ಮಗ ಸನಾತನ ಧರ್ಮವನ್ನೇ ಸಂಹಾರ ಮಾಡುತ್ತೇನೆ ಎನ್ನುತ್ತಿದ್ದರೆ, ಆತನನ್ನು ಹೆತ್ತ ಅಮ್ಮ ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ. ಇದು ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಅವರ ತಾಯಿಯ ಕಥೆ. : ಸನಾತನ ಧರ್ಮ ನಿರ್ಮೂಲನೆ ಮಾಡಬೇಕೆಂದು ಹೇಳಿಕೆ ನೀಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಪುತ್ರರೂ ಆಗಿರುವ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಇಬ್ಬರೂ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಸ್ಟಾಲಿನ್ ಪತ್ನಿ ಮತ್ತು ಉದಯನಿಧಿ ಅವರ ತಾಯಿ ದುರ್ಗಾ ಹಿಂದೂ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ – ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದಾರೆ. ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ತಮಿಳುನಾಡಿನಲ್ಲಿ ಕೊಲ್ಲೂರು ಮೂಕಾಂಬಿಕೆ
ಕೊಲ್ಲೂರು ಮೂಕಾಂಬಿಕೆಗೆ ಎಲ್ಲ ಕಡೆ ಭಕ್ತರಿದ್ದಾರೆ. ಆದರೆ ತಮಿಳುನಾಡಿನಲ್ಲಿ ಭಕ್ತರ ಸಂಖ್ಯೆ ಸ್ವಲ್ಪ ಹೆಚ್ಚು. ತಮಿಳುನಾಡಿನ ಸಾಕಷ್ಟು ಮಂದಿಯಂತೆ ದುರ್ಗಾ ಅವರು ಕೂಡ ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆ. ದುರ್ಗಾ ಅವರು ತಮ್ಮ ಸ್ನೇಹಿತೆಯರ ಜೊತೆ ದೇಗುಲಗಳನ್ನು ಸುತ್ತುತ್ತಲೇ ಇರುತ್ತಾರೆ. ಈ ಬಾರಿಯೂ ತಮ್ಮ ಕೆಲವು ಸ್ನೇಹಿತೆಯರೊಂದಿಗೆ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ಸನ್ನಿಧಿಯಲ್ಲಿರುವವರಿಗೆ ದುರ್ಗಾ ಅವರ ಪತಿ ಮತ್ತು ಮಗನ ಆಟಾಟೋಪಗಳು ಗೊತ್ತಿಲ್ಲದೆ ಏನಿಲ್ಲ. ಆದರೆ ಟೀಕಿಸಿದವರನ್ನೂ ಆದರಿಸುವುದೇ ಹಿಂದೂ ಧರ್ಮದ ತತ್ವ. ಹೀಗಾಗಿಯೇ ಅವರನ್ನು ದೇವಾಲಯದ ವತಿಯಿಂದ ಬರ ಮಾಡಿಕೊಂಡು ಗೌರವಿಸಲಾಗಿದೆ.
ತಮಿಳುನಾಡು ಸರ್ಕಾರದಲ್ಲಿ ಮಹತ್ವದ ಸ್ಥಾನವನ್ನು ಹೊಂದಿರುವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮದ ಕುರಿತು ನಿರಂತರ ಟೀಕೆಯನ್ನು ಮಾಡುತ್ತಿದ್ದಾರೆ. ಸನಾತನ ಧರ್ಮ, ಸಮಾಜದಲ್ಲಿ ಅಸಮಾನತೆಯನ್ನು ಹುಟ್ಟು ಹಾಕಿದೆ. ಇದು ಕೊರೋನಾ, ಡೆಂಘೀ, ಮಲೇರಿಯಾಕ್ಕೆ ಸಮನಾದುದು. ಇದನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಹೇಳುತ್ತಲೇ ಇರುತ್ತಾರೆ ಸ್ಟಾಲಿನ್ ಮತ್ತು ಅವರ ಮಗ ಉದಯನಿಧಿ.
ಆದರೆ ತಾಯಿಯದ್ದು ಮಾತ್ರ ಬೇರೆಯದೇ ಹಾದಿ. ಕೊಲ್ಲೂರು ಮೂಕಾಂಬಿಕೆಯ ವಿಶೇಷ ಭಕ್ತೆ ಯಾಗಿರುವ ದುರ್ಗಾ (ಶಾಂತಾ) ಸ್ಟಾಲಿನ್, ಮನೆಯವರ ವಿಚಾರಧಾರೆಯ ಹೊರತಾಗಿಯೂ ಅಪ್ಪಟ ಆಸ್ತಿಕರು. ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ವೇಳೆ ಮೂಕಾಂಬಿಕಾ ದೇವಿಗೆ ಚಿನ್ನದ ಕಿರೀಟ ಅರ್ಪಣೆ ಮಾಡಿದ್ದಾರೆ. ದೇಗುಲದ ವತಿಯಿಂದ ತಮಿಳುನಾಡು ಸಿಎಂ ಪತ್ನಿಗೆ ಗೌರವ ಸಲ್ಲಿಸಲಾಗಿದೆ.
ಮೂಕಾಂಬಿಕಾ ದೇವಸ್ಥಾನವು 1200 ವರ್ಷಗಳ ಇತಿಹಾಸ ಹೊಂದಿದೆ. ಮೂಕಾಂಬಿಕಾ ದೇವಿ ಆದಿ ಮಾಯೆಯಾಗಿ ನೆಲೆಯಾಗಿದ್ದಾಳೆ. ದೇವಿಯನ್ನು ವಾಗ್‌ದೇವಥಾ (ಮಾತು ಮತ್ತು ಅಕ್ಷರಗಳ ದೇವತೆ) ಎಂದು ಪೂಜಿಸಲಾಗುತ್ತದೆ. ಪಾರ್ವತಿ ದೇವಿಗೆ ಅರ್ಪಿತವಾದ ಏಕೈಕ ದೇವಾಲಯ ಇದಾಗಿದೆ. ಶಕ್ತಿ ಮತ್ತು ಶಿವನ ಸಮ್ಮಿಲನವಾದ ಜ್ಯೋತಿರ್-ಲಿಂಗ ಇಲ್ಲಿದೆ. ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿ ಈ ಮೂರು ರೂಪದಲ್ಲಿ ದೇವಿಯನ್ನು ಆರಾಧಿಸಲಾಗುತ್ತದೆ. ಇಲ್ಲಿನ ಜ್ಯೋತಿರ್ಲಿಂಗದ ಬಲ ಅರ್ಧವು ಬ್ರಹ್ಮ, ವಿಷ್ಣು ಮತ್ತು ಶಿವನನ್ನು ಪ್ರತಿನಿಧಿಸಿದರೆ ಎಡ ಅರ್ಧವು ಪಾರ್ವತಿ, ಲಕ್ಷ್ಮಿ ಮತ್ತು ಸರಸ್ವತಿಯನ್ನು ಪ್ರತಿನಿಧಿಸುತ್ತದೆ.



