ಟೀಂ ಇಂಡಿಯಾಗೆ ಹೋರಾಟದ ಕೆಚ್ಚು ತುಂಬಿದ್ದು ಸೌರವ್ ಗಂಗೂಲಿ. ಟ್ರೋಫಿ ಗೆಲುವಿನ ರುಚಿ ತೋರಿಸಿದ್ದು ಧೋನಿ. ಆಕ್ರೋಶದ ರೊಚ್ಚು ತುಂಬಿದ್ದು ವಿರಾಟ್ ಕೊಹ್ಲಿ. ಹೀಗಿದ್ದರೂ.. ವಿರಾಟ್ ಕೊಹ್ಲಿ ಕ್ಯಾಪ್ಟನ್ ಆಗಿದ್ದಾಗ.. ಭಾರತಕ್ಕೆ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲೋಕೆ ಆಗಲಿಲ್ಲ. ಕ್ಯಾಪ್ಟನ್ಸಿ ಬಿಟ್ಟುಕೊಟ್ಟ ಮೇಲೆ ನಾಯಕನಾದ ರೋಹಿತ್ ಶರ್ಮಾ.. ಬೆನ್ನು ಬೆನ್ನಿಗೆ ಐಸಿಸಿ ಟ್ರೋಫಿ ಗೆಲ್ಲಿಸಿಕೊಟ್ಟರು. ಇದೆಲ್ಲ ಹೇಗೆ ಸಾಧ್ಯವಾಯಿತು ಎಂದರೆ.. ರೋಹಿತ್ ಶರ್ಮಾ. ಇದನ್ನು ಹೇಳಿರೋದು ಖದ್ದು ರಾಹುಲ್ ದ್ರಾವಿಡ್.
ರೋಹಿತ್ ಶರ್ಮಾ ಕ್ಯಾಪ್ಟನ್ ಆದ ಮೇಲೆ ತಂಡದ ಅಪ್ರೋಚ್ ಬದಲಾಯಿತು. ಸ್ವತಃ ರೋಹಿತ್ ಶರ್ಮಾ ಫಲಿತಾಂಶ, ಹೆಸರುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಆಕ್ರಮಣಕಾರಿಯಾಗಿ ಬದಲಾಯಿಸಿಕೊಂಡರು. ಅದು ತಂಡದ ಇತರರ ಮೇಲೂ ಪ್ರಭಾವ ಬೀರಿತು. ರೋಹಿತ್ ಔಟ್ ಆದ ನಂತರ ಬರುವ ಬ್ಯಾಟ್ಸ್‌ಮನ್‌ಗಳಿಗೆ ಆಟಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವುದಕ್ಕೆ ರನ್ ಇರುತ್ತಿತ್ತು. ರನ್ ರೇಟ್ ಕುಸಿಯುತ್ತಿರಲಿಲ್ಲ. ರನ್ ಗಳಿಸಲೇಬೇಕು ಎಂಬ ಒತ್ತಡ ಇರುತ್ತಿರಲಿಲ್ಲ. ಅದಕ್ಕೆ ಕಾರಣವಾಗಿದ್ದು ರೋಹಿತ್ ಶರ್ಮಾರ ಆಕ್ರಮಣಕಾರಿ ಬ್ಯಾಟಿಂಗ್.
ʻʻನಾನು ಕೋಚ್ ಬಂದಾಗಿನಿಂದ, ರೋಹಿತ್ ಜೊತೆಗಿನ ನಮ್ಮ ಹೆಚ್ಚಿನ ಚರ್ಚೆಗಳು ನಾವು ಇನ್ನಷ್ಟು ಆಕ್ರಮಣಕಾರಿ ಕ್ರಿಕೆಟ್ ಆಡಬೇಕು ಎಂಬುದರ ಬಗ್ಗೆಯೇ ಇರುತ್ತಿದ್ದವು. ಆಟ ಹೇಗೆ ಚೇಂಜ್ ಆಗುತ್ತಿದೆ ಎಂದು ಗಮನಿಸಿ ಆ ದಿಕ್ಕಿನಲ್ಲಿಯೇ ಕಂಟಿನ್ಯೂ ಮಾಡಿದೆವು. ತಂಡವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಕೊಂಡೊಯ್ಯಲು, ಆಟವನ್ನು ಇನ್ನಷ್ಟು ಆಕ್ರಮಣಕಾರಿಯಾಗಿ ಆಡುವುದಕ್ಕೆ ರೋಹಿತ್ ಶರ್ಮಾ ಕೊಡುಗೆ ದೊಡ್ಡದು. ಭಾರತದ ಟಿ-20 ಸ್ಟೈಲ್ ಗೇಮ್ ಬದಲಾವಣೆಗೆ ರೋಹಿತ್ ಕಾರಣʼʼ ಎಂದು ಹೇಳಿಕೊಂಡಿರುವ ರಾಹುಲ್ ದ್ರಾವಿಡ್, ರಿಸ್ಕ್ ತೆಗೆದುಕೊಳ್ಳೋದ್ರಲ್ಲಿ ರೋಹಿತ್ ಶರ್ಮಾ ತಾವೇ ಮುಂದಿರುತ್ತಿದ್ದರು ಎಂದಿದ್ದಾರೆ.
ಇದರ ಶ್ರೇಯಸ್ಸು ನಿಮಗೂ ಸಲ್ಲಬೇಕಲ್ಲವೇ.. ಎಂದರೆ.. ರಾಹುಲ್ ದ್ರಾವಿಡ್ ಎಂದಿನಂತೆ ಜಂಟಲ್ ಮ್ಯಾನ್ ಉತ್ತರ ಕೊಟ್ಟಿದ್ದಾರೆ. ʻʻ ನಿಜವಾದ ಶ್ರೇಯಸ್ಸು ಮೈದಾನದಲ್ಲಿ ರಿಸ್ಕ್ ತೆಗೆದುಕೊಳ್ಳುವ ಆಟಗಾರರು ಮತ್ತು ನಾಯಕರಿಗೆ ಸಲ್ಲಬೇಕು. ನನ್ನ ಪಾತ್ರವೇ ಇಲ್ಲ ಎಂದು ಹೇಳೋದಿಲ್ಲ. ಆದರೆ.. ಆಡುವುದು ಆಟಗಾರರು. ಮೈದಾನದಲ್ಲಿ ಪ್ಲಾನ್ ಮಾಡುವುದು ಕ್ಯಾಪ್ಟನ್. ರಿಸ್ಕ್ಕ ತೆಗೆದುಕೊಳ್ಳೋದು ಕ್ಯಾಪ್ಟನ್. ಆಟಗಾರರಿಗೆ ಫೀಲ್ಡಿನಲ್ಲಿ ಧೈರ್ಯ ತುಂಬೋದು ಕ್ಯಾಪ್ಟನ್ʼʼ ಎಂದು ಎಲ್ಲ ಕ್ರೆಡಿಟ್ಟನ್ನೂ ರೋಹಿತ್ ಶರ್ಮಾಗೆ ನೀಡಿದ್ದಾರೆ.
ಏಕದಿನ ವಿಶ್ವಕಪ್ ಫೈನಲ್ ಸೋಲಿನ ಬಳಿಕ ರಾಹುಲ್ ದ್ರಾವಿಡ್, ಕೋಚ್ ಹುದ್ದೆ ಬಿಡಲು ನಿರ್ಧರಿಸಿದ್ದರಂತೆ. ಆಗ ಸ್ವತಃ ರೋಹಿತ್ ಶರ್ಮಾ ಮನವಿ ಮಾಡಿಕೊಂಡು ಕೋಚ್ ಆಗಿ ಮುಂದುವರೆಯುಂತೆ ಕೇಳಿದ್ದರು. ಅದಾದ ನಂತರ ಟಿ-20 ವಿಶ್ವಕಪ್ ಗೆದ್ದಿತ್ತು ಭಾರತ.
ಅಂದಹಾಗೆ ರೋಹಿತ್ ಶರ್ಮಾ ಈಗ ವಿಶ್ವದ ನಂ.1 ಏಕದಿನ ಬ್ಯಾಟ್ಸ್‌ಮನ್. 38 ವಯಸ್ಸು ದಾಟಿದ ಮೇಲೆ ನಂ.1 ಸ್ಥಾನಕ್ಕೆ ಏರಿರುವ ಆಟಗಾರ. ಇದೂ ಒಂದು ದಾಖಲೆಯೇ.



