ತೆಲಂಗಾಣದಲ್ಲಿ Telangana ಕಾಂಗ್ರೆಸ್ ಹಲವು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೇರುವ ಕನಸು ಕಾಣುತ್ತಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ಸಿಗೆ ಶಕ್ತಿ ತುಂಬಿರುವುದು ಕರ್ನಾಟಕದಲ್ಲಿ ಸಿಕ್ಕಿರುವ ಅತಿ ದೊಡ್ಡ ಗೆಲುವು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ CM siddaramaia̧h DK Shivakumar ಅವರಷ್ಟೇ ಅಲ್ಲ, ತೆಲುಗು ಭಾಷೆಯ ಪರಿಚಯ ಇರುವ ಹಲವು ಶಾಸಕರು, ಮಂತ್ರಿಗಳು ತೆಲಂಗಾಣದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ಧಾರೆ. ಹೀಗಿರುವಾಗಲೇ ತೆಲಂಗಾಣದ ಸಿಎಂ ಕೆ ಚಂದ್ರಶೇಖರ್ ರಾವ್, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಕಾಮಿಡಿ ಪೀಸ್ ಎಂಬ ಅರ್ಥದಲ್ಲಿ ಲೇವಡಿ ಮಾಡಿದ್ದಾರೆ.
ಆಗಿದ್ದೇನು:
ತೆಲಂಗಾಣ ಪ್ರಚಾರಕ್ಕೆ ಹೋಗಿದ್ದಾಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಕರ್ನಾಟಕದಲ್ಲಿ ರೈತರಿಗೆ ೫ ಗಂಟೆ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅದನ್ನೇ ನಾವು ತೆಲಂಗಾಣದಲ್ಲೂ ಮಾಡುತ್ತೇವೆ. ಕಾಂಗ್ರೆಸ್ಸಿಗೆ ಮತ ನೀಡಿ ಎಂದು ಪ್ರಚಾರ ಮಾಡಿದ್ದರು.
ಕೆಸಿಆರ್ ಲೇವಡಿ ಮಾಡಿದ್ದೇಕೆ?
ತೆಲಂಗಾಣದಲ್ಲಿ ೨೪ ಗಂಟೆ ವಿದ್ಯುತ್ ಪೂರೈಕೆ ಇದೆ. ೨೪ ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವ ರಾಜ್ಯದ ರೈತರಿಗೆ ೫ ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಗ್ಯಾರಂಟಿ ಕೊಡುವುದು ಹಾಸ್ಯಾಸ್ಪದವಾಗುವುದಿಲ್ಲವೇ? ಇದನ್ನೇ ಏನು ಕರ್ನಾಟಕದಲ್ಲಿ ಮಾಡಿರೋದು, ನಿಮಗೆ ೫ ಗಂಟೆ ಕರೆಂಟ್ ಕೊಡುವ ಕಾಂಗ್ರೆಸ್ ಬೇಕೋ.. ೨೪ ಗಂಟೆ ವಿದ್ಯುತ್ ಪೂರೈಕೆ ಮಾಡುತ್ತಿರುವ ನಮ್ಮ ಬಿಆರ್ʻಎಸ್ ಪಕ್ಷ ಬೇಕೋ ಎಂದು ನೀವೇ ಆಯ್ಕೆ ಮಾಡಿ ಎಂದಿದ್ದಾರೆ ಕೆಸಿಆರ್.
ಕುಮಾರಸ್ವಾಮಿ ಕೂಡಾ ವಾಗ್ದಾಳಿ :
ನಮ್ಮ ಡೂಪ್ಲಿಕೇಟ್ ಸಿಎಂ ತೆಲಂಗಾಣದಲ್ಲಿ ದಿನಕ್ಕೆ 5 ಗಂಟೆ ಉಚಿತ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದಾರೆ. ಅವರಿಗೆ ಗೊತ್ತಿಲ್ಲದ ವಿಷಯ ಎಂದರೆ, ಕೆಸಿಆರ್ ಅವರು ಈಗಾಗಲೇ ಅಲ್ಲಿ ದಿನಕ್ಕೆ 24 ಗಂಟೆಯೂ ಉಚಿತ ವಿದ್ಯುತ್ ಕೊಡುತ್ತಿದ್ದಾರೆ. 5 ಗಂಟೆ ವಿದ್ಯುತ್ ಕೊಡುವವರಿಗೆ ವೋಟು ಹಾಕಬೇಕಾ? ಅಥವಾ 24 ಗಂಟೆ ವಿದ್ಯುತ್ ಕೊಡುವವರಿಗೆ ವೋಟು ಹಾಕಬೇಕಾ? ಎನ್ನುವುದನ್ನು ತೆಲಂಗಾಣದ ಜನರೇ ತೀರ್ಮಾನ ಮಾಡುತ್ತಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ ಹೆಚ್ ಡಿ ಕುಮಾರಸ್ವಾಮಿ.
ರಾಜ್ಯದ ನಾಯಕರು ತೆಲಂಗಾಣದಲ್ಲಿ 200 ಯುನಿಟ್ ಬಗ್ಗೆ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ಕರ್ನಾಟಕದ ಪರಿಸ್ಥಿತಿ ಏನಿದೆ ಎನ್ನುವುದ ಐದೂ ರಾಜ್ಯಗಳ ಜನರಿಗೆ ಹೇಳಬೇಕಿದೆ. ಕರ್ನಾಟಕ ಈಗ ಕಗ್ಗತ್ತಲ ಕರ್ನಾಟಕ ಆಗಿದೆ. ಫ್ರೀ ವಿದ್ಯುತ್ ಎಂದು ಹೇಳಿ ಏಕಾಏಕಿ ದರ ಏರಿಕೆ ಮಾಡಿದರು. ಕಳೆ ಐದು ತಿಂಗಳಲ್ಲಿ ರಾಜ್ಯ ಕಗ್ಗತ್ತಲಲ್ಲಿದೆ. ಅಧಿಕಾರಿಗಳು, ಸಚಿವರು ಮೊಬೈಲ್ ಲೈಟ್ ಹಾಕಿಕೊಂಡು ಸಭೆ ನಡೆಸಿದ್ದಾರೆ ಎಂದು ಟೀಕಿಸಿದ ಅವರು; ಮೊದಲು “ಮಹಾದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ.., ಕಾಕಾ ಪಾಟೀಲ್ ನಿಂಗೂ ಫ್ರೀ” ಎಂದು ಇವರು ಭಾಷಣ ಮಾಡಿದ್ದರು. ಈಗ ನೋಡಿದರೆ “ಮಹಾದೇವಪ್ಪ ನಿಂಗೂ ಕತ್ತಲು ಫ್ರೀ, ನಂಗೂ ಕತ್ತಲು ಫ್ರೀ.., ಕಾಕಾ ಪಾಟೀಲ್ ನಿಂಗೂ ಕತ್ತಲು ಫ್ರೀ” ಎನ್ನುವಂಥ ದುಸ್ಥಿತಿ ಸೃಷ್ಟಿ ಆಗಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಹೆಚ್‌ಡಿಕೆ.



