ತೀರಿ.. ಎಂದೆಲ್ಲ ಪ್ರಶ್ನೆ ಮಾಡಿದ್ದರು.
ಇದಕ್ಕೆಲ್ಲ ಉತ್ತರ ನೀಡಿರುವ ಶಿವಣ್ಣ ಕೆಲಸ ಮಾಡಬೇಕಾದರೆ ಒಳ್ಳೆಯ ಮನಸ್ಸು ಬೇಕು. ಎಲ್ಲಿ ಬೇಕಾದರೂ ಆಕ್ಟ್ ಮಾಡಬಹುದು. ಮಾಡಬೇಕಾದ ಕಡೆ ಮಾಡಿಲ್ಲ. ಇಲ್ಲಿ ಬಂದು ಏನು ಮಾಡಬೇಕಾಗಿಲ್ಲ. ಮಾಡಬೇಕಾದಾಗ ಮಾಡಿದ್ದರೆ ಸೂಪರ್‌ಸ್ಟಾರ್ ಆಗುತ್ತಿದ್ದರು. ರಾಜ್‌ಕುಮಾರ್ ಫ್ಯಾಮಿಲಿಯಿಂದ ಯಾಕೆ ಇಷ್ಟು ಇಷ್ಟ ಪಡುತ್ತಾರೆ ಹೇಳಿ. ನಾನೇ ಇರಬಹುದು. ರಾಘುನೇ ಇರಬಹುದು, ಅಪ್ಪುನೇ ಇರಬಹುದು ಯಾಕೆ ಇಷ್ಟ ಪಡುತ್ತಾರೆ. ಮಾತಾಡಬೇಕಾದರೆ ಯೋಚನೆ ಮಾಡಬೇಕು. ಸುಮ್ಮನೆ ಮಾತಾಡೋದಲ್ಲ ಎಂದು ಗುಡುಗಿದ್ದಾರೆ.
ಶಿವಮೊಗ್ಗ ಗೀತಾ ಅವರಿಗೆ ತವರು ಮನೆ. ತವರು ಮನೆಯಲ್ಲಿ ಒಂದು ಮನೆ ಇರಲ್ವಾ ಎಂದು ಪ್ರಶ್ನಿಸಿದ್ಧಾರೆ ಶಿವ ರಾಜ್ ಕುಮಾರ್.



