ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ, ಸಚಿವರಾಗಿರುವ ಲಕ್ಷ್ಮೀ ಹೆಬ್ಭಾಳ್ಕರ್ ಅವರ ವಿಶೇಷ ಅಭಿಮಾನ. ಹೀಗಾಗಿಯೇ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯದಲ್ಲಿ ಹೊಗಳುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ. ಈಗ ಅದೇ ಲಕ್ಷ್ಮೀ ಹೆಬ್ಬಾಳ್ಕರ್ ವಿಷಯಕ್ಕೆ ಸಚಿವರಾಗಿರುವ ಸತೀಶ್ ಜಾರಕಿಹೊಳಿ ಮಧ್ಯೆ ಟಾಕ್ ಫೈಟ್ ಕೂಡಾ ಮಾಡ್ಕೊಂಡಿದ್ದಾರೆ. ಆಗಿದ್ದು ಇಷ್ಟೇ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ ಬೆಳಗಾವಿಯಲ್ಲಿ ಕಟ್ಟಿರುವ ಕಾಂಗ್ರೆಸ್ ಪಕ್ಷದ ಕಚೇರಿಯ ಸಂಪೂರ್ಣ ಕ್ರೆಡಿಟ್ʻನ್ನು ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊಟ್ಟರು. ಲಕ್ಷ್ಮೀ ಹೆಬ್ಬಾಳ್ಕರ್ ಸಚಿವರಾದ ಮೇಲೆ ಕಟ್ಟಡ ಕಾಮಗಾರಿ ಪೂರ್ಣವಾಯ್ತು. ಅವರಿಂದಲೇ ಎಲ್ಲ ಎಂಬರ್ಥದಲ್ಲಿ ಮಾತನಾಡಿದರು.
ಇದಕ್ಕೆ ಸತೀಶ್ ಜಾರಕಿಹೊಳಿ ಸ್ಥಳದಲ್ಲಿಯೇ ತಿರುಗಿಬಿದ್ದರು. ಪದೇ ಪದೇ ಕಾಂಗ್ರೆಸ್ ಕಚೇರಿ ಕಟ್ಟಿದ್ದು ಲಕ್ಷ್ಮೀ ಹೆಬ್ಬಾಳ್ಕರ್ ಎಂದು ಹೇಳಬೇಡಿ. ನನ್ನ ಅಣ್ಣ ರಮೇಶ್ ಜಾರಕಿಹೊಳಿ ಕಾಂಗ್ರೆಸ್ಸಿನಲ್ಲಿದ್ದಾಗ ಜಾಗ ಕೊಟ್ಟ. ನಾನು ವೈಯಕ್ತಿಕವಾಗಿ 50 ಲಕ್ಷ ಕೊಟ್ಟಿದ್ದೇನೆ. ಅದರಂತೆಯೇ ಉಳಿದವರೂ ತಮ್ಮ ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಿದ್ದಾರೆ. ಶಾಸಕರು, ಸ್ಥಳೀಯ ಪ್ರತಿನಿಧಿಗಳೂ ಹಣ ಕೊಟ್ಟಿದ್ದಾರೆ. ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮಾತ್ರ ಕ್ರೆಡಿಟ್ ಕೊಡಬೇಡಿ ಎಂದು ವಾದಿಸಿದರು.
ಆದರೆ ಲಕ್ಷ್ಮೀ ಹೆಬ್ಬಾಳ್ಕರ್ ಬಿಡಲಿಲ್ಲ. ಇಷ್ಟು ವರ್ಷ ಜಿಲ್ಲಾ ಉಸ್ತುವಾರಿ ಸಚಿವರು ಇದ್ರು, ಪಕ್ಷಕ್ಕೆ ಸ್ವಂತ ಕಚೇರಿ ನಿರ್ಮಾಣ ಮಾಡಿರಲಿಲ್ಲ. ನಾನು ಸಚಿವೆ ಅದಮೇಲೆ ಸ್ವಂತ ಕಟ್ಟಡ ನಿರ್ಮಾಣ ಮಾಡಿದೆ ಎಂದು ಟಾಂಗ್ ಕೊಟ್ಟರು. ನಾನು ಮೊದಲ ಬಾರಿ ಸಚಿವೆಯಾಗಿ, ಜಿಲ್ಲೆಯಲ್ಲಿ ಕಡಿಮೆ ಅವಧಿಯಲ್ಲೇ ಪಕ್ಷದ ಕಚೇರಿ ನಿರ್ಮಾಣ ಮಾಡಿದೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುಮಾರು 7 ಕೋಟಿ ರೂಪಾಯಿಯಷ್ಟು ಹಣ ಬಾಕಿ ಇತ್ತು. ಅದೆಲ್ಲ ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ತೀರಿಸಿದ್ದೇನೆ. ಕರೆಂಟ್ ಬಿಲ್, ವಾಟರ್ ಬಿಲ್ ಹೀಗೆ ಸಾಕಷ್ಟು ಬಾಕಿ ಇತ್ತು. ಅದೆಲ್ಲವನ್ನೂ ನಾನು ತೀರಿಸಿದ್ದೇನೆ. ಪಕ್ಷ ಇದನ್ನೂ ಗಮನಿಸುತ್ತೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಮಾತಿಗೆ ಸಾಹುಕಾರ್ ಸತೀಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದು, ಜಾಗ ಕೊಟ್ಟಿದ್ದು ನಾವು, ನಂತರ ಪಕ್ಷದ ಕಚೇರಿ ನಿರ್ಮಾಣ ಆಗಿದೆ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಿಎಂ ಡಿಸಿಎಂ ಸದ್ಯ ಪಕ್ಷದ ಕಚೇರಿ ಆಯ್ತಲ್ಲ ಬಿಡಿ ಎಂದು ಇಬ್ಬರ ಮಾತಿಗೆ ಬ್ರೇಕ್ ಹಾಕಿದರು.
ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಸತೀಶ್ ಜಾರಕಿಹೊಳಿ ಮಧ್ಯೆ ಜಟಾಪಟಿ ಇದೇ ಮೊದಲೇನಲ್ಲ. ಇಬ್ಬರೂ ಪರೋಕ್ಷವಾಗಿ ಒಬ್ಬರಿಗೊಬ್ಬರು ಕಾಲೆಳೆಯುತ್ತಲೇ ಇರುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಹೊರಗೆ ಬಹಿರಂಗವಾಗಿ ಬಾಯ್ತುಂಬಾ ಅಣ್ಣಾ ಎಂದೇ ಕರೆಯುತ್ತಾರೆ. ಆದರೆ ರಾಜಕೀಯ ವೇದಿಕೆಗಳಲ್ಲಿ ಸಾಹುಕಾರ್ ಜಾರಕಿಹೊಳಿಗಿಂತ ತಾವೇ ಮೇಲು ಎಂದು ಮೈಲೇಜ್ ತೆಗೆದುಕೊಳ್ಳುತ್ತಾರೆ.
ಅಂದಹಾಗೆ ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ನಡುವಿನ ಕದನಕ್ಕೂ ಕಾರಣ ಇದೇ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಕೊಡುತ್ತಿದ್ದ ವಿಶೇಷ ಪ್ರಾತಿನಿಧ್ಯ. ಈಗ ಸತೀಶ್ ಜಾರಕಿಹೊಳಿ ಕೂಡ ಕೆರಳುವಂತೆ ಮಾಡಿದೆ. ಹಾಗೆ ನೋಡಿದರೆ ಸತೀಶ್ ಜಾರಕಿಹೊಳಿ, ಅಣ್ಣ ರಮೇಶ್ ಜಾರಕಿಹೊಳಿಯವರಂತಲ್ಲ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವವರು. ಬೆಳಗಾವಿ ಕಾಂಗ್ರೆಸ್ಸಿನಲ್ಲಿ ಸಂಥಿಂಗ್ ಈಸ್ ರಾಂಗ್.



