ಸಂಸತ್ತಿನಲ್ಲಿ ಸ್ಮೋಕ್ ಬಾಂಬ್ ಇಟ್ಟು ಭಯ ಹುಟ್ಟಿಸಿದ್ದು ಒಟ್ಟಾರೆ 6 ಜನ. ಅವರಲ್ಲಿ ಶಿಕ್ಷಕರಾಗಲು ಸಿದ್ಧರಾಗಿದ್ದವರಿದ್ದಾರೆ. ಶಿಕ್ಷಕರೇ ಇದ್ದಾರೆ. ಆಟೋ ಡ್ರೈವರ್, ಕೂಲಿ ಕಾರ್ಮಿಕ ಅಷ್ಟೇ ಯಾಕೆ.. ಒಬ್ಬ ಕಾಲೇಜ್ ಡ್ರಾಪ್ ಔಟ್ ಎಂಜಿನಿಯರ್ ಕೂಡಾ ಇದ್ದಾನೆ. ಇಡೀ ಘಟನೆಯ ಮೂಲಪುರುಷ ಮೈಸೂರಿನವನಿದ್ದಾನಲ್ಲ, ಆತನೇ ಕಾಲೇಜ್ ಡ್ರಾಪ್ ಔಟ್. ಆತ ಎಂಜಿನಿಯರಿಂಗ್ ಕಂಪ್ಲೀಟ್ ಮಾಡಿರಲೇ ಇಲ್ಲ. ಅರ್ಧಕ್ಕೇ ಕಾಲೇಜು ಬಿಟ್ಟು ಅಲ್ಲಂಡೆ ತಿರುಗುತ್ತಿದ್ದ.
ನೂತನ ಸಂಸತ್ ಭವನದೊಳಗೆ ದಾಳಿ ನಡೆಸಲು ಪ್ರಮುಖ ಆರೋಪಿಗಳಾದ ಮನೋರಂಜನ್, ಸಾಗರ್ ಶರ್ಮಾ ಹಾಗೂ ಸಂಚುಕೋರ ಲಲಿತ್ ಝಾ ಒಂದೂವರೆ ವರ್ಷದಿಂದಲೇ ಪ್ಲ್ಯಾನ್ ಮಾಡಿದ್ದರು. ಅಲ್ಲದೇ ಮೈಸೂರಿನಲ್ಲಿ ಒಮ್ಮೆ ಹಾಗೂ ಚಂಡೀಗಢ ವಿಮಾನದ ಬಳಿ ಒಮ್ಮೆ ಸಭೆ ನಡೆಸಿದ್ದರು.ಇದು ಸುಮಾರು ಒಂದೂವರೆ ವರ್ಷದಿಂದಲೂ ನಡೆಯುತ್ತಿದ್ದ ಸಂಚು.
ಸಂಸತ್ತಿನ ಒಳಗೆ ನುಗ್ಗಿ ಕಲರ್ ಬಾಂಬ್ ಹಾಕಿದವನೇ ಸಾಗರ್ ಶರ್ಮಾ. ಪಾಸ್ ಕಲೆಕ್ಟ್ ಮಾಡಿಕೊಂಡಿದ್ದೂ ಈತನೇ. ಆದರೆ ಪಾಸ್ ಪಡೆಯುವುದಕ್ಕೆ ಕಾರಣವಾಗಿದ್ದು ಮನೋರಂಜನ್. ಈತ ಮೈಸೂರಿನವನು. ಸಾಗರ್ ಶರ್ಮಾ, ಮನೋರಂಜನ್, ನೀಲಂ ದೇವಿ, ಅಮೋಲ್ ಶಿಂಧೆ, ಲಲಿತ್ ಝಾ, ವಿಕ್ಕಿ ಎಂಬ ಆರೂ ಆರೋಪಿಗಳು ವಿಭಿನ್ನ ರಾಜ್ಯಗಳಿಂದ ಬಂದವರು. ಇವರು ‘ಭಗತ್ ಸಿಂಗ್ ಫ್ಯಾನ್ಸ್ ಕ್ಲಬ್’ ಎಂಬ ಸೋಷಿಯಲ್ ಮಿಡಿಯಾ ಪೇಜ್ ಮೂಲಕ ಪರಸ್ಪರ ಸಂಪರ್ಕಕ್ಕೆ ಬಂದಿದ್ದರು.
ಮನೋರಂಜನ್ ತಂದೆ ದೇವರಾಜೇ ಗೌಡರ ಪ್ರಕಾರ ಮಗ ಸಿಕ್ಕಾಪಟ್ಟೆ ಓದ್ತಾ ಇದ್ದ. ಅವರಿಗೆ ಮಗ ಕಾಲೇಜು ಬಿಟ್ಟಿದ್ದೂ ಗೊತ್ತಿರಲಿಲ್ಲ. ಈತನಷ್ಟೇ ಅಲ್ಲ, ನೀಲಂ ಕೌರ್ ಎಂಬಾಕೆ ಇದ್ದಾಳಲ್ಲ. ಆಕೆ ಹರಿಯಾಣದಲ್ಲಿ ಶಿಕ್ಷಕ ವೃತ್ತಿಗೆ ನಡೆಸುವ ಪರೀಕ್ಷೆ ಪಾಸ್ ಆಗಿದ್ದವಳು. ಒಬ್ಬೊಬ್ಬರದ್ದೇ ವಿವರ ನೋಡಿದರೆ ಶಾಕ್ ಆಗುವುದು ಖಚಿತ.
ಮನೋರಂಜನ್ : ಈತ ಮೈಸೂರಿನವನು. ಈತನ ಬಳಿ ಸಾವಿರಗಟ್ಟಲೆ ಪುಸ್ತಕಗಳಿದ್ದವು. ಈತ ಭಗತ್ ಸಿಂಗ್, ವಿವೇಕಾನಂದ, ಚೆಗುವೆರಾ ಅವರ ಪುಸ್ತಕಗಳಿಂದ ಪ್ರಭಾವಿತನಾಗಿದ್ದ. ಆದರೆ ಎಂಜಿನಿಯರ್ ಪದವೀಧರನಲ್ಲ. ಡ್ರಾಪ್ ಔಟ್.
ತೋಟ ಇತ್ತು. ಕೆಲಸ ಇತ್ತು. ಆದರೆ ಯಾವ ಕೆಲಸವನ್ನೂ ಮಾಡ್ತಾ ಇರಲಿಲ್ಲ. ಅತ್ತ ವಿದ್ಯೆಯೂ ಇರಲಿಲ್ಲ. ಇತ್ತ ಕೆಲಸವೂ ಇರಲಿಲ್ಲ.
ನೀಲಂ ಕೌರ್ : ಈಕೆ ಶಿಕ್ಷಕಿಯ ಪರೀಕ್ಷೆ ಪಾಸ್ ಆಗಿದ್ದವಳು. ಆದರೆ ಆ ಕೆಲಸ ಪಡೆದುಕೊಂಡಿರಲಿಲ್ಲ. ಈಗ ನಿರುದ್ಯೋಗಿಯ ಹಣೆಪಟ್ಟಿ ಕಟ್ಟಿಕೊಂಡು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಹೋರಾಡುತ್ತಿದ್ದಳು. ಕೃಷಿ ಕಾಯ್ದೆ, ಸಿಎಎ ವಿರೋಧಿ ಹೋರಾಟಗಳಲ್ಲಿ ಭಾಗವಹಿಸಿದ್ದಳು.
ಈಕೆಯ ಎಜುಕೇಷನ್ ನೋಡಿ. ಬಿಎ, ಎಂಎ, ಬಿಇಡಿ, ಎಂಇಡಿ, ಸಿಟಿಇಟಿ, ಎಂ-ಫಿಲ್, ಎನ್‌ಇಟಿ.. ಶಿಕ್ಷಕಿಯಾಗುವ ಹಂತದಿಂದ ಹಿಡಿದು ಪ್ರೊಫೆಸರ್ ಆಗುವವರೆಗೆ ಎಲ್ಲ ಪರೀಕ್ಷೆಗಳನ್ನೂ ಪಾಸ್ ಆಗಿದ್ದ ಈಕೆ, ಉದ್ಯೋಗ ಮಾತ್ರ ಮಾಡ್ತಾ ಇರಲಿಲ್ಲ. ಹರಿಯಾಣದವಳು.
ಅಮೋಲ್ ಶಿಂಧೆ : ಈತನಿಗೆ ಸೈನ್ಯ ಸೇರುವ ಹಂಬಲವಿತ್ತು. ಪೊಲೀಸ್ ಆಗುವ ಕನಸಿತ್ತು. ಆದರೆ ಅರ್ಹತೆ ಗಿಟ್ಟಿಸಲು ವಿಫಲನಾಗಿದ್ದ. ಕೂಲಿ ಕೆಲಸ ಮಾಡುತ್ತಿದ್ದ. ಮಹಾರಾಷ್ಟ್ರದವನು.
ಸಾಗರ್ ಶರ್ಮ : ಈತ ಉತ್ತರ ಪ್ರದೇಶದ ಲಕ್ನೋದವನು. ಇ-ರಿಕ್ಷಾ ಓಡಿಸ್ತಿದ್ದವನು. ಭಗತ್ ಸಿಂಗ್ ಅವರಿಂದ ಪ್ರಭಾವಿತನಾಗಿದ್ದ.
ವಿಕ್ಕಿ ಅಲಿಯಾಸ್ ವಿಕ್ರಂ : ಈತ ಪಾರ್ಲಿಮೆಂಟಿಗೆ ಬಂದಿದ್ದವನಲ್ಲ. ಆದರೆ ಆಶ್ರಯ ಕೊಟ್ಟವರಲ್ಲಿ ಒಬ್ಬ.
ಲಲಿತ್ ಝಾ : ಸದ್ಯಕ್ಕೆ ಇವನೇ ಮಾಸ್ಟರ್ ಮೈಂಡ್. ಬಿಹಾರದವನು. ಕೋಲ್ಕತ್ತಾದಲ್ಲಿದ್ದ. ಈತನ ವಿದ್ಯೆಯೂ ಅಷ್ಟಕ್ಕಷ್ಟೆ.
ಭಗತ್ ಸಿಂಗ್ ಪೇಜ್ ಹೆಸರಲ್ಲಿ ಒಂದುಗೂಡಿದ್ದ ಇವರು, ವಿದ್ಯಾವಂತ ಭಯೋತ್ಪಾದಕರು ಎನ್ನದೆ ವಿಧಿ ಇಲ್ಲ. ಇವರು ಅತ್ತ ವಿವೇಕಾನಂದರನ್ನೂ ಅರ್ಥ ಮಾಡಿಕೊಂಡಿಲ್ಲ. ಭಗತ್ ಸಿಂಗ್ ಅವರನ್ನೂ ತಿಳಿದುಕೊಂಡಿಲ್ಲ. ಕೊನೆಗೆ ಚೆಗುವೆರಾನನ್ನೂ ಓದಿಲ್ಲ. ಇವರಿಗೆ ತಾವು ಓದಿದ್ದು ಅರ್ಥವಾಗಿದ್ದರೆ ಇಂತಹ ದೇಶದ್ರೋಹದ ಕೆಲಸ ಮಾಡುತ್ತಿರಲಿಲ್ಲ. ಅಲ್ಪವಿದ್ಯೆ ಮತ್ತು ದುಷ್ಟ ವಿದ್ಯೆ ಎರಡೂ ಅಪಾಯಕಾರಿ.



